ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿಭವನ ನಿರ್ವಹಣೆಗೆ ಅನುದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವ ಅಹಿಂಸಾ ದಿನಾಚರಣೆ
Published : 2 ಅಕ್ಟೋಬರ್ 2024, 15:53 IST
Last Updated : 2 ಅಕ್ಟೋಬರ್ 2024, 15:53 IST
ಫಾಲೋ ಮಾಡಿ
Comments

ಬೆಂಗಳೂರು: ‘ಜಿಲ್ಲೆಗಳಲ್ಲಿರುವ ಗಾಂಧಿಭವನಗಳ ನಿರ್ಹವಣೆಗೆ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ಗಾಂಧಿ ಜಯಂತಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಅಹಿಂಸಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಆಗ ಇದ್ದ 30 ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಿಸಲು ₹ 90 ಕೋಟಿ ಅನುದಾನ ಬಿಡುಗಡೆ ಮಾಡಿದ್ದೆ. ಹಲವು ಜಿಲ್ಲೆಗಳಲ್ಲಿ ಭವನ ನಿರ್ಮಾಣವಾಗಿದೆ. ಜಾಗದ ಸಮಸ್ಯೆ ಇರುವಲ್ಲಿ ಇನ್ನು ನಿರ್ಮಾಣಗೊಳ್ಳಲಿದೆ. ಅಲ್ಲದೇ ಈಗ ಜಿಲ್ಲೆಗಳ ಸಂಖ್ಯೆ ಹೆಚ್ಚಿದ್ದು ಅಲ್ಲಿಯೂ ಗಾಂಧಿಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಅವೆಲ್ಲ ನಿರ್ವಹಣೆ ಇಲ್ಲದೇ ನಿಷ್ಕ್ರಿಯವಾಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಗಾಂಧೀಜಿ ಸಂಚರಿಸಿದ ಪ್ರದೇಶಗಳಲ್ಲಿ ಸ್ಮಾರಕ ನಿರ್ಮಿಸಲಾಗುವುದು. ಮಹಾತ್ಮ ಗಾಂಧೀಜಿ ಅವರು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನಕ್ಕೆ ನೂರು ವರ್ಷ ತುಂಬಿರುವ ನೆನಪಿಗಾಗಿ ಒಂದು ವರ್ಷ ಶತಾಬ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ ₹ 25 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

‘ಗಾಂಧೀಜಿಯನ್ನು ಜಗತ್ತಿನ ನಾಯಕ ಎಂದು ಗುರುತಿಸುವವರು ವಿಶ್ವದಾದ್ಯಂತ ಇದ್ದಾರೆ. ಗಾಂಧೀಜಿಯ ಫೋಟೊಗೆ ಗುಂಡಿಕ್ಕುವ ಕೀಳು ಮನಸ್ಸಿನ ಜನರು ನಮ್ಮ ದೇಶದಲ್ಲಿದ್ದಾರೆ’ ಎಂದು ವಿಷಾದಿಸಿದರು.

ನಟರಾಜ್‌ ಹುಳಿಯಾರ್‌ ಅವರ ‘ಎಲ್ಲರ ಗಾಂಧೀ’ ಕೃತಿಗೆ ಜಯಶ್ರೀ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿದ್ದರು. ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಅಧಿಕಾರಿ ಪ್ರತಾಪ್‌ ಲಿಂಗಯ್ಯ, ಎನ್‌ಎಸ್‌ಎಸ್‌ ಪ್ರಾದೇಶಿಕ ಕಚೇರಿ ನಿರ್ದೇಶಕ ಕಾರ್ತಿಕೇಯನ್‌, ಗಾಂಧಿ ಸ್ವಾರಕ ಭವನದ ಎಂ.ಸಿ. ನರೇಂದ್ರ, ಎನ್‌.ಆರ್‌. ವಿಶುಕುಮಾರ್, ಜಿ.ಬಿ. ಶಿವರಾಜ್‌ ಭಾಗವಹಿಸಿದ್ದರು.

ಸರಳ ಅಂತರ್ಜಾತಿ ವಿವಾಹ

ಗಾಂಧಿಭವನದ ಸಂಯೋಜಕರಾಗಿರುವ ತನುಜ್‌ ಆರಾಧ್ಯ ಮತ್ತು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಯಶೋದಾ ಅವರು ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಖಾದಿ ಹಾರ ಬದಲಾಯಿಸಿಕೊಂಡು ಸರಳ ವಿವಾಹವಾದರು. ಈ ಅಂತರ್ಜಾತಿ ವಿವಾಹಕ್ಕೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಹರಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT