ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ತಗುಲಿದ್ದಕ್ಕೆ ಕೊಲೆ: ಮೂವರ ಬಂಧನ

ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಯುವಕ
Last Updated 6 ಏಪ್ರಿಲ್ 2022, 8:51 IST
ಅಕ್ಷರ ಗಾತ್ರ

ಬೆಂಗಳೂರು: ಜಗಜೀವನರಾಮ್ ನಗರ ಠಾಣೆ ವ್ಯಾಪ್ತಿಯಲ್ಲಿ ಚಂದ್ರಶೇಖರ್ (19) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಹಳೇ ಗುಡ್ಡದಹಳ್ಳಿಯ ಶಾಹೀದ್ ಪಾಷಾ (21), ಹೊಸಕೋಟೆಯ ಶಾಹೀದ್ ಅಲಿಯಾಸ್ ಗೋಲಿ (22) ಬಂಧಿತರು. ಇನ್ನೊಬ್ಬ ಆರೋಪಿ, 17 ವರ್ಷದ ಬಾಲಕ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಐಟಿಐ ಫಿಟ್ಟರ್’ ಕೋರ್ಸ್ ಮುಗಿಸಿದ್ದ ಚಂದ್ರಶೇಖರ್, ನಗರದ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ (ಏಪ್ರಿಲ್ 4) ರಾತ್ರಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸ್ನೇಹಿತರು ನೀಡಿದ್ದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ಸ್ನೇಹಿತನ ಹುಟ್ಟುಹಬ್ಬ: ‘ಸ್ನೇಹಿತ ಸೈಮನ್ ಎಂಬುವರ ಹುಟ್ಟಹಬ್ಬ ಆಚರಣೆಗೆಂದು ಚಂದ್ರಶೇಖರ್ ಹಾಗೂ ಇತರರು, ಛಲವಾದಿ ಪಾಳ್ಯದಲ್ಲಿರುವ ಕೊಠಡಿಯೊಂದರಲ್ಲಿ ಸೇರಿದ್ದರು. ಕೇಕ್‌ ಕತ್ತರಿಸಿ ತಡರಾತ್ರಿಯವರೆಗೂ ಸಂಭ್ರಮಿಸಿದ್ದರು’ ಎಂದು ಅಧಿಕಾರಿ ತಿಳಿಸಿದರು.

‘ಸ್ನೇಹಿತರೆಲ್ಲರೂ ತಡರಾತ್ರಿ ಊಟಕ್ಕೆಂದು ಕೊಠಡಿಯಿಂದ ಹೊರಗೆ ಬಂದಿದ್ದರು. ಆದರೆ, ಎಲ್ಲಿಯೂ ಹೋಟೆಲ್‌ಗಳು ತೆರೆದಿರಲಿಲ್ಲ. ರಂಜಾನ್ ಉಪವಾಸ ಆರಂಭವಾಗಿರುವುದರಿಂದ ಜಗಜೀವನ್‌ರಾಮ್‌ ನಗರದಲ್ಲಿ ಏನಾದರೂ ತಿನ್ನಲು ಸಿಗಬಹುದೆಂದು ಚಂದ್ರಶೇಖರ್ ಹಾಗೂ ಸೈಮನ್ ಬೈಕ್‌ನಲ್ಲಿ ಬಂದಿದ್ದರು.’

‘ಚಂದ್ರಶೇಖರ್ ಚಲಾಯಿಸುತ್ತಿದ್ದ ಬೈಕ್, ಹಳೇ ಗುಡ್ಡದಹಳ್ಳಿಯಲ್ಲಿ ಮತ್ತೊಂದು ಬೈಕ್‌ಗೆ ಗುದ್ದಿತ್ತು. ಆ ಬೈಕ್ ಚಾಲಕನಾಗಿದ್ದ ಆರೋಪಿ ಹಾಗೂ ಇತರರು, ಗಲಾಟೆ ಆರಂಭಿಸಿದ್ದರು. ಚಂದ್ರಶೇಖರ್ ಅವರನ್ನು ಹಿಡಿದು ರಸ್ತೆಯಲ್ಲಿ ಎಳೆದಾಡಿ ಹೊಡೆದಿದ್ದರು. ಬಿಡಿಸಲು ಹೋದ ಸ್ನೇಹಿತ ಸೈಮನ್ ಮೇಲೂ ಹಲ್ಲೆ ಮಾಡಿದ್ದರು.’

’ಚಂದ್ರಶೇಖರ್ ಅವರನ್ನು ಸುತ್ತುವರೆದು ಥಳಿಸಿದ್ದ ಆರೋಪಿಗಳು, ದೇಹದ ಹಲವೆಡೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಚಂದ್ರಶೇಖರ್ ಅವರನ್ನು ಆಟೊದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮ‌ಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು’ ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT