ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಸಂಪರ್ಕ; ಮೊದಲ ದಿನ ಉತ್ತಮ ಸ್ಪಂದನೆ

ನಗರದ ಎಲ್ಲ ಠಾಣೆಗಳಲ್ಲೂ ಜಾರಿ
Last Updated 28 ನವೆಂಬರ್ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟ ಮಾಹಿತಿ ಪಡೆಯಲು ಹಾಗೂ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪೊಲೀಸರು ಜಾರಿಗೆ ತಂದಿರುವ ‘ಜನ ಸಂಪರ್ಕ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಪುಲಿಕೇಶಿನಗರ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಜನ ಸಂಪರ್ಕ ಸಭೆಗೆ ಚಾಲನೆ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು. ನಗರದ ಎಲ್ಲ ಠಾಣೆಗಳಲ್ಲೂ ಈ ಕಾರ್ಯಕ್ರಮ ನಡೆಯಿತು. ‌

ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಠಾಣೆಯಲ್ಲಿ ದಾಖಲಾದ ಪ್ರಕರಣಗಳು, ಅದರ ತನಿಖೆ ಪ‍್ರಗತಿ ಮಾಹಿತಿ ಹಾಗೂ ಇತರೆ ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಂಡರು. ಕೆಲವರು, ತಮ್ಮ ಸಮಸ್ಯೆಗಳನ್ನು ಪೊಲೀಸ್ ಇನ್‌ಸ್ಪೆಕ್ಟರ್‌ ಎದುರು ಹೇಳಿಕೊಂಡರು. ನಗರದಾದ್ಯಂತ ಸಾವಿರಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು ಎಂಬುದಾಗಿ ಪೊಲೀಸ್‌ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಕಮಲ್‌ ಪಂತ್ ಮಾತನಾಡಿ, ‘ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್‌, ‘ಪೊಲೀಸರದ್ದು ಬಹಳ ಕಷ್ಟದ ಕೆಲಸ. ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಬೇಕಾದರೆ ಜನರ ಸಹಕಾರ ಅಗತ್ಯ. ಪೊಲೀಸರು ಜನಪರ ಮನೋಭಾವನೆಯಿಂದ ಕೆಲಸ ಮಾಡುವುದು ಮುಖ್ಯ‌’ ಎಂದರು.

‘ದೂರು ಕೊಟ್ಟ ನಂತರ ಶೇ 90ರಷ್ಟು ಪ್ರಕರಣಗಳಲ್ಲಿ ಮಾತ್ರ ತನಿಖೆ ನಡೆಯುತ್ತದೆ. ಶೇ 10ರಷ್ಟು ಪ್ರಕರಣಗಳಲ್ಲಿ ತನಿಖೆ ಆಗುವುದೇ ಇಲ್ಲ. ಇಂಥ ಪ್ರಕರಣಗಳ ಮೇಲೆ ಬೆಳಕು ಚೆಲ್ಲಲು ಈ ಕಾರ್ಯಕ್ರಮ ನೆರವಾಗಲಿದೆ’ ಎಂದೂ ಹೇಳಿದರು.

‘ನಗರದ ಪಶ್ಚಿಮ ವಿಭಾಗದ ಠಾಣೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ 892 ಮಂದಿ ಪಾಲ್ಗೊಂಡು ಅಹವಾಲು ಹೇಳಿಕೊಂಡಿದ್ದಾರೆ’ ಎಂದು ಡಿಸಿಪಿ ಸಂಜೀವ್‌ ಪಾಟೀಲ ಹೇಳಿದರು.

‘ಡ್ರಗ್ಸ್ ಮಾರಾಟ, ಪಾದಚಾರಿಗಳು ಹಾಗೂ ವಾಯುವಿಹಾರಿಗಳಿಗೆ ಬೆದರಿಕೆ ಸೇರಿ ಹಲವು ದೂರುಗಳು ಬಂದಿವೆ. ಅವುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT