ಬೆಂಗಳೂರು: ಬಿಬಿಎಂಪಿಗೆ ಜನಪ್ರತಿನಿಧಿಗಳಿಲ್ಲದ ಒಂದು ವರ್ಷದ ಸ್ಥಿತಿ ಕುರಿತು ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜನಾಗ್ರಹ ಸಂಘಟನೆಯಿಂದ ‘ನಮ್ಮ ಕಾರ್ಪೋರೇಟರ್ ಎಲ್ಲಿ’ ಎಂಬ ಸಂವಾದ ಬುಧವಾರ ನಡೆಯಿತು.
‘ಸ್ಥಳೀಯ ಸಮಸ್ಯೆಗಳ ಪರಿಹಾರ ಪಾಲಿಕೆ ಸದಸ್ಯರಿಂದ ಮಾತ್ರ ಸಾಧ್ಯ. ಚುನಾವಣೆ ನಡೆಸದಿರುವುದು ಸಂವಿಧಾನ ವಿರೋಧಿ ನಡೆ. ಸರ್ಕಾರ ಕೂಡಲೇ ಚುನಾವಣೆ ನಡೆಸಬೇಕು’ ಎಂದು ಪಾಲಿಕೆ ಮಾಜಿ ಸದಸ್ಯರು ಮತ್ತು ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು. ಜನಾಗ್ರಹ ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ನಡೆಸಿದ ವೆಬಿನಾರ್‌ನಲ್ಲಿ ವ್ಯಕ್ತವಾದ ಅಭಿಪ್ರಾಯ ಹೀಗಿದೆ.
ಪ್ರಜಾಪ್ರಭುತ್ವ ವಿರೋಧಿ ನಿಲುವು
ಬಿಎಂಪಿಯನ್ನು ಬಿಬಿಎಂಪಿ ಮಾಡುವ ನೆಪದಲ್ಲಿ ಈ ಹಿಂದೆಯೂ 2 ವರ್ಷಗಳ ಕಾಲ ಚುನಾವಣೆ ನಡೆಸದೆ ಸರ್ಕಾರವೇ ಆಡಳಿತ ನಡೆಸುತ್ತಿತ್ತು. ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ ಚುನಾವಣೆ ನಡೆಸಲಾಗಿತ್ತು. ಪ್ರತಿ ಬಾರಿಯೂ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಚುನಾವಣೆ ನಡೆಸಲು ಸೂಚನೆ ನೀಡಬೇಕಿದೆ. ಪಾಲಿಕೆಯನ್ನು ಹಿಡಿತದಲ್ಲೇ ಇಟ್ಟುಕೊಳ್ಳುವ ಪ್ರಯತ್ನ ಸರ್ಕಾರದ್ದು. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವು.
–ಸಿ.ಎನ್. ದೀಪಕ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ
***
ಚಿನ್ನದ ಮೊಟ್ಟೆ ಕೈತಪ್ಪುವ ಆತಂಕ
ರಾಜ್ಯ ಚುನಾವಣಾ ಆಯೋಗವು ಆಡಳಿತ ಪಕ್ಷದ ಕೈಗೊಂಬೆಯಾಗಿದೆ. ಬಿಬಿಎಂಪಿ ಎಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ. ಚುನಾವಣೆ ನಡೆದರೆ ಮೊಟ್ಟೆ ಕೈತಪ್ಪುವ ಆತಂಕ ಆಡಳಿತ ಪಕ್ಷದಲ್ಲಿದೆ. ಶಾಸಕರು ಮತ್ತು ಸಂಸದರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅಷ್ಟಾಗಿ ಅರಿವಿರುವುದಿಲ್ಲ. ವಾರ್ಡ್ ಮಟ್ಟದಲ್ಲಿ ಜನಪ್ರತಿನಿಧಿ ಇದ್ದರೆ ಸ್ಥಳೀಯ ಸಮಸ್ಯೆಗಳು ಪರಿಹಾರವಾಗುತ್ತವೆ. ಒಂದೂವರೆ ವರ್ಷದಿಂದ ಸಮಸ್ಯೆಗಳು ಹಾಗೇ ಉಳಿದಿವೆ.
