ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ವಲಯದ ಸೇವೆಗಿಲ್ಲ ಮನ್ನಣೆ: ಕೆ.ಎಚ್. ಪಾಟೀಲ

Published 24 ಜನವರಿ 2024, 16:04 IST
Last Updated 24 ಜನವರಿ 2024, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಹಿಂದೆ ರಾಜಕೀಯ ಕ್ಷೇತ್ರ ಪ್ರವೇಶಿಸಲು ಸಾರ್ವಜನಿಕ ವಲಯದಲ್ಲಿ ಮಾಡಿರುವ ಸೇವೆಗಳು ಪ್ರಧಾನ ಪಾತ್ರ ವಹಿಸುತ್ತಿದ್ದವು. ಆದರೆ, ಬದಲಾದ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಸಾರ್ವಜನಿಕ ವಲಯದ ಸೇವೆಗಳು ಪ್ರಾಮುಖ್ಯ ಕಳೆದುಕೊಳ್ಳುತ್ತಿವೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಬೇಸರ ವ್ಯಕ್ತಪಡಿಸಿದರು. ‌

ವಿವೇಕಾನಂದ ಪದವಿಪೂರ್ವ ಕಾಲೇಜು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕೆ.ಎಚ್. ಪಾಟೀಲ ದತ್ತಿ ಉಪನ್ಯಾಸ’ ಕಾರ್ಯಕ್ರಮ ಉದ್ಘಾಟಿಸಿ, ತಮ್ಮ ತಂದೆ ಕೆ.ಎಚ್. ಪಾಟೀಲ ಅವರೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

‘ರೈತಾಪಿವರ್ಗ ಸದೃಢವಾದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಕೆ.ಎಚ್. ಪಾಟೀಲ ಅವರು ಸದಾ ಚಿಂತನೆ ಮಾಡುತ್ತಿದ್ದರು. ಸಹಕಾರ ಕ್ಷೇತ್ರದಲ್ಲಿ ರಚನಾತ್ಮಕ ಕೆಲಸಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಾನು ರಾಜಕೀಯ ಕ್ಷೇತ್ರ ಪ್ರವೇಶಿಸಲು ಬಯಸಿದಾಗ ಸಮಾಜಕ್ಕೆ ನಿನ್ನ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಮೊದಲು ಯಾವುದಾದರೂ ಶಿಕ್ಷಣ ಸಂಸ್ಥೆ ಅಥವಾ ಸಹಕಾರ ಸಂಸ್ಥೆಯಲ್ಲಿ ಕೆಲಸ ಮಾಡಿ, ಅನುಭವ ಸಂಪಾದಿಸಲು ಸೂಚಿಸಿದ್ದರು. ಅವರ ಮಾತುಗಳು ನನ್ನ ರಾಜಕೀಯ ಬದುಕಿನ ಪ್ರಗತಿಗೆ ನಾಂದಿ ಹಾಡಿತು’ ಎಂದು ಸ್ಮರಿಸಿಕೊಂಡರು.

‘ನಮ್ಮ ಹಳ್ಳಿಯ ಕಟ್ಟಕಡೆಯ ಜನಸಾಮಾನ್ಯನೂ ರಾಷ್ಟ್ರದ ಪ್ರಥಮ ಪ್ರಜೆ ಸೇವಿಸುವ ಪೌಷ್ಟಿಕ ಆಹಾರ ಸೇವನೆ ಮಾಡಿ, ಆರೋಗ್ಯಯುತ ನೀರನ್ನು ಕುಡಿಯುವಂತಾಗಬೇಕು. ಆಗ ಮಾತ್ರ ಕೆ.ಎಚ್. ಪಾಟೀಲ ಅವರು ಕಂಡಂತಹ ಕನಸು ನನಸಾಗುತ್ತದೆ’ ಎಂದು ಹೇಳಿದರು. 

ಜನತಾ ಶಿಕ್ಷಣ ಸಂಸ್ಥೆ (ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳು) ಅಧ್ಯಕ್ಷ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ, ‘ಗ್ರಾಮೀಣ ಭಾಗದ ಯುವಜನರು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ವಲಸೆ ಬಂದು, ಇಲ್ಲಿಯೇ ಯಾವುದಾದರೊಂದು ಉದ್ಯೋಗವನ್ನು ಗಿಟ್ಟಿಸಿಕೊಂಡು ತಮ್ಮ ಹಳ್ಳಿಗಳನ್ನು ಮರೆಯುತ್ತಿದ್ದಾರೆ. ಯುವಕರು ತಮ್ಮ ವಿದ್ಯಾಭ್ಯಾಸದ ಜ್ಞಾನವನ್ನು ಆಧುನಿಕ ಕೃಷಿ, ಹೈನುಗಾರಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಗ್ರಾಮಗಳ ಪ್ರಗತಿಗೆ ಶ್ರಮಿಸುವ ಮೂಲಕ ರಾಷ್ಟ್ರಕಟ್ಟುವ ಕೆಲಸವನ್ನು ಪ್ರಾರಂಭಿಸಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕ ಜಿ.ಕೆ. ನಾರಾಯಣರೆಡ್ಡಿ, ಕಾರ್ಯದರ್ಶಿ ಎಚ್.ಜಿ. ಬಾಲಗೋಪಾಲ್, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಐ. ನಾರಾಯಣರೆಡ್ಡಿ, ಹರೀಶ್ ಅಪ್ಪಾರೆಡ್ಡಿ, ವಿವೇಕಾನಂದ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ಅನಿಲ್ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT