ಶನಿವಾರ, ಜನವರಿ 18, 2020
26 °C

ಚಂದ್ರಯಾನ-3, ಗಗನಯಾನಕ್ಕೆ ಸಿದ್ಧತೆ: ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಫಲಗೊಂಡ ಚಂದ್ರಯಾನ–2 ಯೋಜನೆಯನ್ನೇ ಮುಂದುವರಿಸಿ ಯಶಸ್ಸು ಸಾಧಿಸುವುದಕ್ಕಾಗಿ ‘ಚಂದ್ರಯಾನ–3’ ಯೋಜನೆ ರೂಪಿಸಲಾಗುತ್ತಿದ್ದು, ಕೇಂದ್ರದ ಒಪ್ಪಿಗೆ ಸಿಕ್ಕಿದೆ. ಗಗನಯಾನ ಯೋಜನೆಗೆ ನಾಲ್ವರ ಆಯ್ಕೆಯೂ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ಶಿವನ್‌ ಹೇಳಿದರು.

‘ಚಂದ್ರಯಾನ–2’ ಯೋಜನೆಯ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನ ನೆಲಕ್ಕೆ ಅಪ್ಪಳಿಸಿ ನಾಶವಾಗಿದೆ, ಆದರೆ ಆರ್ಬಿಟರ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ‘ಚಂದ್ರಯಾನ–3’ ಯೋಜನೆಯಲ್ಲಿ ಆರ್ಬಿಟರ್‌ ಇರುವುದಿಲ್ಲ. ರಾಕೆಟ್‌ ವೆಚ್ಚ ಸಹಿತ ಬಹುತೇಕ ₹ 600 ಕೋಟಿಯಲ್ಲೇ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಇಳಿಸುವಾಗ ವೇಗ ನಿಯಂತ್ರಣಕ್ಕೆ ಬಾರದ ಕಾರಣ ಕೊನೆಯ ಕ್ಷಣದಲ್ಲಿ ಯೋಜನೆ ವಿಫಲಗೊಂಡಿತ್ತು. ಲ್ಯಾಂಡರ್ ಎಲ್ಲಿ ಬಿದ್ದಿದೆ ಎಂಬುದು ನಮಗೆ ಮರುದಿನವೇ ಗೊತ್ತಾಗಿತ್ತು. ಕಾರ್ಯತಂತ್ರವೊಂದರ ಭಾಗವಾಗಿ ನಾವು ಇದನ್ನು ಬಹಿರಂಗ
ಪಡಿಸಿಲ್ಲ. ಯೋಜನೆ ವಿಫಲವಾಗಲು ಕಾರಣ ಏನು ಎಂಬುದು ಗೊತ್ತಾಗಿದ್ದು, ಅದನ್ನು ಸರಿಪಡಿಸಿಕೊಂಡು ಮುಂದಿನ ಯೋಜನೆಯಲ್ಲೂ ಚಂದ್ರನ ದಕ್ಷಿಣ ಭಾಗದಲ್ಲೇ ಲ್ಯಾಂಡರ್ ಇಳಿಸಲಾಗುವುದು’ ಎಂದರು.

‘ತಮಿಳುನಾಡಿನ ತೂತ್ತುಕುಡಿಯಲ್ಲಿ 2ನೇ ಉಡಾವಣಾ ಕೇಂದ್ರ ಸ್ಥಾಪಿಸಲಾಗುವುದು. ಸಣ್ಣ ಪ್ರಮಾಣದ ರಾಕೆಟ್‌ಗಳ ಉಡಾವಣೆಗೆ ಇದನ್ನು ಆರಂಭದಲ್ಲಿ ಬಳಸಲಾಗುತ್ತದೆ, ಕ್ರಮೇಣ ಅದರ ಸಾಮರ್ಥ್ಯ ವೃದ್ಧಿಸಿ ಬೃಹತ್‌ ರಾಕೆಟ್‌ಗಳ ಉಡಾವಣೆಗೂ ಬಳಸಲಾಗುವುದು’ ಎಂದು ಶಿವನ್‌ ವಿವರಿಸಿದರು.

‘ಸಾಮರ್ಥ್ಯ ವೃದ್ಧಿ ಮತ್ತು ಜನ ಸಮುದಾಯಕ್ಕೆ ತಲುಪುವ ಹಲವು ಕಾರ್ಯಕ್ರಮಗಳನ್ನು ಇಸ್ರೊ ಈ ವರ್ಷವೂ ಮುಂದುವರಿಸಲಿದೆ. ಉಪಗ್ರಹಗಳ ಉಡಾವಣೆಯ ಹಲವು ಯೋಜನೆಗಳು ನಿಗದಿತ ಸಮಯದಲ್ಲೇ ನಡೆಯಲಿವೆ’ ಎಂದರು.

ವೇಗ ತಗ್ಗಿಸಿದ್ದು ಹೆಚ್ಚಾಯಿತು!
ಬೆಂಗಳೂರು:
ಚಂದ್ರಯಾನ–2 ಯೋಜನೆ ಕಳೆದ ಸೆ‍ಪ್ಟೆಂಬರ್ 7ರಂದು ಕೊನೆಯ ಕ್ಷಣದಲ್ಲಿ ವಿಫಲವಾಗಲು ಕಾರಣ ಏನು ಎಂಬುದನ್ನು ಇಸ್ರೊ ಕೊನೆಗೂ ಬಾಯಿ ಬಿಟ್ಟಿದ್ದು, ಕೊನೆಯ ಕ್ಷಣದಲ್ಲಿ ವೇಗ ತಗ್ಗಿಸುವ ಪ್ರಮಾಣದಲ್ಲಿ ವ್ಯತ್ಯಾಸ ಆಗಿದ್ದುದೇ ಚಂದ್ರನ ನೆಲದಲ್ಲಿ ಲ್ಯಾಂಡರ್‌ ಅಪ್ಪಳಿಸುವುದಕ್ಕೆ ಕಾರಣವಾಯಿತು ಎಂದು ಹೇಳಿದೆ.

ಚಂದ್ರಯಾನ–3 ಯೋಜನೆಯನ್ನು ಪ್ರಕಟಿಸುವಾಗ ಚಂದ್ರಯಾನ–2 ಯೋಜನೆಯ ವೈಫಲ್ಯಕ್ಕೆ ಕಾರಣ ತಿಳಿಸುವ ಅನಿವಾರ್ಯತೆ ಎದುರಾದ ಕಾರಣ ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ಈ ವಿಷಯವನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅರೆಮನಸ್ಸಿನಿಂದಲೇ ಹೇಳಿದರು.

‘ನೀವು ಇನ್ನೂ ಕಾರಣ ಕೊಟ್ಟಿಲ್ಲ, ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಈಗಾಗಲೇ ಕಾರಣ ನೀಡಿದ್ದಾರೆ. ವಿಕ್ರಂ ಲ್ಯಾಂಡರ್‌ನ ವೇಗ ಸೆಕೆಂಡಿಗೆ 1,683 ಮೀಟರ್ ಇದ್ದುದನ್ನು ಏಕಾಏಕಿ ಸೆಕೆಂಡಿಗೆ 146 ಮೀಟರ್‌ಗೆ ತಗ್ಗಿಸಿದ್ದರಿಂದಲೇ ಚಂದ್ರನ ನೆಲದಿಂದ 500 ಮೀಟರ್‌ ಎತ್ತರದಿಂದ ಲ್ಯಾಂಡರ್‌ ಅಪ್ಪಳಿಸುವಂತಾಯಿತು ಎಂದು ಹೇಳಿದ್ದಾರೆ, ನೀವು ಇನ್ನೂ ಬಚ್ಚಿಡುವುದಕ್ಕೆ ಏನಿದೆ’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗಲಷ್ಟೇ ಶಿವನ್ ಅವರು ಇದನ್ನು ಹೌದು ಎಂದರು.

‘ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ವೇಗವನ್ನು ತಗ್ಗಿಸಿದ್ದರಿಂದ ಲ್ಯಾಂಡರ್‌ ನೆಲಕ್ಕೆ ಅಪ್ಪಳಿಸುವಂತಾಯಿತು. ಅದೆಲ್ಲವು ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆಯಲ್ಲಿತ್ತು. ಕೊನೆಯಲ್ಲಿ ಸಂವಹನ ವ್ಯವಸ್ಥೆಯೂ ಕೈಕೊಟ್ಟಿತ್ತು. ನಿಯಂತ್ರಣ ವ್ಯವಸ್ಥೆಗೆ ಲ್ಯಾಂಡರ್‌ನ ತಗ್ಗಿದ ವೇಗವನ್ನು ನಿಭಾಯಿಸುವುದು ಸಾಧ್ಯವಾಗಲಿಲ್ಲ’ ಎಂದು ಶಿವನ್‌ ವಿವರಿಸಿದರು.

ವಿಕ್ರಂ ಲ್ಯಾಂಡರ್‌ ಎಲ್ಲಿ ಬಿದ್ದಿತ್ತು ಎಂಬುದು ನಮಗೆ ಮರುದಿನವೇ ಗೊತ್ತಾಗಿತ್ತು ಎಂದು ಶಿವನ್‌ ಹೇಳಿದರು. ಆದರೆ ಈಚೆಗೆ ‘ನಾಸಾ’ ಇದನ್ನು ಪತ್ತೆ ಹಚ್ಚಿದ್ದಾಗಿ ಹೇಳಿತ್ತು. ಚೆನ್ನೈ ಮೂಲದ ಷಣ್ಮುಗ ಸುಬ್ರಹ್ಮಣ್ಯಂ ಅವರು ಫೋಟೊಗಳನ್ನು ಆಧರಿಸಿ ಅವಶೇಷಗಳನ್ನು ಗುರುತು ಹಿಡಿದಿದ್ದರು. ‘ಚಂದ್ರಯಾನ–2 ಯೋಜನೆಯ ವೈಫಲ್ಯದ ಕಾರಣಗಳನ್ನು ಬಹಿರಂಗಪಡಿಸದೆ ಇರಲು ಕೆಲವೊಂದು ಕಾರ್ಯತಂತ್ರವಿತ್ತು ಎಂದು ಅವರು ಸಮರ್ಥಿಸಿಕೊಂಡರು.

ಚಂದ್ರಯಾನ: ಮುಂದಿನ ವರ್ಷ
ಚಂದ್ರಯಾನ–3 ಮತ್ತು ಗಗನಯಾನ ಯೋಜನೆಗಳಿಗೆ ಈ ವರ್ಷ ಸಿದ್ಧತೆ ನಡೆಯಲಿದ್ದರೂ, 2021ರಲ್ಲಷ್ಟೇ ಅದು ಕಾರ್ಯಗತಗೊಳ್ಳಲಿದೆ. ಚಂದ್ರಯಾನ–3 ಮುಂದಿನ ವರ್ಷ ಆದಿ ಭಾಗದಲ್ಲಿ ಹಾಗೂ ಗಗನಯಾನ ಮುಂದಿನ ವರ್ಷದ ಅಂತ್ಯ ಭಾಗದಲ್ಲಿ ಅಥವಾ 2022ರ ಆದಿ ಭಾಗದಲ್ಲಷ್ಟೇ ನಡೆಯಬಹುದು.

2020– ಇಸ್ರೊ ಯೋಜನೆಗಳು

* 25 ಉಡಾವಣೆಗಳು, 2019ರಲ್ಲಿ ಮಾಡಬೇಕಿದ್ದ ಉಡಾವಣೆಗಳು ಮಾರ್ಚ್‌ ಒಳಗೆ ಪೂರ್ಣ

*  ಜಿಸ್ಯಾಟ್‌–30 ಅನ್ನು ಇದೇ 17ರಂದು ಉಡಾಯಿಸಲಾಗುವುದು

*  5 ಪಿಎಸ್‌ಎಲ್‌ವಿಗಳನ್ನು ಉದ್ಯಮಗಳು ಅಭಿವೃದ್ಧಿಪಡಿಸಲಿದ್ದ, 2022ರ ವೇಳೆಗೆ ಪೂರೈಕೆಯಾಗಲಿವೆ.

*  ಇಸ್ರೊ ಟಿವಿ ಸೆಟಲೈಟ್‌ ಯೋಜನೆಯ ಬಗ್ಗೆ ಕೆಲಸ ಮುಂದುವರಿದಿದೆ.

*  ಚಂದ್ರಯಾನ–2 ಆರ್ಬಿಟರ್‌ನಿಂದ ಮಾಹಿತಿಗಳು ಬರುತ್ತಲೇ ಇದ್ದು, ವಿಜ್ಞಾನಿಗಳು ಅವುಗಳನ್ನು ಅಧ್ಯಯನ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು