ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಕ್‌ ಪಾರ್ಕ್‌’ನಲ್ಲಿ ದಟ್ಟಣೆ ನಿವಾರಣೆಗೆ ಕ್ರಮ

ಐಟಿ ಉದ್ಯೋಗಿಗಳು ಕೆಲಸಕ್ಕೆ ಬರುವ ವ್ಯವಸ್ಥೆ: ಪೊಲೀಸ್‌ ಇಲಾಖೆಯಲ್ಲಿ ಚರ್ಚೆ
Published 4 ಅಕ್ಟೋಬರ್ 2023, 17:44 IST
Last Updated 4 ಅಕ್ಟೋಬರ್ 2023, 17:44 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಗರದಲ್ಲಿ ವಾಹನ ದಟ್ಟಣೆ ತೀವ್ರವಾಗಿದ್ದು ಈ ಸಮಸ್ಯೆ ನಿವಾರಿಸಲು ಪೊಲೀಸ್‌ ಇಲಾಖೆ ಕೆಲವು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಬುಧವಾರ ನಡೆದ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಹೊರವರ್ತುಲ ರಸ್ತೆ ಮತ್ತು ಟೆಕ್‌ಪಾರ್ಕ್‌ಗಳ ಬಳಿ ಉಂಟಾಗಿರುವ ಸಂಚಾರ ದಟ್ಟಣೆ ನಿವಾರಣೆಗೆ ಐ.ಟಿ ಕಂಪನಿಗಳ ಮುಖ್ಯಸ್ಥರ ಜತೆ ಚರ್ಚಿಸಿ, ಕೆಲ ಮಾರ್ಪಾಡು ಮಾಡಿಕೊಳ್ಳಲು ಸಲಹೆ ಪಡೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಸಮಸ್ಯೆಗಳ ಬಗ್ಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟ್ ಹಾಕುತ್ತಿದ್ದಾರೆ. ಹೀಗಾಗಿ ಐಟಿ ಕಂಪನಿಗಳ ಅಧಿಕಾರಿಗಳ ಜತೆ ಚರ್ಚಿಸಬೇಕು. ಜತೆಗೆ, ದೊಡ್ಡ ಐ.ಟಿ ಪಾರ್ಕ್‌ಗಳಲ್ಲಿ ಕಚೇರಿ ಆರಂಭ ಮತ್ತು ಮುಕ್ತಾಯ ಸಮಯವನ್ನು ಬೇರೆ ಬೇರೆ ಮಾಡಬೇಕು‘ ಎಂಬ ಎಂಬ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾಗಿವೆ’ ಎಂದು ಮೂಲಗಳು ತಿಳಿಸಿವೆ.

‘ಇಲಾಖೆಗೆ ಹೊಸದಾಗಿ ಬರುವ ಪ್ರತಿ ಸಿಬ್ಬಂದಿಗೂ ಸೈಬರ್ ಕ್ರೈಂ ಕುರಿತು ತರಬೇತಿ ನೀಡಲಾಗುತ್ತಿದೆ. ಹಾಗೆಯೇ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೂ ಕಡ್ಡಾಯವಾಗಿ ಸೈಬರ್ ಕ್ರೈಂ ಕುರಿತು ತರಬೇತಿ ಆಗಿರಲೇಬೇಕು. ಮುಂದಿನ ದಿನಗಳಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ತರಬೇತಿ ಅಗತ್ಯ’ ಎಂದು ಡಿಜಿಪಿ ಸಭೆಯಲ್ಲಿ ತಿಳಿಸಿದ್ದಾರೆ.

ದೂರು ದಾಖಲು ಕಡ್ಡಾಯ: ‘ಯಾರೇ ಠಾಣೆಗೆ ದೂರು ನೀಡಲು ಬಂದರೂ ದೂರು ದಾಖಲಿಸಿಕೊಳ್ಳಬೇಕು. ಎಫ್‌ಐಆರ್‌ ದಾಖಲು ಮಾಡಿಕೊಳ್ಳಲು ಹಿಂದೇಟು ಸಲ್ಲದು. ತಮ್ಮ ಠಾಣೆ ವ್ಯಾಪ್ತಿಗೆ ಬಾರದಿದ್ದರೆ ಪ್ರಕರಣ ದಾಖಲಿಸಿಕೊಂಡು ಆಯಾ ವ್ಯಾಪ್ತಿಯ ಠಾಣೆಗೆ ವರ್ಗಾವಣೆ ಮಾಡಬೇಕು’ ಎಂದು ಸೂಚಿಸಿದ್ದಾರೆ.

‘ರೌಡಿ ಚಟುವಟಿಕೆಗೆ ಕಡಿವಾಣ, ಗಸ್ತು ಹೆಚ್ಚಿಸಬೇಕು ಎಂದು ಸೂಚಿಸಿದ್ದಾರೆ. ಗಸ್ತು ವೇಳೆ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ರಮಣ್ ಗುಪ್ತಾ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಇದ್ದರು.

ನಗರದ ಸರ್ಜಾಪುರ ಮುಖ್ಯರಸ್ತೆಯಲ್ಲಿ ಬುಧವಾರ ಕಂಡುಬಂದ ವಾಹನ ದಟ್ಟಣೆ. 
ನಗರದ ಸರ್ಜಾಪುರ ಮುಖ್ಯರಸ್ತೆಯಲ್ಲಿ ಬುಧವಾರ ಕಂಡುಬಂದ ವಾಹನ ದಟ್ಟಣೆ. 
ಮಾರುತಹಳ್ಳಿ ಜಂಕ್ಷನ್‌ ಸರ್ಜಾಪುರ ರಸ್ತೆಯಲ್ಲಿ ಕಂಡುಬಂದ ವಾಹನಗಳ ಸಾಲು.
ಮಾರುತಹಳ್ಳಿ ಜಂಕ್ಷನ್‌ ಸರ್ಜಾಪುರ ರಸ್ತೆಯಲ್ಲಿ ಕಂಡುಬಂದ ವಾಹನಗಳ ಸಾಲು.

Cut-off box - ‘40 ದಿನಗಳಲ್ಲೇ ಇತ್ಯರ್ಥ ಪಡಿಸಿ’ ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೊ ಪ್ರಕರಣಗಳನ್ನು 60 ದಿನಗಳ ಬದಲಿಗೆ 40 ದಿನಗಳಲ್ಲೇ ಇತ್ಯರ್ಥ ಪಡಿಸಬೇಕು. ನಗರದ ಎಲ್ಲ ವಿಭಾಗಗಳ ಡಿಸಿಪಿಗಳು ತಮ್ಮ ವ್ಯಾಪ್ತಿಗಳ ಠಾಣೆಗಳಿಗೆ ಭೇಟಿ ನೀಡಿ ಕಾರ್ಯ ವೈಖರಿ ಪರಿಶೀಲಿಸಬೇಕು ಎಂದು ಡಿಜಿಪಿ ಸೂಚಿಸಿದ್ದಾರೆ.

Cut-off box - ಮತ್ತೆ ದಟ್ಟಣೆ: ಜನರಿಗೆ ಸಂಕಷ್ಟ ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನದಿಂದಲೂ ಮತ್ತೆ ವಾಹನ ದಟ್ಟಣೆ ಕಂಡುಬಂತು. ಅದರಲ್ಲೂ ಐ.ಟಿ ಪಾರ್ಕ್‌ನಲ್ಲಿ ತೀವ್ರ ದಟ್ಟಣೆಯಿಂದ ಜನರು ಹೈರಾಣಾದರು. ಮಾರತ್ತಹಳ್ಳಿ ಜಂಕ್ಷನ್‌ನ ಸರ್ಜಾಪುರದ ಮುಖ್ಯರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳು ಮಂದಗತಿಯಲ್ಲಿ ಸಾಗಬೇಕಾಯಿತು. ಆಂಬುಲೆನ್ಸ್‌ಗಳು ಮುಂದಕ್ಕೆ ಸಾಗಲು ಸಾಧ್ಯವಾಗಲಿಲ್ಲ. ನಗರದ ಹೃದಯ ಭಾಗದಲ್ಲೂ ಮತ್ತೆ ದಟ್ಟಣೆ ಕಂಡುಬಂತು. ಹೆಬ್ಬಾಳ ರಸ್ತೆ ರಾಜಭವನ ರಸ್ತೆ ಚಾಲುಕ್ಯ ವೃತ್ತ ರೇಸ್‌ಕೋರ್ಸ್ ರಸ್ತೆ ಕೆ.ಆರ್.ವೃತ್ತ ಕಾರ್ಪೊರೇಷನ್ ವೃತ್ತದಲ್ಲಿ ಸಾಲು ಸಾಲು ವಾಹನಗಳಿದ್ದವು. ಮೈಸೂರು ರಸ್ತೆ ಯಶವಂತಪುರ ಮೆಜೆಸ್ಟಿಕ್‌ನಲ್ಲೂ ಅದೇ ಸ್ಥಿತಿ ಕಂಡುಬಂತು. ರಿಚ್ಮಂಡ್ ವೃತ್ತ ಕಾರ್ಪೊರೇಷನ್ ವೃತ್ತ ರೆಸಿಡೆನ್ಸಿ ರಸ್ತೆ ಮೆಜೆಸ್ಟಿಕ್ ಕೆ.ಆರ್. ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ವಿಪರೀತ ದಟ್ಟಣೆ ಕಂಡುಬಂತು. ದಟ್ಟಣೆಯಲ್ಲಿ ಸಿಲುಕಿ ಚಾಲಕರು ಹೈರಾಣಾದರು. ಕಳೆದ ಕೆಲವು ದಿನಗಳಿಂದ ದಟ್ಟಣೆ ತೀವ್ರಗೊಂಡಿದ್ದು ಚಾಲಕರು ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿದ್ದಾರೆ. ಮನೆಗೂ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ವಾಣಿಜ್ಯ ಪ್ರದೇಶದ (ಸಿಬಿಡಿ) ರಸ್ತೆಗಳಲ್ಲೂ ಸಂಜೆಯಿಂದ ರಾತ್ರಿಯವರೆಗೂ ದಟ್ಟಣೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT