ಭಾನುವಾರ, ಜೂನ್ 13, 2021
23 °C
ಇಂದಿರಾ ಕ್ಯಾಂಟೀನ್‌: ಹಸಿವು ನೀಗಿಸಿಕೊಳ್ಳಲು ಹೋದವರಿಗೆ ಮುಜುಗರ

ಉಚಿತ ಆಹಾರ ಪೊಟ್ಟಣ ನೀಡಲು ತೋರಿಸಬೇಕು ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಿಸುವ ಉಚಿತ ಆಹಾರ ಪೊಟ್ಟಣ ಪಡೆಯಲು ಬರುವವರು ಗುರುತಿನ ಚೀಟಿ ತೋರಿಸಬೇಕು ಎಂಬ ನಿಯಮವನ್ನು ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರ ಸೂಚನೆ ಮೇರೆಗೆ ಬಿಬಿಎಂಪಿ ಇತ್ತೀಚೆಗೆ ಕೈಬಿಟ್ಟಿತ್ತು. ಆದರೆ, ಮತ್ತೆ ಕ್ಯಾಂಟೀನ್‌ ಸಿಬ್ಬಂದಿ ಆಹಾರ ಪೊಟ್ಟಣ ಪಡೆಯಲು ಬರುವವರ ಬಳಿ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಇದರಿಂದ ನಿರಾಶ್ರಿತರು ಹಾಗೂ ಗುರುತಿನ ಚೀಟಿ ಇಲ್ಲದವರು ಉಚಿತ ಆಹಾರ ಪೊಟ್ಟಣ ಪಡೆಯಲು ಸಮಸ್ಯೆ ಎದುರಾಗಿದೆ. ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪಡೆದವರ ಪೋಟೊ ಕೂಡಾ ತೆಗೆಯಲಾಗುತ್ತಿದೆ. ಬಿಬಿಎಂಪಿಯ ಈ ನಡೆ ಹಸಿವಿನಿಂದ ಕಂಗೆಟ್ಟು ಆಹಾರ ಪಡೆಯಲು ಬರುವವರಿಗೆ ಮುಜುಗರ ಉಂಟು ಮಾಡುತ್ತಿದೆ.

‘ಬಿಬಿಎಂಪಿ ಉಚಿತವಾಗಿ ಆಹಾರ ವಿತರಿಸುತ್ತಿರುವುದು ಉತ್ತಮ ಕಾರ್ಯ. ಇದರಿಂದ ನಮ್ಮಂಥ ಕಾರ್ಮಿಕರಿಗೆ ತುಂಬಾ ಅನುಕೂಲವಾಗುತ್ತಿದೆ. ನಾವು ಇಲ್ಲಿ ಕೂಲಿ ಕೆಲಸಕ್ಕೆಂದು ಬಂದವರು. ನಮ್ಮಲ್ಲಿ ಗುರುತಿನ ಚೀಟಿ ಇಟ್ಟುಕೊಂಡಿಲ್ಲ. ಊಟ ಪಡೆಯಲು ಹೋದಾಗ ನಿನ್ನೆಯಿಂದ ಗುರುತಿನ ಚೀಟಿ ಕೇಳುತ್ತಿದ್ದಾರೆ. ಗುರುತಿನ ಚೀಟಿ ಇಲ್ಲದಿದ್ದರೆ ಆಹಾರ ನೀಡುವುದಿಲ್ಲ ಎನ್ನುತ್ತಿದ್ದಾರೆ’ ಎಂದು ಕೂಲಿ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೆ ಕೆಲಸ ಇರುತ್ತಿದ್ದರೆ ಖಂಡಿತಾ ನಾವು ಉಚಿತ ಊಟ ಕೇಳುತ್ತಿರಲಿಲ್ಲ. ದುಡ್ಡು ಕೊಟ್ಟೇ ಆಹಾರದ ಪೊಟ್ಟಣ ಪಡೆಯುತ್ತಿದ್ದೆವು. ಊಟ ನೀಡುವಾಗ ಗುರುತಿನ ಚೀಟಿಯನ್ನು ನೆಪವಾಗಿಟ್ಟುಕೊಂಡು ಹಸಿದವರಿಗೆ ಆಹಾರ ನಿರಾಕರಿಸಬಾರದು. ಗುರುತಿನ ಚೀಟಿ ಇಲ್ಲದಿದ್ದರೆ ಆಹಾರದ ಪೊಟ್ಟಣ ಕೊಡುವುದಿಲ್ಲ ಎಂದಾಗ ಮುಜುಗರವಾಗುತ್ತದೆ. ಈ ನಿಯಮ ಕೈಬಿಡಬೇಕು’ ಎಂದು ಅವರು ಒತ್ತಾಯಿಸಿದರು.

‘ಸರ್ಕಾರ ಉಚಿತವಾಗಿ ನೀಡುವ ಊಟಕ್ಕೆ ಲೆಕ್ಕ ಇರುವ ಸಲುವಾಗಿ ಈ ರೀತಿ ಮಾಡುತ್ತಿರಬಹುದು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿರುತ್ತವೆ. ಅವುಗಳಲ್ಲಿ ಆಹಾರ ನೀಡುವ ದೃಶ್ಯ ಸೆರೆಯಾಗುತ್ತದೆ. ಅಧಿಕಾರಿಗಳು ಬೇಕಿದ್ದರೆ ಈ ಸಿ.ಸಿ. ಟಿ.ವಿ ಕ್ಯಾಮೆರಾಗಳ ಮೂಲಕ ಸೆರೆಯಾದ ದೃಶ್ಯ ನೋಡಿ ಈ ಕುರಿತ ಸಂದೇಹ ಬಗೆಹರಿಸಿಕೊಳ್ಳಬಹುದು’ ಎಂದರು.

‘ಉಚಿತವಾಗಿ ಊಟದ ಪೊಟ್ಟಣ ನಿಡಲು ಆರಂಭಿಸಿದ ಮೊದಲ ದಿನ ಗುರುತಿನ ಚೀಟಿ ಪಡೆಯಲು ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು. ನಂತರ ಮುಖ್ಯ ಆಯುಕ್ತರು ಗುರುತಿನ ಚೀಟಿ ಇಲ್ಲದವರಿಗೂ ಆಹಾರ ನೀಡುವಂತೆ ಹೇಳಿದರು. ಈಗ ಮತ್ತೆ ಗುರುತಿನ ಚೀಟಿ ಪಡೆಯುವಂತೆ ಹೇಳುತ್ತಿದ್ದಾರೆ. ಮನೆಯಲ್ಲಿ ಎರಡು ಮೂರು ಮಂದಿ ಇದ್ದರೆ, ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಆಹಾರ ಪೊಟ್ಟಣ ನೀಡುತ್ತಿದ್ದೆವು. ಈಗ ಅದಕ್ಕೆ ಪಡಿತರ ಚೀಟಿಯನ್ನು ತೋರಿಸಿದವರಿಗೆ ಮಾತ್ರ 2–3 ಪೊಟ್ಟಣ ನೀಡಿ ಎನ್ನುತ್ತಿದ್ದಾರೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

–0–

‘ಗುರುತಿನ ಚೀಟಿ ಇಲ್ಲದವರಿಗೆ ಆಹಾರ ನಿರಾಕರಿಸದಿರಿ’

‘ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಪೊಟ್ಟಣ ಪಡೆಯುವವರ ಗುರುತಿನ ದಾಖಲೆ ಪಡೆಯುವಂತೆ ಸೂಚನೆ ನೀಡಿದ್ದು ಆಹಾರ ನೀಡಿದ್ದಕ್ಕೆ ಅಂಕಿ ಅಂಶ ನಿರ್ವಹಣೆ ಸುಲಭವಾಗಲಿ ಎಂಬ ಕಾರಣಕ್ಕೆ ಮಾತ್ರ. ಗುರುತಿನ ಚೀಟಿ ಇಲ್ಲದವರು ಆಹಾರ ಪಡೆಯಲು ಬಂದರೆ ಅವರ ಹೆಸರು ವಿಳಾಸ ಪಡೆದು ಆಹಾರ ನೀಡುವಂತೆ ಸೂಚಿಸಿದ್ದೆವು. ಗುರುತಿನ ಚೀಟಿ ಇಲ್ಲ ಎಂಬ ಕಾರಣಕ್ಕೆ ಆಹಾರ ನೀಡದೇ ಯಾರನ್ನೂ ಹಿಂದಕ್ಕೆ ಕಳುಹಿಸಬಾರದು’ ಎಂದು ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಅವರು ಸ್ಪಷ್ಟಪಡಿಸಿದರು.

‘ಸಂಕಷ್ಟದಲ್ಲಿ ಸಿಲುಕಿರುವವರ ಹಸಿವು ನೀಗಿಸಲು ಉಚಿತ ಆಹಾರದ ಪೊಟ್ಟಣಗಳನ್ನು ನೀಡಲಾಗುತ್ತಿದೆ. ಗುರುತಿನ ದಾಖಲೆ ಇಲ್ಲದವರೂ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಪಡೆಯಬಹುದು’ ಎಂದು ಅವರು ತಿಳಿಸಿದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು