ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ ಸಂಭ್ರಮ; ದೇಶಭಕ್ತಿಯ ವೈಭವ

Last Updated 15 ಆಗಸ್ಟ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಿಗ್ಗೆ ಮೋಡ ಕವಿದ ವಾತಾವರಣ ಮೈನಡುಗಿಸುತ್ತಿದ್ದರೂ ರಾಷ್ಟ್ರಭಕ್ತಿಯ ಪುಳಕ ಮನದೊಳಗೆ ಬೆಚ್ಚನೆ ಭಾವ ಮೂಡಿಸುತ್ತಿತ್ತು. ಧ್ವಜಾರೋಹಣದ ವೇಳೆಗೆ ಬಾನಂಗಳದಿಂದ ಹೆಲಿಕಾಪ್ಟರ್‌ ಸುರಿಸಿದ ಹೂಮಳೆ, ಕವಾಯತು ಹಾಗೂ ಮೈನವಿರೇಳಿಸುವ ಸಾಹನ ಪ್ರದರ್ಶನ ನೆರೆದಿದ್ದ ಜನರನ್ನು ಭಾವಪರವಶಗೊಳಿಸಿದವು.

ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗುರುವಾರ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ
ಚಿತ್ತಾಕರ್ಷಿಸಿದ ದೃಶ್ಯಗಳಿವು. ಇದರ ಜೊತೆಗೆ ದೇಶಭಕ್ತಿ ಗೀತೆಗಳಿಗೆ ಹೆಜ್ಜೆಹಾಕಿದ ವಿವಿಧ ಶಾಲೆಗಳ ಮಕ್ಕಳು ಮನಸೂರೆಗೊಂಡರು.

ಅರಳಿದ ಬಾವುಟ ಸ್ವಚ್ಛಂದವಾಗಿ ಹಾರಾಡುತ್ತಿದ್ದಂತೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿಯಾಯಿತು. ಬಳಿಕತೆರೆದ ಜೀಪಿನಲ್ಲಿ ಸಾಗಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೌರವ ರಕ್ಷೆ ಸ್ವೀಕರಿಸಿದರು. ಮುಖ್ಯಮಂತ್ರಿಯ ಭಾಷಣ ಮುಗಿಯುತ್ತಿದ್ದಂತೆ ಪರೇಡ್ ಕಮಾಂಡರ್ ಎಂ. ಯೋಗೇಶ್ ನೇತೃತ್ವದಲ್ಲಿ 34 ತುಕಡಿಗಳ 1,130 ಮಂದಿ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು.

ಸೇನಾ ಪಡೆಗಳು, ಗಡಿ ಭದ್ರತಾ ಪಡೆ, ಅಗ್ನಿಶಾಮಕದಳ, ಪೊಲೀಸ್, ಗೃಹರಕ್ಷಕ ದಳ, ಪೊಲೀಸ್‌ ಬ್ಯಾಂಡ್‌, ಶ್ವಾನದಳ, ಎನ್‌ಸಿಸಿ, ಎನ್‌ಎಸ್‌ಎಸ್‌ ತುಕಡಿಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡಗಳು ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದವು.

ರಮಣ ಮಹರ್ಷಿ ಅಂಧರ ಶಾಲೆ ಹಾಗೂ ಸಮರ್ಥನಂ ಸಂಸ್ಥೆಯ ಅಂಗವಿಕಲ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ಪೊಲೀಸ್ ಬ್ಯಾಂಡ್‌ನ ಕಲಾವಿದರು ವಾದ್ಯಗಳ ಮೂಲಕ ‘ಸಾರೆ ಜಹಾಂಸೆ ಅಚ್ಛಾ...' ಹಾಡಿಗೆ ಲಯಬದ್ಧವಾಗಿ ಹೆಜ್ಜೆ ಹಾಕಿದರು.

1,250 ಮಕ್ಕಳು ಭಾಗಿ: ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1,250 ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದರು. ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ 650 ಮಕ್ಕಳು ‘ಭಾರತಾಂಬೆಯ ಮಡಿಲಿನ ಮಕ್ಕಳು’ ಗೀತೆಗೆ ನರ್ತಿಸಿದರು. ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 600 ಮಕ್ಕಳು ‘ಜಲಿಯನ್ ವಾಲಾಬಾಗ್ ಹತ್ಯಾಕಾಂಡ–1919’ರ ದೃಶ್ಯಾವಳಿಯನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು. ಈ ಮೂಲಕ ನೆರೆದಿದ್ದವರ ಮೆಚ್ಚುಗೆಗೆ ಪಾತ್ರರಾದರು.

ಮದ್ರಾಸ್‌ ಎಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್‌ನ 26 ಸದಸ್ಯರು ಜಿಮ್ನಾಸ್ಟಿಕ್ ಪ್ರಸ್ತುತಪಡಿಸಿದರು. ಈ ಪ್ರದರ್ಶನ ಅಲ್ಲಿ ನೆರೆದಿದ್ದವರ ಮೈನವಿರೇಳುವಂತೆ ಮಾಡಿತು. ಕೇರಳದಲ್ಲಿ ಹುಟ್ಟಿ ಭಾರತದಾದ್ಯಂತ ಜನಪ್ರಿಯವಾಗಿರುವ ಕಳರಿಪಯಟ್ಟು ಸಮರ ಕಲೆ ಎಲ್ಲರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ತಮಿಳುನಾಡಿನ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನ 13 ಸದಸ್ಯರು ಕಳರಿಪಯಟ್ಟು ಪ್ರದರ್ಶಿಸಿದರು.

ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

ಎಲ್ಲೆಲ್ಲೂ ತಿರಂಗಾ..

ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನರ ಕೈಯಲ್ಲಿ ತ್ರಿವರ್ಣ ಧ್ವಜಗಳುರಾರಾಜಿಸುತ್ತಿದ್ದವು. ಎಲ್ಲ ವಯೋಮಾನದವರೂ 73ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಾಕ್ಷಿಯಾದರು. ಮಕ್ಕಳು ಹಾಗೂ ಯುವಕರುತಮ್ಮ ಮುಖ- ಕೈಗಳ ಮೇಲೆ ಕೇಸರಿ, ಬಿಳಿ, ಹಸಿರು ಬಣ್ಣದ ರಾಷ್ಟ್ರ ಧ್ವಜವನ್ನು ಬರೆಸಿಕೊಂಡು ದೇಶಭಕ್ತಿ ಮೆರೆದರು.

11,450 ಮಂದಿಗೆ ಮೈದಾನದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಯಾವ ಗೇಟಿನಲ್ಲಿ ಪ್ರವೇಶಿಸಬೇಕೆಂದು ತಿಳಿಯದೆ ಗೊಂದಲಕ್ಕೆ ಒಳಗಾದರು.

***
ಪಥ ಸಂಚಲನದಲ್ಲಿ ಪ್ರಥಮ ಬಹುಮಾನ ವಿಜೇತ ತಂಡಗಳು

ಒಂದನೇ ವಿಭಾಗ- ಗಡಿ ಭದ್ರತಾ ಪಡೆ (ಬಿಎಸ್‌ಎಫ್)
ಎರಡನೇ ವಿಭಾಗ- ಕೆಎಸ್‌ಆರ್‌ಟಿಸಿ ಸೆಕ್ಯುರಿಟಿ
ಮೂರನೇ ವಿಭಾಗ- ನಾಗರಿಕ ರಕ್ಷಣಾ ಪಡೆ
ನಾಲ್ಕನೇ ವಿಭಾಗ- ಶ್ರೀ ಚೈತನ್ಯ ಶಾಲೆ

ಬ್ಯಾಂಡ್‌ನಲ್ಲಿ ಬಹುಮಾನ ಪಡೆದ ತಂಡಗಳು
ಪ್ರಥಮ- ಲಿಟ್ಲ್‌ ಫ್ಲವರ್ ಪಬ್ಲಿಕ್ ಶಾಲೆ
ದ್ವಿತೀಯ- ಪೊಲೀಸ್ ಪಬ್ಲಿಕ್ ಶಾಲೆ

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹುಮಾನ ಪಡೆದ ತಂಡಗಳು
ಪ್ರಥಮ- ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜು, ಹೇರೋಹಳ್ಳಿ
ದ್ವಿತೀಯ- ಕರ್ನಾಟಕ ಪಬ್ಲಿಕ್ ಶಾಲೆ, ಉತ್ತರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT