ರೈತರ ಬೆವರ ಹನಿಗಳಿಗೆ ಬೆಲೆ ಸಿಗುತ್ತಿಲ್ಲ: ಜಿ.ಸಿ.ಬಯ್ಯಾರೆಡ್ಡಿ ಕಳವಳ
ಬೆಂಗಳೂರು:‘ಕನಿಷ್ಠ ಬೆಂಬಲ ಬೆಲೆ ನಾಮಕಾವಸ್ಥೆಯಾಗಿದೆ. ದೇಶದ ಶೇ 53 ರಷ್ಟು ರೈತರ ಬೆವರ ಹನಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರು ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು’ ಎಂದು ಸಂಯುಕ್ತ ಹೋರಾಟ–ಕರ್ನಾಟಕದ ಸಂಯೋಜಕ ಜಿ.ಸಿ.ಬಯ್ಯಾರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿ–ಕರ್ನಾಟಕ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಕೊರೊನಾ ಕಂಬನಿಯ ಕುಯಿಲು’ ವೆಬಿನಾರ್ ಸರಣಿಯಲ್ಲಿ ಗುರುವಾರ ‘ಕೊರೊನಾ: ರೈತರ ಸಮಸ್ಯೆ’ ಕುರಿತು ಮಾತನಾಡಿದರು.
‘ದೇಶದ ಶೇ 52ರಷ್ಟು ಜನರನ್ನು ಕೃಷಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ. ಇದು ಸಾಕಾರಗೊಂಡರೆ ಜನ ಹಸಿವಿನಿಂದ ಸಾಯಲಿದ್ದಾರೆ. ಈಗಿನ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸತ್ ನಿಯಮಗಳನ್ನು ಗಾಳಿಗೆ ತೂರಿ ರೈತರ ಬದುಕಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಿದೆ. ದೇಶದಲ್ಲಿ ಶೇ 85ಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಇವರನ್ನು ಗಮನದಲ್ಲಿಟ್ಟುಕೊಂಡು ಕೃಷಿ ನೀತಿ ಸಿದ್ಧಪಡಿಸಬೇಕು. ಹಾಗಾದಾಗ ಅವರ ಬದುಕು ಹಸನಾಗಬಹುದು’ ಎಂದರು.
ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ ‘ಕೃಷಿ ವಲಯವನ್ನು ಕಾರ್ಪೊರೇಟ್ಗಳ ಕೈವಶ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಅದರಿಂದ ತನಗೆ ಹಿನ್ನಡೆಯುಂಟಾಗುತ್ತಿದೆ ಎಂಬುದರ ಅರಿವಿದ್ದರೂ ಹಿಂಪಡೆಯಲು ಹಿಂದೇಟು ಹಾಕುತ್ತಿದೆ. ಈಗ ಎಲ್ಲರಲ್ಲೂ ರೈತ ಪ್ರಜ್ಞೆ ಜಾಗೃತಗೊಂಡಿದೆ. ಹೀಗಾಗಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ’ ಎಂದು ತಿಳಿಸಿದರು.
ಚಿಂತಕ ಪುರುಷೋತ್ತಮ ಬಿಳಿಮಲೆ ‘ರೈತ ಚಳವಳಿಗಳನ್ನು ಒಡೆಯಲು ಕೋಮುವಾದದ ಅಸ್ತ್ರ ಪ್ರಯೋಗಿಸಲಾಯಿತು. ಅದು ಸಂಪೂರ್ಣವಾಗಿ ವಿಫಲವಾಯಿತು. ಕೊರೊನಾ ಎರಡನೇ ಅಲೆ ರೈತರನ್ನು ಗಾಢವಾಗಿ ಬಾಧಿಸಿದೆ. ಮೂರನೇ ಅಲೆ ಬಂದರೆ ಶೇ 25ರಷ್ಟು ಗ್ರಾಮೀಣ ಭಾಗದ ರೈತರು ನಾಶವಾಗುತ್ತಾರೆ. ಈಗಿನ ಮೂರು ಕಾಯ್ದೆಗಳು ಅಧಿಕಾರದಲ್ಲಿರುವವರಿಗೆ ಲಾಭ ತಂದುಕೊಡಬಹುದಷ್ಟೆ. ರೈತ ಚಳವಳಿ ರೈತರಲ್ಲಿ ಸ್ವಾಭಿಮಾನ ಬೆಳೆಸಿದೆ. ಕೊರೊನಾದಿಂದಾಗಿ ಜನ ಸಾಯುತ್ತಿರುವಾಗ ಕೇಂದ್ರ ಸರ್ಕಾರ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದೆ’ ಎಂದು ದೂರಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.