ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕಿಚನ್‌ ಸ್ಥಳಾಂತರ ವಿವಾದ

ಅನಿವಾರ್ಯ– ಸಚಿವ ಸೋಮಣ್ಣ * ಹಣ ಪೋಲು– ಕಾಂಗ್ರೆಸ್‌
Last Updated 18 ಫೆಬ್ರುವರಿ 2020, 21:42 IST
ಅಕ್ಷರ ಗಾತ್ರ

ಬೆಂಗಳೂರು: ನಾಯಂಡಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಯನ್ನು ತೆರವುಗೊಳಿಸಿ ದೀಪಾಂಜಲಿನಗರದಲ್ಲಿ ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿದೆ. ನಿರ್ಮಿಸಿದ ಮೂರೇ ವರ್ಷಗಳಲ್ಲಿ ಅಡುಗೆ ಮನೆಯನ್ನು ಸ್ಥಳಾಂತರಿಸುವ ನಡೆ ವಿವಾದಕ್ಕೆ ಕಾರಣವಾಗಿದೆ.

‘ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ಬಳಿ ಈಗಿರುವ ಜಾಗವು ಅಡುಗೆ ತಯಾರಿಸುವುದಕ್ಕೆ ಪ್ರಶಸ್ತವಾಗಿಲ್ಲ. ಹಾಗಾಗಿ ಅದನ್ನು ಸ್ಥಳಾಂತರ ಮಾಡುವುದು ಅನಿವಾರ್ಯ’ ಎಂದು ವಸತಿ ಸಚಿವ ವಿ.ಸೋಮಣ್ಣ ಸಮರ್ಥಿಸಿಕೊಂಡಿದ್ದಾರೆ.

‘ಅಡುಗೆ ಮನೆಯ ಸುತ್ತಮುತ್ತ ಗಲೀಜು ವಾತಾವರಣವಿದೆ. ಅಲ್ಲಿ ಸದಾ ಬೀದಿನಾಯಿಗಳು ಬೀಡುಬಿಟ್ಟಿರುತ್ತವೆ. ಪಾಲಿಕೆ ಅಧಿಕಾರಿಗಳು ಅಡುಗೆ ಮನೆ ನಿರ್ಮಿಸಲು ಈ ಜಾಗ ಆಯ್ಕೆ ಮಾಡಿಕೊಂಡಿದ್ದೇ ಸರಿಯಲ್ಲ. ಗಬ್ಬುನಾತ ಬೀರುವ ಜಾಗದಲ್ಲಿ ಅಡುಗೆ ತಯಾರಿಸುವುದು ಸೂಕ್ತವಲ್ಲ. ಹಾಗಾಗಿ ಈಗಲಾದರೂ ಅದನ್ನು ಸ್ಥಳಾಂತರ ಮಾಡಿ ಸೂಚಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ ಪೋಲು: ‘ಕ್ಯಾಂಟೀನ್‌ ಸ್ಥಳಾಂತರದಿಂದ ಸರ್ಕಾರದ ಹಣ ಪೋಲಾಗಲಿದೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಆರೋಪಿಸಿದರು.

‘ಈ ಅಡುಗೆ ಮನೆಯಿಂದ ಸುಮಾರು 30 ಕ್ಯಾಂಟೀನ್‌ಗಳಿಗೆ ಸಿದ್ಧ ಆಹಾರ ಪೂರೈಕೆಯಾಗುತ್ತದೆ. ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಮನೆಯನ್ನು ಏಕಾಏಕಿ ತೆರವುಗೊಳಿಸುವುದರಿಂದ ಸರ್ಕಾರದ ಹಣ ವ್ಯರ್ಥವಾಗಲಿದೆ. ಅಡುಗೆ ಮನೆ ಇರುವ ಜಾಗವು ಕರ್ನಾಟಕ ಗೃಹಮಂಡಳಿಗೆ ಸೇರಿದ್ದು ಎಂದು ಈಗ ಹೇಳಲಾಗುತ್ತಿದೆ. ಅಲ್ಲಿ ಅಡುಗೆ ಮನೆ ನಿರ್ಮಿಸಿದ್ದಾದರೂ ಏಕೆ’ ಎಂದು ವಾಜಿದ್‌ ಪ್ರಶ್ನಿಸಿದರು.

‘ಅಡುಗೆ ಮನೆ ಸ್ಥಳಾಂತರಿಸಲು ಎರಡು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ದೀಪಾಂಜಲಿನಗರದ ಬಳಿ ಹೊಸ ಅಡುಗೆ ಮನೆ ಸಿದ್ಧವಾಗಿದೆ. ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಸಮಸ್ಯೆ ಉಂಟಾಗದು’ ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT