ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಕಾರ

ಬೆಂಗಳೂರು: ‘ಕಾನೂನು ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸಬೇಕು’ ಎಂದು ಕೋರಿದ್ದ ವಕೀಲರೊಬ್ಬರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
‘ನನ್ನ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ವಕೀಲ ಜೆ. ವಸಂತ್ ಆದಿತ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
‘ಪ್ರಕರಣ ತನಿಖಾ ಹಂತದಲ್ಲಿರುವಾಗ ಸಿಆರ್ಪಿಸಿ ಕಲಂ 482ರ ಅಡಿಯಲ್ಲಿ ಪರಿಹಾರ ನೀಡಲಾಗದು’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಅರ್ಜಿದಾರ ವಕೀಲರನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲಿ’ ಎಂದು ಹೇಳಿದೆ.
ಆರೋಪವೇನು: ‘ಇಂಟರ್ನ್ಶಿಪ್ ಪೂರೈಸಿದ ಬಳಿಕ ಪ್ರಮಾಣಪತ್ರ ನೀಡುವಂತೆ ಕೇಳಿದಾಗ ವಸಂತ್ ಆದಿತ್ಯ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ವಾಟ್ಸ್ ಆ್ಯಪ್ನಲ್ಲೂ ನಿಂದನೀಯ ಸಂದೇಶ ಕಳುಹಿಸಿದ್ದಾರೆ’ ಎಂದು ದೂರುದಾರ ವಿದ್ಯಾರ್ಥಿನಿ ಆರೋಪಿಸಿದ್ದರು. ಈ ಕುರಿತಂತೆ ಹಲಸೂರು ಪೊಲಿಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಕಲಂ 67 ಹಾಗೂ ಐಪಿಸಿ ಕಲಂ 324, 354, 341, 506, 509ರ ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.