ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ಪಂದನ: ಬಗೆಹರಿಯಿತು ಬಹುದಿನಗಳ ಬವಣೆ, ಇತ್ಯರ್ಥಕ್ಕೆ ಕಾಲಮಿತಿ ನಿಗದಿ

ಕುಡಿಯುವ ನೀರು, ಒಳಚರಂಡಿ, ರಸ್ತೆ ಗುಂಡಿ, ಸಂಚಾರ ದಟ್ಟಣೆ, ರಸ್ತೆ ಅಗೆತ ಸಮಸ್ಯೆ
Last Updated 26 ಮಾರ್ಚ್ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರಿನ ಬವಣೆಯಿಂದ ಹೈರಾಣಾದವರು, ಒಳಚರಂಡಿ ಪದೇ ಪದೇ ಕಟ್ಟಿಕೊಂಡು ಸಮಸ್ಯೆ ಎದುರಿಸುವವವರು, ರಸ್ತೆಯ ತಗ್ಗು ದಿಣ್ಣೆಗಳಿಂದ ಬಸವಳಿದವರು, ಸಂಚಾರ ದಟ್ಟಣೆಯಲ್ಲಿ ಬಳಲಿದವರು, ರಸ್ತೆ ಕತ್ತರಿಸುವಿಕೆ ಕಾಟಕ್ಕೆ ತತ್ತರಿಸಿದವರು.... ಹೀಗೆ ಹತ್ತು ಹಲವು ಗೋಳುಗಳನ್ನೆದುರಿಸುತ್ತಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಾಗರಿಕರು ಶನಿವಾರ ತುಸು ನಿರಾಳರಾದರು.

ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ತಿಂಗಳಾನುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದ ಅವರಲ್ಲಿ ಬಹುದಿನಗಳ ಬವಣೆ ಬಗೆಹರಿಯುವ ಹೊಸ ಆಶಾಕಿರಣ ಮೂಡಿದೆ. ಇಂತದ್ದೊಂದು ಬದಲಾವಣೆಗೆ ಕಾರಣವಾಗಿದ್ದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಜೆ.ಪಿ.ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ.

ಈ ಕಾರ್ಯಕ್ರಮದಲ್ಲಿ ಜನರ ಅನೇಕ ದೂರು ದುಮ್ಮಾನಗಳನ್ನು ರಾಜ್ಯ ಸರ್ಕಾರದ ಮುಖ್ಯ ಸಚೇತಕರೂ ಆಗಿರುವ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ. ಸತೀಶ ರೆಡ್ಡಿ ಅವರು ಸ್ಥಳದಲ್ಲೇ ಇತ್ಯರ್ಥಪಡಿಸಿದರು. ಇನ್ನು ಕೆಲವು ಅಹವಾಲುಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡುವ ಭರವಸೆ ನೀಡಿದರು.

ಸಾರ್ವಜನಿಕರಿಂದ ದೂರು ಬಂದ ಬಳಿಕವೂ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ‘ಈ ರೀತಿಯ ವರ್ತನೆಗಳಿಂದ ನಿಮ್ಮ ಗೌರವಕ್ಕೆ ನೀವೇ ಚ್ಯುತಿ ತಂದುಕೊಳ್ಳುತ್ತಿದ್ದೀರಿ. ಈಗ ಬಿಬಿಎಂಪಿ ಸದಸ್ಯರಿಲ್ಲ. ಹಾಗಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಗುರುತರ ಜವಾಬ್ದಾರಿ ವಾರ್ಡ್‌ ಮಟ್ಟದ ಅಧಿಕಾರಿಗಳ ಮೇಲಿದೆ. ನಿಮ್ಮ ಹಂತದಲ್ಲಿ ಬಗೆಹರಿಸಲಾಗದ ಸಮಸ್ಯೆಗಳಿದ್ದರೆ, ನನ್ನ ಗಮನಕ್ಕೆ ತನ್ನಿ. ಜನರ ಸೇವೆ ಮಾಡುವುದು ಪುಣ್ಯದ ಕೆಲಸ. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಸಮಸ್ಯೆಗಳೇ ಇರುವುದಿಲ್ಲ’ ಎಂದರು.

‘ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ₹ 200 ಕೋಟಿಗೂ ಹೆಚ್ಚು ಅನುದಾನ ನಮ್ಮ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದು, ಇದರಲ್ಲಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಆಸ್ಪತ್ರೆ, ಶಾಲೆ, ರಸ್ತೆ, ಉದ್ಯಾನಗಳು ಹಾಗೂ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿದ್ದು, ವರ್ಷದೊಳಗೆ ಪೂರ್ಣಗೊಳ್ಳಲಿವೆ. ಕ್ಷೇತ್ರದ ಎಂಟೂ ವಾರ್ಡ್‌ಗಳಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಿದ್ದೇವೆ. ರಾಜಕಾಲುವೆ ದುರಸ್ತಿಗೆಂದೇ ಸರ್ಕಾರ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹ 200 ಕೋಟಿ ಅನುದಾನ ಒದಗಿಸಿದೆ’ ಎಂದು ತಿಳಿಸಿದರು.

‘ಈ ಹಿಂದೆ ಪ್ರತಿವರ್ಷವೂ ಮಳೆ ಬಂದಾಗಲೆಲ್ಲ ಸಾರಕ್ಕಿ ಕೆರೆ ಆಸುಪಾಸಿನ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಪಾತ್ರೆ–ಪಗಡಿಗಳೆಲ್ಲ ತೇಲುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ದಂಡೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಈ ಸಮಸ್ಯೆ ಬಹುತೇಕ ನಿವಾರಣೆ ಆಗಿದೆ. ಈ ಕೆರೆ ಅಭಿವೃದ್ಧಿಗೆ ಮತ್ತೆ ₹ 3 ಕೋಟಿ ಅನುದಾನ ಒದಗಿಸಿದ್ದೇನೆ’ ಎಂದರು.

ಒತ್ತುವರಿ –ಶೂನ್ಯ ಸಹನೆ: ‘ಸರ್ಕಾರಿ ಜಾಗ ಒತ್ತುವರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಒತ್ತುವರಿಯಾಗಿದ್ದ 2.5 ಎಕರೆ ಜಾಗವನ್ನು ತೆರವುಗೊಳಿಸಿ ಜರಗನಹಳ್ಳಿ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಬನ್ನೇರುಘಟ್ಟ ರಸ್ತೆಯಲ್ಲಿ ಒತ್ತುವರಿಯಾಗಿದ್ದ 2 ಎಕರೆ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಆಸ್ಪತ್ರೆ ನಿರ್ಮಿಸಿದ್ದೇವೆ’ ಎಂದರು.

ಶೇ 85ರಷ್ಟು ಕಸ ವಿಂಗಡಣೆ: ‘ಬಿಬಿಎಂಪಿ ವ್ಯಾಪ್ತಿಯಲ್ಲೇ ಕಸವನ್ನು ಮೂಲದಲ್ಲೇ ಹಸಿ ಮತ್ತು ಒಣ ಕಸವೆಂದು ಬೇರ್ಪಡಿಸುವುದರಲ್ಲಿ ಶೇ 85ರಷ್ಟು ಪ್ರಗತಿ ಸಾಧಿಸಿರುವ ಏಕೈಕ ಕ್ಷೇತ್ರ ಬೊಮ್ಮನಹಳ್ಳಿ. ಹಸಿ ಕಸವನ್ನು ವಾರ್ಡ್‌ನಲ್ಲೇ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ, ಅಲ್ಲಿನ ಮನೆಗಳ ಟೆರೇಸ್‌ ಗಾರ್ಡನ್‌ಗಳಲ್ಲೇ ತರಕಾರಿ ಬೆಳೆಸಲು ಬಳಕೆಯಾಗುವಂತೆ ಮಾಡಬೇಕು. ಈಗಾಗಲೇ ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಇಂತಹ ವ್ಯವಸ್ಥೆ ಇದೆ’ ಎಂದರು.

ಒಳಚರಂಡಿ ಸಮಸ್ಯೆ–ಶಾಶ್ವತ ಪರಿಹಾರಕ್ಕೆ ಒತ್ತಾಯ
ಒಳಚರಂಡಿ ಸಮಸ್ಯೆ ಇರುವ ಕುರಿತು ಅನೇಕ ಸಾರ್ವಜನಿಕರು ಅಹವಾಲು ತೋಡಿಕೊಂಡರು.

‘ಪುಟ್ಟೇನಹಳ್ಳಿಯ 26ನೇ ಮುಖ್ಯ ರಸ್ತೆ ಪ್ರದೇಶದಲ್ಲಿ ಒಳಚರಂಡಿ ಆಗಾಗ ಕಟ್ಟಿಕೊಳ್ಳುತ್ತದೆ. ತಿಂಗಳಲ್ಲಿ 2–3 ಸಲ ಜಲಮಂಡಳಿಯವರನ್ನು ಕರೆಸಿ ದುರಸ್ತಿಪಡಿಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ಶಾಂತಮ್ಮ ಅಳಲು ತೋಡಿಕೊಂಡರು.‌

‘ಎರಡು ತಿಂಗಳುಗಳಿಂದ ಒಳಚರಂಡಿ ನೀರು ಕಟ್ಟಿಕೊಳ್ಳುತ್ತಿದೆ’ ಎಂದು ಉಮಾದೇವಿ ದೂರಿದರು.

ಜರಗನಹಳ್ಳಿ ವಾರ್ಡ್‌ನ ಲಕ್ಷ್ಮಣ ಗೌಡ, ‘ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ಮೋರಿ ಪದೇ ಪದೇ ಕಟ್ಟಿಕೊಳ್ಳುತ್ತಿದೆ. 2–3 ದಿನಗಳ ಬಳಿಕವೂದುರಸ್ತಿ ವಾಹನ ಬರುವುದಿಲ್ಲ’ ಎಂದು ತಿಳಿಸಿದರು.

ನಂಜುಂಡಹಳ್ಳಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗಿರೀಶ್‌ ಗಂಗೂಲಿ, ‘ಇಲ್ಲಿನ ಒಳಚರಂಡಿಯ ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ನೀರೂ ಹೊರಗಡೆ ಹರಿಯುತ್ತಿಲ್ಲ. ಭೌಗೋಳಿಕ ಸ್ಥಿತಿಯನ್ನು ಅಧ್ಯಯನ ಮಾಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ತ್ಯಾಜ್ಯ ನೀರು ನಿರ್ವಹಣೆಗೆ ಅನುದಾನ ಮಂಜೂರಾಗಿದ್ದು. ಶೀಘ್ರವೇ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಜಲಮಂಡಳಿಯ ಎಂಜಿನಿಯರ್‌ ರಾಘವೇಂದ್ರ ಭರವಸೆ ನೀಡಿದರು.

ಸತೀಶ್‌ ರೆಡ್ಡಿ, ‘ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪ್ರತಿ ವಾರ್ಡ್‌ ಮಟ್ಟದಲ್ಲಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಜನರ ಅಹವಾಲು ಇತ್ಯರ್ಥಪಡಿಸಬೇಕು’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

‘ದೂರು ಬಂದಾಗ ಒಂದು ಮ್ಯಾನ್‌ಹೋಲ್‌ ಮಾತ್ರ ಸರಿಪಡಿಸಿದರೆ ಸಾಲದು. ಆಸುಪಾಸಿನ ಎಲ್ಲ ಮ್ಯಾನ್‌ಹೋಲ್‌ಗಳನ್ನು ದುರಸ್ತಿಗೊಳಿಸಬೇಕು. ಜನರಿಂದ ದುಡ್ಡು ವಸೂಲಿ ಮಾಡಿದರೆ ಕ್ರಮ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಕೆ ನೀಡಿದರು. ಮ್ಯಾನ್‌ಹೋಲ್‌ ಕಟ್ಟಿಕೊಂಡಿದ್ದನ್ನು ದುರಸ್ತಿಪಡಿಸಿದ ಬಳಿಕವೂ ಸಮಸ್ಯೆ ಬಗೆಹರಿಯದಿದ್ದರೆ ಪರ್ಯಾಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಾಲುತ್ತಿಲ್ಲ ಕುಡಿಯುವ ನೀರು– ಮಹಿಳೆಯರ ಅಳಲು
ವಾರಕ್ಕೆರಡು ಬಾರಿ ಮಾತ್ರ ಕಾವೇರಿ ನೀರು ಪೂರೈಸಲಾಗುತ್ತಿದೆ. ಆದರೆ, ಒತ್ತಡ ಕಡಿಮೆ ಇರುವ ಕಾರಣ ಎತ್ತರದ ಪ್ರದೇಶಗಳಿಗೆ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಎಂದು ಅನೇಕ ಮಹಿಳೆಯರು ಅಳಲು ತೋಡಿಕೊಂಡರು.

‘ನಮ್ಮ ಪ್ರದೇಶದ ಕೊಳವೆಬಾವಿ ಕೆಟ್ಟಿದ್ದು, ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ’ ಎಂದು ಪುಟ್ಟೇನಹಳ್ಳಿಯ ಶಾಂತಮ್ಮ ದೂರಿದರು.

‘ವಾರದಲ್ಲಿ ಒಂದೂವರೆ ಗಂಟೆ ಮಾತ್ರ ನೀರು ಪೂರೈಸುತ್ತಾರೆ. ಒತ್ತಡ ಕಡಿಮೆ ಇರುವ ಕಾರಣ ನಮ್ಮ ಪ್ರದೇಶಕ್ಕೆ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ದೂರು ನೀಡಲು ದೂರದ ಕೊತ್ತನೂರು ದಿಣ್ಣೆಗೆ ಹೋಗಬೇಕು’ ಎಂದು ರೋಸ್‌ಗಾರ್ಡನ್‌ನ ರೇಣುಕಾ ವೈ ಅಳಲು ತೋಡಿಕೊಂಡರು. ಬ್ಯಾಂಕ್‌ ಆಫ್‌ ಬರೋಡಾ ಕಾಲೊನಿಯ ರವಿಕುಮಾರ್ ಅವರೂ ಇದೇ ಸಮಸ್ಯೆ ಹೇಳಿಕೊಂಡರು.

ಅಷ್ಟಲಕ್ಷ್ಮೀ ಬಡಾವಣೆಯಲ್ಲೂ 10 ಮನೆಗಳಿಗೆ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ ಎಂದು ಸುಮಿತ್ರಾ ತಿಳಿಸಿದರು.

ವಾರದಿಂದ ಕುಡಿಯುವ ನೀರು ಬರುತ್ತಿಲ್ಲ ಎಂದು ಉಮಾದೇವಿ ದೂರಿದರು. ಕೊಳವೆಬಾವಿ ನೀರೂ ಸರಿಯಾಗಿ ಪೂರೈಕೆ ಆಗುತ್ತಿಲ್ಲ ಎಂದು ವಿಜಯಮ್ಮ ದೂರಿದರು.

‘ಕುಡಿಯುವ ನೀರು ಪೂರೈಕೆ ಬಗ್ಗೆ ದೂರು ನೀಡಿದ ಸ್ಥಳಕ್ಕೆ ಭೇಟಿ ನೀಡಿ 2–3 ದಿನಗಳ ಒಳಗೆ ಸಮಸ್ಯೆ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಬೇಕು. ಎತ್ತರದ ಪ್ರದೇಶದ ಮನೆಗಳಿಗೂ ನೀರು ಸರಾಗವಾಗಿ ಪೂರೈಕೆ ಆಗುವಂತೆ ಒತ್ತಡ ಹೆಚ್ಚಿಸಬೇಕು’ ಎಂದು ಶಾಸಕರು ಜಲಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಬೋರ್ ವೆಲ್‌ ಹಾಕಿ ಮೂರು ವರ್ಷ ಕಳೆದರೂ, ಪಂಪ್‌ಸೆಟ್‌ಗೆ ಸ್ವಿಚ್‌ಬೋರ್ಡ್‌ ಅಳವಡಿಸಿಲ್ಲ’ ಎಂದು ಕೃಷ್ಣಮೂರ್ತಿ ರೆಡ್ಡಿ ದೂರಿದರು.

ಈ ಬಗ್ಗೆ ಜಲಮಂಡಳಿಯ ಸ್ಥಳೀಯ ಅಧಿಕಾರಿ ವಿರುದ್ಧ ಕೆಂಡಾಮಂಡಲವಾದ ಶಾಸಕರು, ‘ಮೂರು ದಿನದೊಳಗೆ ಸಮಸ್ಯೆ ಇತ್ಯರ್ಥಪಡಿಸದಿದ್ದರೆ, ಕ್ರಮ ಎದುರಿಸಲು ಸಜ್ಜಾಗಬೇಕು’ ಎಂದು ತರಾಟೆಗೆ ತೆಗೆದುಕೊಂಡರು.

ದೂರು ದುಮ್ಮಾನ:ಸ್ಥಳದಲ್ಲೇ ತೀರ್ಮಾನ

ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರು–ದುಮ್ಮಾನ ಆಲಿಸಿದ ಶಾಸಕ ಎಂ.ಸತೀಶ ರೆಡ್ಡಿ, ಅವುಗಳನ್ನು ಇತ್ಯರ್ಥ ಪಡಿಸಲು ಸ್ಥಳದಲ್ಲೇ ಕ್ರಮಕೈಗೊಂಡರು.

*ನಂದಕುಮಾರ್‌: ತಳ್ಳುಗಾಡಿಗಳಲ್ಲಿ ತರಕಾರಿ ಮಾರುವವರು ಮೈಕ್‌ ಬಳಸುತ್ತಿದ್ದಾರೆ. ಮನೆಯಲ್ಲಿ ಐದು ತಿಂಗಳ ಮಗುವಿದೆ. ಮಲಗಿಸಿದ ಸ್ವಲ್ಪ ಹೊತ್ತಿನಲ್ಲೇ ಕರ್ಕಶ ಧ್ವನಿ ಮೊಳಗಿ ಮಗು ಏಳುತ್ತದೆ.

ಸತೀಶ್ ರೆಡ್ಡಿ: ಧ್ವನಿವರ್ಧಕದ ಸದ್ದಿನ ತೀವ್ರತೆ ಕಡಿಮೆಗೊಳಿಸುವಂತೆ ಪೊಲೀಸ್ ಅಧಿಕಾರಿಗಳು ವ್ಯಾಪಾರಿಗಳಿಗೆ ತಿಳಿಹೇಳಬೇಕು. ಪಾಲಿಸದಿದ್ದರೆ, ಕ್ರಮ ಕೈಗೊಳ್ಳಬೇಕು.

*ನಾರಾಯಣಪ್ಪ, ಅಷ್ಟಲಕ್ಷ್ಮಿ ಬಡಾವಣೆ: ನಮ್ಮ ಬೀದಿಯ ಎರಡು ಖಾಲಿ ನಿವೇಶನಗಳಲ್ಲಿ ಕಸ ತಂದು ಸುರಿಯುತ್ತಾರೆ. ಅವರಲ್ಲಿ ನಿತ್ಯ ಜಗಳವಾಡಿ ಸುಸ್ತಾಗಿದ್ದೇನೆ. ಸ್ಥಳೀಯ ಮೋರಿ ದುರಸ್ತಿಯ ಕಸವನ್ನೂ ಗುತ್ತಿಗೆದಾರರು ಇಲ್ಲೇ ಸುರಿದಿದ್ದಾರೆ

ರೆಡ್ಡಿ: ಕಸದ ರಾಶಿ ತೆರವುಗೊಳಿಸಿ. ಸ್ಥಳದಲ್ಲಿ ಮಾರ್ಷಲ್‌ಗಳನ್ನು ನೇಮಿಸಿ ಕಸ ಹಾಕುವವರಿಗೆ ದಂಡ ಹಾಕಿ. ಇಲ್ಲಿ ಕಸ ಹಾಕಿದ ಗುತ್ತಿಗೆದಾರನಿಗೆ ನೋಟಿಸ್ ನೀಡಿ.

*ರಮೇಶ್‌ ಪ್ರಧಾನ್, ಬಿಳೇಕಹಳ್ಳಿ: ಮನೆಗೆ ಪೂರೈಕೆಯಾಗುತ್ತಿರುವ ಕಾವೇರಿ ನೀರಿನ ಕ್ಲೋರೀನೀಕರಣ ಸರಿಯಾಗಿ ಆಗುತ್ತಿಲ್ಲ. ರಾಜಕಾಲುವೆಗೆ ಅಕ್ರಮವಾಗಿ ಒಳಚರಂಡಿ ಸಂಪರ್ಕ ಕಲ್ಪಿಸಿದ್ದಾರೆ.

ರೆಡ್ಡಿ: ರಾಜಕಾಲುವೆಗೆ ಶುದ್ಧೀಕರಿಸಿದ ತ್ಯಾಜ್ಯನೀರನ್ನು ಮಾತ್ರ ಬಿಡಲು ಅವಕಾಶ ಇದೆ. ಯಾರಾದರೂ ತ್ಯಾಜ್ಯ ನೀರನ್ನು ಶುದ್ಧೀಕರಿಸದೆಯೇ ರಾಜಕಾಲುವೆಗೆ ಬಿಟ್ಟರೆ ಕ್ರಮಕೈಗೊಳ್ಳುತ್ತೇವೆ. ನೀರಿನ ಕ್ಲೋರಿನೀಕರಣದ ದೂರಿನ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ.

*ರಾಮಚಂದ್ರ, ನಾಗಾರ್ಜುನ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘ: ಜರಗನಹಳ್ಳಿ ಬಿಗ್‌ಮಾರ್ಕೆಟ್‌ ಬಳಿ ಸದಾ ಸಂಚಾರ ದಟ್ಟಣೆ ಇರುತ್ತದೆ. ಇಲ್ಲಿಂದ ಬನಶಂಕರಿಯತ್ತ ತೆರಳುವ ವಾಹನಗಳು ಬಲಗಡೆ ತಿರುವು ಪಡೆಯಲು ಅವಕಾಶ ನೀಡಿ. ಇಲ್ಲಿನ ವರ್ತುಲ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವ ಏನಾಯಿತು?

ರೆಡ್ಡಿ: ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತಾರೆ. ಇಲ್ಲಿ ಮೆಟ್ರೊ ಕಾಮಗಾರಿ ನಡೆಸಬೇಕಾಗಿ ಬಂದಿದ್ದರಿಂದ ಮೇಲ್ಸೇತುವೆ ಪ್ರಸ್ತಾವ ರದ್ದುಪಡಿಸಲಾಗಿದೆ.

*ಶಿವಮಾದೇಗೌಡ ಮತ್ತು ಸಿಂಧು: ಜಿಯೊ ಕೇಬಲ್‌ ಅಳವಡಿಸಲು ಬೇಕಾಬಿಟ್ಟಿ ರಸ್ತೆ ಅಗೆದಿದ್ದಾರೆ. ದುರಸ್ತಿಪಡಿಸುತ್ತಿಲ್ಲ.

ರೆಡ್ಡಿ: ನಾಲ್ಕು ವರ್ಷ ಕೇಬಲ್‌ ಅಳವಡಿಕೆಗೆ ರಸ್ತೆ ಅಗೆಯಲು ನಾವು ಬಿಟ್ಟಿರಲಿಲ್ಲ. ಇಂಟರ್ನೆಟ್‌ ಸೌಲಭ್ಯವೂ ಅಗತ್ಯ ಎಂಬ ಕಾರಣಕ್ಕೆ ಸರ್ಕಾರವೇ ಈಗ ಅವಕಾಶ ಕಲ್ಪಿಸಿದೆ. ರಸ್ತೆ ಅಗೆದಿದ್ದರೆ, ಅದನ್ನು ಸರಿಪಡಿಸುವ ಬಗ್ಗೆ ಸ್ಥಳೀಯ ಎಂಜಿನಿಯರ್‌ಗಳು ನಿಗಾ ಇಡಬೇಕು.

* ನಾಗರಾಜ್‌, ಎಚ್‌ಎಸ್‌ಆರ್ ಬಡಾವಣೆ: ಸ್ವತಂತ್ರ ಉದ್ಯಾನದಲ್ಲಿ ವಿಪರೀತ ಸೊಳ್ಳೆಕಾಟ. ಇಲ್ಲಿ ಆಸನ ವ್ಯವಸ್ಥೆಯೂ ಇಲ್ಲ

ರೆಡ್ಡಿ: ಉದ್ಯಾನಕ್ಕೆ ಫಾಗಿಂಗ್‌ ಮಾಡಿಸುತ್ತೇವೆ. ಆಸನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ.

*ಸುರೇಶ್‌, ಶ್ಯಾಮಣ್ಣ ಗಾರ್ಡನ್‌: ರಾಜಕಾಲುವೆ ತುಂಬಿ ಹರಿಯುತ್ತದೆ.ಏಳೆಂಟು ಮನೆಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ

ಹೆಗಡೆ (ಜಲಮಂಡಳಿ ಅಧಿಕಾರಿ): ಇಲ್ಲಿ ಒಳಚರಂಡಿ ವ್ಯವಸ್ಥೆಯ ಪುನರ್ರಚನೆಗೆ ಅನುದಾನ ಮಂಜೂರಾಗಿದೆ. ಸಮಸ್ಯೆ ಶೀಘ್ರವೇ ಇತ್ಯರ್ಥವಾಗಲಿದೆ.

* ಅಂಜಲಿ ರಾಜ್‌ಕುಮಾರ್‌, ಕೆ.ಆರ್‌.ಬಡಾವಣೆ: ನಮ್ಮ ಮನೆ ಸಮೀಪದಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡ ತೆರವುಗೊಳಿಸಿಲ್ಲ. ಇದಕ್ಕೂ ನಮ್ಮಿಂದ ಅಧಿಕಾರಿಗಳು ಲಂಚ ಕೇಳುತ್ತಾರೆ.

ರೆಡ್ಡಿ: ನ್ಯಾಯಾಲಯದಲ್ಲಿ ವ್ಯಾಜ್ಯ ಇಲ್ಲದಿದ್ದರೆ, ಕಟ್ಟಡ ಅಕ್ರಮ ಎಂಬುದು ಸಾಬೀತಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಯಾರಿಗೂ ಲಂಚ ನೀಡಬೇಡಿ.

*ಗಿರೀಶ್, ಓಂಕಾರನಗರ: ನಮ್ಮ ಬೀದಿಯ 12 ಬೀದಿದೀಪಗಳನ್ನು ಕಿತ್ತುಹಾಕಿ ಮೂರು ವರ್ಷಗಳಾದವು. ಇನ್ನೂ ಬೇರೆ ದೀಪ ಅಳವಡಿಸಿಲ್ಲ. ಸರಗಳವು ಮಾಡುವವರಿಗೆ ಅನುಕೂಲವಾಗಿದೆ. ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ಮೆಟ್ಟಿಲು ನಿರ್ಮಿಸಿದ್ದಾರೆ.

ರೆಡ್ಡಿ: ಒತ್ತುವರಿ ಬಗ್ಗೆ ಜಂಟಿ ಆಯುಕ್ತರಿಗೆ ಲಿಖಿತ ದೂರು ನೀಡಿ. ಬೀದಿ ದೀಪ ಅಳವಡಿಸಲು ಶೀಘ್ರವೇ ಕ್ರಮಕೈಗೊಳ್ಳುತ್ತೇವೆ.

*ಮಹೇಶ್ ಮಡಿಯಾಳ, ಎಚ್‌.ಎಸ್‌.ಆರ್‌ ಬಡಾವಣೆ: ಸಾರಿಗೆ ಅಧಿಕಾರಿಗಳು ಸರ್ವಿಸ್‌ ರಸ್ತೆಯಲ್ಲೇ ವಾಹನ ತಪಾಸಣೆ ನಡೆಸುತ್ತಾರೆ. ಬೆಳಿಗ್ಗೆ 11 ಗಂಟೆವರೆಗೆ ಈ ಪ್ರದೇಶದ ನಿವಾಸಿಗಳು ಮಕ್ಕಳನ್ನು ಶಾಲೆಗೆ ಕಳುಹಿಸಲು, ಕಚೇರಿಗೆ ಹೋಗಲು ಅಡ್ಡಿಯಾಗುತ್ತಿದೆ. 240 ಮನೆಗಳಿಗೆ ಸಮಸ್ಯೆಯಾಗಿದೆ.

ರೆಡ್ಡಿ: ವಾಹನ ತಪಾಸಣೆ ನಡೆಸುವುದನ್ನು ಬೇರೆಡೆ ಸ್ಥಳಾಂತರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

*ಊರ್ಮಿಳಾ ರಾಜ್‌ಕುಮಾರ್‌, ಕೆ.ಆರ್‌.ಬಡಾವಣೆ: 100 ಅಡಿ ರಸ್ತೆಯು ಗುಂಡಿಮಯವಾಗಿದೆ. ವೃದ್ಧರು ನಡೆಯುವುದಕ್ಕೂ ಹರಸಾಹಸ ಪಡಬೇಕು.

ರೆಡ್ಡಿ: ಪ್ರತಿ ವಾರ್ಡ್‌ಗೂ ₹ 20 ಲಕ್ಷ ಅನುದಾನ ನೀಡಿದರೂ ರಸ್ತೆ ಗುಂಡಿ ಮುಚ್ಚಿಸಲು ಎಂಜಿನಿಯರ್‌ಗಳಿಗೆ ಏನು ರೋಗ. ವಾರ್ಡ್‌ ಮಟ್ಟದ ಈ ಸಣ್ಣ ಸಮಸ್ಯೆ ಬಗ್ಗೆ ಸಾರ್ವಜನಿಕರು ಜನಸ್ಪಂದನದಲ್ಲಿ ದೂರು ಹೇಳುವವರೆಗೆ ಏನು ಮಾಡುತ್ತಿದ್ದೀರಿ. ತಕ್ಷಣ ಕ್ರಮಕೈಗೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT