ಬೆಂಗಳೂರು: ಸರ್ಕಾರದ ಹಲವು ಕಾಮಗಾರಿಗಳನ್ನು ಗುತ್ತಿಗೆ ಪಡೆದಿದ್ದ ಎರಡು ಕಂಪನಿಗಳಿಗೆ ಸಂಬಂಧಪಟ್ಟ 25 ಸ್ಥಳಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಗುರುವಾರ ದಾಳಿ ಮಾಡಿ, ಶೋಧ ನಡೆಸಿದರು.
ತೆರಿಗೆ ವಂಚನೆ ಆರೋಪದಡಿ ಐಟಿ ಅಧಿಕಾರಿಗಳು ಈ ದಾಳಿ ನಡೆಸಿದರು. ಸಹಕಾರನಗರ, ಸಂಜಯನಗರ ಹಾಗೂ ಇತರೆ ಸ್ಥಳಗಳಲ್ಲಿರುವ ಕಂಪನಿ ಕಚೇರಿ ಹಾಗೂ ಕಂಪನಿಗೆ ಸಂಬಂಧಪಟ್ಟ ವ್ಯಕ್ತಿಗಳ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕಂಪನಿಯ ವಹಿವಾಟಿಗೆ ಸಂಬಂಧಪಟ್ಟ ದಾಖಲೆಗಳನ್ನು ಸುಪರ್ದಿಗೆ ಪಡೆದು ಮಾಹಿತಿ ಕಲೆ ಹಾಕಿದರು. ಕಂಪನಿಗಳಿಗೆ ಸಂಬಂಧಪಟ್ಟ ಆಡಳಿತ ಮಂಡಳಿ ಸದಸ್ಯರು ಹಾಗೂ ಇತರರ ಮನೆಗಳಲ್ಲಿಯೂ ಶೋಧ ನಡೆಯಿತು. ಶೋಧದ ಸಂದರ್ಭದಲ್ಲಿ ನಗದು ಹಾಗೂ ಹಲವು ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿರುವುದಾಗಿ ಗೊತ್ತಾಗಿದೆ.
ಬೆಂಗಳೂರಿನ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಇದೇ ಎರಡು ಕಂಪನಿಗಳು ಇತ್ತೀಚೆಗಷ್ಟೇ ಗುತ್ತಿಗೆ ಪಡೆದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.