– ಉಷಾ ಮೋಹನ್, ಆಮ್ ಆದ್ಮಿ ಪಕ್ಷದ ಮುಖಂಡರು
***
ಚುನಾವಣೆ ಜನರ ಹಕ್ಕು
ಸ್ಥಳೀಯ ಸಣ್ಣ ಸಣ್ಣ ಸಮಸ್ಯೆಗಳನ್ನು ಸರಿಪಡಿಸುವವರು ಪಾಲಿಕೆ ಸದಸ್ಯರು. ನೋಡಲ್ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕಿವಿಗೊಡುವುದಿಲ್ಲ.ಬೆಂಗಳೂರಿನ ರಸ್ತೆಗಳನ್ನು ನೋಡಿದರೆ ಅದು ಅರ್ಥವಾಗುತ್ತಿದೆ. ವಾರ್ಡ್‌ಗಳ ಮರು ವಿಂಗಡಣೆ ಮತ್ತು ಕೋವಿಡ್ ನೆಪದಲ್ಲಿ ಚುನಾವಣೆ ಮುಂದೂಡುವುದು ಸರಿಯಲ್ಲ. ಚುನಾವಣೆ ಮತ್ತು ಪ್ರಜಾಪ್ರಭುತ್ವ ಜನರ ಹಕ್ಕು. ಅದನ್ನೇ ಕಸಿದುಕೊಳ್ಳಲಾಗಿದೆ.
–ಶಿಲ್ಪಾ ಅಭಿಲಾಷ್, ಪಾಲಿಕೆ ಮಾಜಿ ಸದಸ್ಯೆ(ಕಾಂಗ್ರೆಸ್)
***
ವಿಳಂಬಕ್ಕೆ ರಾಜಕೀಯ ಕಾರಣ ಗೊತ್ತಿಲ್ಲ
ಕೆಲಸಗಳು ಉತ್ತಮವಾಗಿ ನಡೆಯುತ್ತಿದ್ದರೆ ಪಾಲಿಕೆ ಸದಸ್ಯರ ಅಗತ್ಯ ಇಲ್ಲ, ಕೆಲಸಗಳು ನಡೆಯುತ್ತಿಲ್ಲ ಎಂದಾದರೆ ಸದಸ್ಯರ ಅಗತ್ಯವಿದೆ. ಪಾಲಿಕೆ ಅವಧಿ ಮುಗಿದ ಬಳಿಕ ಬಾಕಿ ಕಾಮಗಾರಿ ಹಾಗೇ ಉಳಿದಿದೆ. ಚುನಾಯಿತ ಸದಸ್ಯರಿದ್ದರೆ ವಾರ್ಡ್‌ನಲ್ಲಿ ಕೆಲಸ ಆಗುತ್ತದೆ. ಚುನಾವಣೆ ವಿಳಂಬಕ್ಕೆ ರಾಜಕೀಯ ಕಾರಣ ಏನೆಂಬುದು ಗೊತ್ತಿಲ್ಲ. ಕೂಡಲೇ ಚುನಾವಣೆ ನಡೆಸಲು ನಾವು ಒತ್ತಾಯಿಸಿದ್ದೇವೆ.
–ಶ್ವೇತಾ ವಿಜಯಕುಮಾರ್, ಪಾಲಿಕೆ ಮಾಜಿ ಸದಸ್ಯೆ(ಬಿಜೆಪಿ)
***
ಸರ್ಕಾರದಿಂದ ದೊಡ್ಡ ಪ್ರಮಾದ
ಯಾವುದೇ ಸ್ಥಳೀಯ ಸಂಸ್ಥೆಯ ಅವಧಿ ಮುಗಿದ 6 ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು. ರಾಜ್ಯ ಸರ್ಕಾರದಿಂದ ದೊಡ್ಡ ಪ್ರಮಾದವಾಗಿದೆ. ದುರುದ್ದೇಶ ಮತ್ತು ಸ್ವಾರ್ಥದ ನಡೆ ಇದಾಗಿದೆ. ವಾರ್ಡ್ ಮರು ವಿಂಗಡಣೆ ಮತ್ತು ಕೋವಿಡ್ ನೆಪ ಸರಿಯಲ್ಲ. ಚುನಾಯಿತ ಪ್ರತಿನಿಧಿಗಳಿಲ್ಲದ ಪಾಲಿಕೆ ತಂದೆ ಇಲ್ಲದ ಮನೆಯಂತಾಗಿದೆ. ಅನಗತ್ಯ ವಿಳಂಬದ ಮೂಲಕ ನಗರವನ್ನು ಸ್ಮಶಾನವಾಗಿಸಲು ಸರ್ಕಾರ ಹೊರಟಿದೆ.
– ಕೆ.ವಿ. ಯಶೋಧ ರಾಜಣ್ಣ, ಪಾಲಿಕೆ ಮಾಜಿ ಸದಸ್ಯೆ(ಜೆಡಿಎಸ್)
***
ಪಾಲಿಕೆ ಬಜೆಟ್ ಮೇಲೆ ಸರ್ಕಾರದ ಕಣ್ಣು
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ಅಲ್ಲಿನ ₹10 ಸಾವಿರ ಕೋಟಿ ಬಜೆಟ್ ಮೇಲೆ ಸರ್ಕಾರ ನಿಯಂತ್ರಣ ಹೊಂದಿದೆ. ವಾರ್ಡ್ ಮರು ವಿಂಗಡಣೆಯು ಸಂವಿಧಾನ ಪ್ರಕ್ರಿಯೆಯನ್ನು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುವ ಪ್ರಯತ್ನ. ಆಸ್ತಿ ತೆರಿಗೆಯನ್ನು ದಂಡ ಸಹಿತ ಪಾವತಿಸಲು ಲಕ್ಷಾಂತರ ಜನರಿಗೆ ನೋಟಿಸ್ ಬಂದಿದೆ. ಇದನ್ನು ಕೇಳುವವರು ಯಾರೂ ಇಲ್ಲವಾಗಿದೆ. ಜಾಹೀರಾತು ಫಲಕದ ವಿಷಯದಲ್ಲಿ ನಿರ್ಣಯ ಮಾಡುವ ಅಧಿಕಾರ ಪಾಲಿಕೆಗೆ ಇರಬೇಕೇ ಹೊರತು ಸರ್ಕಾರಕ್ಕೆ ಅಲ್ಲ.
–ಬಿ.ವಿ.ಲಲಿತಾಂಬ, ಬೆಂಗಳೂರು ನವನಿರ್ಮಾಣ ಪಕ್ಷದ ಅಭಿಯಾನ ಉಸ್ತುವಾರಿ
***
ಪ್ರಜಾಪ್ರಭುತ್ವದ ಕೊಲೆ
ಬಿಬಿಎಂಪಿ ಚುನಾವಣೆ ನಡೆಸದೆ ಪ್ರಜಾಪ್ರಭುತ್ವವನ್ನು ಸರ್ಕಾರ ಕೊಲೆ ಮಾಡಿದೆ. ಚುನಾವಣೆ ನಮ್ಮ ಹಕ್ಕು. ಸ್ಥಳೀಯ ಜನಪ್ರತಿನಿಧಿಗಳು ಇದ್ದಿದ್ದರೆ ಕೋವಿಡ್ ಎರಡನೇ ಅಲೆ ಎದುರಿಸುವುದು ಕಷ್ಟ ಆಗುತ್ತಿರಲಿಲ್ಲ. ಶಾಸಕರು ಮನೆ–ಮನೆಗೆ ತಲುಪಲು ಸಾಧ್ಯವಿಲ್ಲ. ಈಗ ಜನರ ಕಷ್ಟ ಕೇಳುವವರೇ ಇಲ್ಲವಾಗಿದೆ. ಆಸ್ತಿ ತೆರಿಗೆಗೆ ಶೇ 200ರಷ್ಟು ದಂಡ ವಿಧಿಸಲಾಗುತ್ತಿದೆ. ಪಾಲಿಕೆ ಸದಸ್ಯರಿದ್ದಿದ್ದರೆ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ.
–ಅಬ್ದುಲ್ ವಾಜಿದ್, ಪಾಲಿಕೆ ಮಾಜಿ ಸದಸ್ಯ(ಕಾಂಗ್ರೆಸ್)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.