ನಮ್ಮೂರ ಭೂಮಿ ನಮಗಿರಲಿ: ಜನತಾ ಅದಾಲತ್ ನಾಳೆ
ಬೆಂಗಳೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ, ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಶೀರ್ಷಿಕೆಯಡಿ ಇದೇ 19ರಂದು ನಗರದಲ್ಲಿ ಜನತಾ ಅದಾಲತ್ ನಡೆಯಲಿದೆ.
ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ್ ದಾಸ್ ನೇತೃತ್ವದ ನ್ಯಾಯಮಂಡಳಿಯಲ್ಲಿ ಡಾ. ಅ.ನ. ಯಲ್ಲಪ್ಪರೆಡ್ಡಿ, ನಾಗೇಶ ಹೆಗಡೆ, ಪ್ರೊ.ಎಂ.ಕೆ. ರಮೇಶ್, ಡಾ.ಎ.ಆರ್. ವಾಸವಿ, ರೇಣುಕಾ ವಿಶ್ವನಾಥ್ ಇರುತ್ತಾರೆ.
ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ‘ಆಶೀರ್ವಾದ್’ನಲ್ಲಿ ಅಂದು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಅದಾಲತ್ ನಡೆಯಲಿದೆ. ‘ಭೂಮಿ ಕಬಳಿಕೆಯ ಕ್ರೌರ್ಯ ಮತ್ತು ಸಂತ್ರಸ್ತರ ಸಂಕಟಗಳ ವಿವಿಧ ಮುಖಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಅದಾಲತ್ ಆಯೋಜಿಸಲಾಗಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.
ಈ ತಿದ್ದುಪಡಿಯಿಂದ, ಕೃಷಿಕರಲ್ಲದವರು ತಮಗೆ ಬೇಕಾದಷ್ಟು ಕೃಷಿ ಭೂಮಿ ಕೊಂಡು ಇಷ್ಟಬಂದಂತೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಈಗಾಗಲೇ ಸಂಕಷ್ಟಗಳ ಸರಮಾಲೆಯಲ್ಲಿ ನಲುಗಿ ಹೋಗಿರುವ ರೈತರು, ಅದರಲ್ಲಿಯೂ ಸಣ್ಣ ರೈತರು, ಗ್ರಾಮೀಣ ಕೂಲಿಕಾರರ ಬದುಕಿಗೆ ಚೇತರಿಸಿಕೊಳ್ಳಲಾರದಂಥ ಹೊಡೆತ ಬೀಳುತ್ತದೆ. ಇದನ್ನು ಸರ್ಕಾರಗಳು ಇದುವರೆಗೆ ಕಣ್ಣು ತೆರೆದು ನೋಡಿಲ್ಲ. ಪ್ರಸ್ತುತ ತಿದ್ದುಪಡಿಗಳಿಂದಾಗಿ ತೀವ್ರ ಒತ್ತಡಕ್ಕೆ ಒಳಗಾಗಿ ಭೂಮಿ ಮಾರಾಟ ಮಾಡುವ ರೈತರ ಸ್ಥಿತಿ ಭೀಕರವಾಗಲಿದೆ. ಹೀಗಾಗಿ, ಈ ತಿದ್ದುಪಡಿಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶ ಈ ಅದಾಲತ್‌ನದ್ದು ಎಂದು ಸಂಘಟಕರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.