ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಜ್ಯ ಕಳ್ಳರ ಸೆರೆ

ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ, ಲ್ಯಾಪ್‍ಟಾಪ್, ಟಿ.ವಿ ಕಳವು
Last Updated 5 ಫೆಬ್ರುವರಿ 2020, 19:29 IST
ಅಕ್ಷರ ಗಾತ್ರ

ಬೆಂಗಳೂರು: ಮನೆಗಳಿಗೆ ನುಗ್ಗಿ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ, ಅವುಗಳನ್ನು ಗೋವಾದಲ್ಲಿ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದ ನಾಲ್ವರು ಅಂತರರಾಜ್ಯ ಕಳ್ಳರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಗೋವಾದ ರಾಜು ಅಲಿಯಾಸ್ ತಂಗ (35), ಲಗ್ಗೆರೆಯ ಜೀವನ್ (26), ಬೆಳಗಾವಿಯ ಶ್ರೀನಿವಾಸ್ (32) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಕ್ಷ್ಮೀನಾರಾಯಣ ರೆಡ್ಡಿ (30) ಬಂಧಿತರು. ಆರೋಪಿಗಳಿಂದ ₹ 25 ಲಕ್ಷ ಮೌಲ್ಯದ 640 ಗ್ರಾಂ ಚಿನ್ನಾಭರಣ, ₹ 60 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು, ಎರಡು ಕಾರು, ಮೂರು ಎಲ್‍ಇಡಿ ಟಿವಿ, ಎರಡು ಲ್ಯಾಪ್‍ಟಾಪ್ ಮತ್ತು ಕ್ಯಾಮೆರಾಗಳು ಸೇರಿ ಒಟ್ಟು ₹ 43.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ರಾಜು ವಿರುದ್ಧ ಕರ್ನಾಟಕ, ಗೋವಾದಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳವು ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಅನ್ನಪೂರ್ಣೇಶ್ವರಿನಗರ ಠಾಣೆ ಇನ್‌ಸ್ಪೆಕ್ಟರ್ ವಿ.ಟಿ. ಶ್ರೀನಿವಾಸ್ ನೇತೃ
ತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಠಾಣೆ, ಬೆಂಗಳೂರು ನಗರ ವ್ಯಾಪ್ತಿಯ ಬ್ಯಾಡರಹಳ್ಳಿ, ಕೆ.ಆರ್. ಪುರ, ಆಡುಗೋಡಿ ಮತ್ತು ಅನ್ನಪೂರ್ಣೇಶ್ವರಿ ನಗರ ಠಾಣೆಗಳಲ್ಲಿ ದಾಖಲಾಗಿದ್ದ ಎಂಟಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಗೋವಾ, ಮಹಾರಾಷ್ಟ್ರ, ಬೆಳಗಾವಿಯಲ್ಲಿಯೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಇಬ್ಬರು ಅಥವಾ ಮೂವರು ಮನೆಯ ಒಳಗೆ ನುಗ್ಗಿದರೆ, ಮತ್ತೊಬ್ಬ ಹೊರಗಡೆ ನಿಂತು ಯಾರಾದರೂ ನೋಡುತ್ತಿದ್ದಾರೆಯೇ ಎಂದು ಗಮನಿಸುತ್ತಿದ್ದ. ಮನೆಯಲ್ಲಿದ್ದ ಒಡವೆಗಳು, ಲ್ಯಾಪ್‍ಟಾಪ್, ಟಿ.ವಿ ಸೇರಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂದರು.

ಗೋವಾದಲ್ಲಿ ಮೋಜು-ಮಸ್ತಿ!: ಎಲ್ಲಿಯೇ ಕಳವು ಮಾಡಿದರೂ ರಾಜು ಅಲಿಯಾಸ್ ತಂಗನ ಸಲಹೆಯಂತೆ ಗೋವಾದಲ್ಲಿರುವ ಮೂರು ಚಿನ್ನಾಭರಣ ಮಳಿಗೆಗಳಿಗೆ ತೆರಳಿ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಗೋವಾದಲ್ಲೇ ಐಷಾರಾಮಿ ಜೀವನ ನಡೆಸಿ ಮೋಜು-ಮಸ್ತಿಯಲ್ಲಿ ತೊಡಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT