ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಯೋಧರಿಗೆ ತಲೆ ಬಾಗಿ ನಮಿಸಿದ ಜನತೆ; ಮೊಳಗಿದ ಶಂಖನಾದ, ಚಪ್ಪಾಳೆ ಸದ್ದು

Last Updated 23 ಮಾರ್ಚ್ 2020, 3:10 IST
ಅಕ್ಷರ ಗಾತ್ರ

ಬೆಂಗಳೂರು: ಜನತಾ ಕರ್ಫ್ಯೂನಿಂದಾಗಿ ಭಾನುವಾರ ಬೆಳಿಗ್ಗೆಯಿಂದ ಸ್ತಬ್ಧವಾಗಿದ್ದ ನಗರದಲ್ಲಿ ಸಂಜೆ 5 ಗಂಟೆಗೆ ಶಂಖನಾದ ಹಾಗೂ ಜಾಗಟೆ ಸದ್ದು ಕೇಳಿಸಿತು. ಮನೆಯಿಂದ ಹೊರಬಂದ ಜನ,ಚಪ್ಪಾಳೆ ತಟ್ಟಿದರು. ಶಿರಬಾಗಿ ನಮಿಸಿದರು. ಇದೆಲ್ಲ ನಡೆದ್ದು ಕೊರೊನಾ ಸೋಂಕು ಹಬ್ಬುವುದನ್ನು ತಡೆದು ದೇಶವನ್ನು ಆರೋಗ್ಯಯುತವನ್ನಾಗಿಡಲು ಶ್ರಮಿಸಿದ ‘ಆರೋಗ್ಯ ಯೋಧ’ರಿಗೆ ಗೌರವ ಸಲ್ಲಿಸಲು....!

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಯಂತೆ, ಸೋಂಕು ಹರಡದಂತೆ ತಡೆಯಲು ರಜೆ ಪಡೆಯದೇ, ಹಗಲಿರುಳು ಬಿಡುವಿಲ್ಲದೇ ದುಡಿಯುತ್ತಿರುವ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿ, ಸ್ಥಳೀಯಾಡಳಿತ ಸಂಸ್ಥೆ ಸಿಬ್ಬಂದಿ, ವಿಮಾನ ನಿಲ್ದಾಣ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿಯ ತ್ಯಾಗಕ್ಕೆ ಜನರು ಸಾಮೂಹಿಕವಾಗಿ ಗೌರವ ಸಲ್ಲಿಸಿದರು.

ಮನೆ, ಅಪಾರ್ಟ್‌ಮೆಂಟ್‌ ಸಮುಚ್ಚಯ, ಪೇಯಿಂಗ್‌ ಗೆಸ್ಟ್‌ ಕಟ್ಟಡಗಳು, ಕಾರಿಡಾರ್‌ಗಳು ಹಾಗೂ ರಸ್ತೆಗಳಲ್ಲಿ ನಿಂತಿದ್ದ ಜನ, ಕುಟುಂಬ ಸಮೇತರಾಗಿ ಚಪ್ಪಾಳೆ ತಟ್ಟಿದ್ದಲ್ಲದೇ ಜಾಗಟೆ ಹಾಗೂ ಗಂಟೆನಾದ ಮೊಳಗಿಸಿದರು. ಒಕ್ಕೊರಲಿನಿಂದ ಘೋಷಣೆಗಳನ್ನು ಕೂಗಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಸಚಿವರಾದ ಶ್ರೀರಾಮುಲು, ಆರ್. ಅಶೋಕ ಸೇರಿ ಹಲವರು ಚಪ್ಪಾಳೆ ತಟ್ಟಿ ಆರೋಗ್ಯ ಯೋಧರಿಗೆ ಬೆಂಬಲ ಸೂಚಿಸಿದರು. ಬೆಂಗಳೂರು ಪೊಲೀಸರು ಸಹ ಕಮಿಷನರ್ ಕಚೇರಿ ಆವರಣದಲ್ಲಿ ಸೇರಿ ಚಪ್ಪಾಳೆ ತಟ್ಟಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಸವನಗುಡಿ ರಾಮಕೃಷ್ಣ ಮಠದಲ್ಲೂ ಆರೋಗ್ಯ ಯೋಧರಿಗೆ ಗೌರವ ಸಲ್ಲಿಸಿದರು. ಸಿನಿಮಾ ನಟ, ನಟಿಯರು, ರಾಜಕೀಯ ಮುಖಂಡರು, ಉದ್ಯಮಿಗಳು, ಸಂಘಟನೆಗಳ ಸದಸ್ಯರು ಸೇರಿ ಹಲವರೂ ಚಪ್ಪಾಳೆ ತಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT