ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ..? ಕಹಿ ಘಟನೆ ಹಂಚಿಕೊಂಡ ನಟಿ ಹರ್ಷಿಕಾ

Published 19 ಏಪ್ರಿಲ್ 2024, 7:17 IST
Last Updated 19 ಏಪ್ರಿಲ್ 2024, 7:17 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ನಡೆದ ಒಂದು ಭಯಾನಕ ಅನುಭವವನ್ನು ತಿಳಿಸಲು ನಿರ್ಧರಿಸಿದ್ದೇನೆ’ ಎಂದು ಹೇಳುವ ಮೂಲಕ ಚಂದನವನದ ನಟಿ ಹರ್ಷಿಕಾ ಪೂಣಚ್ಚ ತಮಗಾದ ಕಹಿ ಅನುಭವವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಎರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೂರೆಂಟ್‌ಗೆ ಕುಟುಂಬದೊಂದಿಗೆ ಊಟಕ್ಕೆ ತೆರಳಿದ್ದೆವು. ಊಟ ಮುಗಿಸಿ ಅಲ್ಲಿಂದ ಹೊರಟಾಗ ಕಾರಿನ ಚಾಲಕ ಬದಿಯ ಕಿಟಕಿ ಬಳಿ ಬಂದ ಇಬ್ಬರು ವ್ಯಕ್ತಿಗಳು, ‘ನಿಮ್ಮ ವಾಹನ ತುಂಬಾ ದೊಡ್ಡದಾಗಿದೆ. ಇದು ನಮಗೆ ತಾಕಬಹುದು‘ ಎಂದು ವಾದಿಸಲು ಆರಂಭಿಸಿದರು.

‘ಇನ್ನು ವಾಹನ ಮುಂದಕ್ಕೆ ಚಲಿಸಿಲ್ಲವಲ್ಲ. ಸ್ವಲ್ಪ ಸರಿದುಕೊಳ್ಳಿ ನಾವು ಮುಂದೆ ಸಾಗುತ್ತೇವೆ’ ಎಂದು ನನ್ನ ಪತಿ ಹೇಳಿದರೂ, ಬೇರೆ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅವರು, ಕೆಲವೇ ಕ್ಷಣಗಳಲ್ಲಿ 20ರಿಂದ 30 ಜನರಲ್ಲಿ ಅಲ್ಲಿಗೆ ಕರೆಯಿಸಿದರು. ಇದ್ದಕ್ಕಿದ್ದಂತೆ ಕಾರಿನಲ್ಲಿದ್ದವರ ಕುತ್ತಿಗೆಯಲ್ಲಿರುವ ಚಿನ್ನದ ಸರ ಹಾಗೂ ಬೆಲಬಾಳುವ ವಸ್ತುಗಳನ್ನು ದೋಚಲು ಗುಂಪು ಮುಂದಾಯಿತು. ಇದನ್ನು ಅರಿತ ನನ್ನ ಪತಿ,  ತಕ್ಷಣ ಸರವನ್ನು ತೆಗೆದು ನನಗೆ ಕೊಟ್ಟರು’ ಎಂದು ಘಟನೆ ವಿವರಿಸಿದ್ದಾರೆ. 

‘ಬೆಲೆಬಾಳುವ ವಸ್ತುಗಳು ಸಿಗದು ಎಂದು ಅರಿತ ಆ ಗುಂಪು, ವಾಹನ ಮತ್ತು ನಮ್ಮ ಮೇಲೆ ಹಲ್ಲೆಗೆ ಮುಂದಾಯಿತು. ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಅಲ್ಲದೆ ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಸಮಸ್ಯೆ ಆಗಿತ್ತು. ಅವರು ನೀವು ನಮ್ಮ ಪ್ರದೇಶಕ್ಕೆ ಬಂದು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ’ ಎಂದು ತಾಕೀತು ಮಾಡಿದರು’ ಎಂದಿದ್ದಾರೆ.

‘ನಾವು ಮಾತನಾಡುತ್ತಿದ್ದ ಕನ್ನಡದ ಬಗ್ಗೆ ಅವರಿಗೆ ಸಮಸ್ಯೆ ಇತ್ತು. ‘ಯೇ ಲೋಕಲ್ ಕನ್ನಡ್ ವಾಲಾ ಹೇ’ ಎಂದ ಅವರು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಿರು. ಈ ಕಹಿ ಘಟನೆ ಕುರಿತು ನನ್ನ ಸ್ನೇಹಿತರು, ಕುಟುಂಬ ಹಾಗೂ ಪೊಲೀಸ್ ಇಲಾಖೆಯಲ್ಲಿರುವ ಕೆಲ ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ಈ ವಿಷಯವನ್ನು ಅಲ್ಲಿಗೇ ಬಿಟ್ಟುಬಿಡಲು ಯೋಚಿಸಿದೆ. ಅದರೆ ನನ್ನ ಅನುಭವ ಇತರರಿಗೆ ನೆರವಾಗಬಹುದು ಎಂದು ಯೋಚಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಹರ್ಷಿಕಾ ಹೇಳಿದ್ದಾರೆ.

ಈ ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದಯೇ ಎಂಬುದು ಖಚಿತವಾಗಿಲ್ಲ. ಅವರ ಪ್ರತಿಕ್ರಿಯೆಗೆ ಕರೆ ಮಾಡಿದರೂ, ಹರ್ಷಿಕಾ ಕರೆ ಸ್ವೀಕರಿಸಲಿಲ್ಲ.

‘ಭುವನ್‌ ಮುಖಕ್ಕೆ ಹೊಡೆಯಲು ಮುಂದಾದರು. ಆದರೂ ನಾವು ತಾಳ್ಮೆವಹಿಸಿದೆವು. ಆಗ ಇಬ್ಬರು ಚಿನ್ನದ ಸರ ಕಸಿದುಕೊಳ್ಳಲು ಪ್ರಯತ್ನಿಸಿದರು. ನಾವು ಕನ್ನಡದಲ್ಲಿ ಮಾತನಾಡಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ನಿಮ್ಮ ಕನ್ನಡ ಸ್ಟೈಲ್ ನೀವೇ ಇಟ್ಟುಕೊಳ್ಳಿ ಎಂದು ಬೆದರಿಕೆ ಹಾಕಿದರು’ ಎಂದು ಹೇಳಿದ್ದಾರೆ.

‘ತಕ್ಷಣವೇ ಮುಂದಕ್ಕೆ ಹೋಗಿ ಸ್ಥಳದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದೆವು. ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ನೆರವಿಗೆ ಬರಲಿಲ್ಲ. ಈ ಘಟನೆಯಿಂದ ನಾನು ಸಂಪೂರ್ಣ ಮಾನಸಿಕ ಆಘಾತಕ್ಕೆ ಒಳಗಾಗಿದ್ದೇನೆ’ ಎಂದು ಹೇಳಿದ್ದಾರೆ.

‘ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಜನರೊಂದಿಗೆ ಇಂತಹ ಗಲಾಟೆ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ. ನಾವು ಪಾಕಿಸ್ತಾನ ಅಥವಾ ಅಫ್ಗಾನಿಸ್ತಾನದಲ್ಲಿ ಇದ್ದೇವೆಯೇ? ನಮ್ಮ ಊರಿನಲ್ಲಿ ಕನ್ನಡ ಮಾತನಾಡುವುದೇ ತಪ್ಪಾ’ ಎಂದು ಹರ್ಷಿಕಾ ಪ್ರಶ್ನಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು
ಘಟನೆ ಸಂಬಂಧ ಯಾರೂ ದೂರು ನೀಡಿಲ್ಲ. ದೂರು ಕೊಟ್ಟರೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹರ್ಷಿಕಾ ಪೂಣಚ್ಚ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಮಾಹಿತಿ ಆಧರಿಸಿ ಪೊಲೀಸರು ಅವರನ್ನು ಸಂಪರ್ಕಿಸಿದ್ದರು. ದೂರು ನೀಡಲು ಕೇಳಲಾಯಿತು. ಆದರೆ ಅವರು ಠಾಣೆಗೆ ಬಂದಿಲ್ಲ.– ಕುಲದೀಪ್ ಕುಮಾರ್ ಜೈನ್‌ ಡಿಸಿಪಿ ಪೂರ್ವ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT