ಶನಿವಾರ, ಜನವರಿ 29, 2022
17 °C
ಮೂರು ದಿನಗಳ ಜಾತ್ರೆ ಇಂದಿನಿಂದ ಆರಂಭ

ಕಡಲೆಕಾಯಿ ಪರಿಷೆ: ಕಳೆಗಟ್ಟಿದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಬಳಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆ ಮತ್ತೆ ಕಳೆಗಟ್ಟಿದೆ.

ಕಡಲೆಕಾಯಿ ಪರಿಷೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಜಾತ್ರೆಯ ಆರಂಭಕ್ಕೆ ಇಲ್ಲಿನ ಬೀದಿಗಳಲ್ಲಿ ಎರಡು ದಿನಗಳ ಮುಂಚಿತವಾಗಿಯೇ ಸಂಭ್ರಮ ಮನೆ ಮಾಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ ರಾಶಿಗಳು ಗಮನ ಸೆಳೆಯುತ್ತಿವೆ. ಕಡಲೆಕಾಯಿ ಖರೀದಿಸಲು ಭಾನುವಾರ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಮುಜರಾಯಿ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ನಡೆಯುವ ಕಡಲೆ‌ಕಾಯಿ ಪರಿಷೆಗೆ ಸೋಮವಾರ ಬೆಳ್ಳಿಗೆ 10.30ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ, ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಲಾಗುತ್ತದೆ.

ಕೋವಿಡ್‌ ಕಾರಣಕ್ಕೆ ಕಳೆದ ವರ್ಷ ಪರಿಷೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ, ಕಡಲೆಕಾಯಿ ವ್ಯಾಪಾರ ವಹಿವಾಟು ನಡೆದಿರಲಿಲ್ಲ.

ಪರಿಷೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಬಿಬಿಎಂಪಿ ನಿರ್ಬಂಧ ಹೇರಿದೆ. ಕಡಲೆಕಾಯಿ ಜತೆಗೆ ಆಟಿಕೆಗಳು, ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ಮಳಿಗೆಗಳ ವ್ಯಾಪಾರ ವಹಿವಾಟವೂ ಜೋರಾಗಿ ನಡೆಯುತ್ತಿದೆ. ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಬೀದಿಯ ಎರಡೂ ಬದಿ ಅಂಗಡಿಗಳನ್ನು ತೆರೆಯಲಾಗಿದೆ.

ಪರಿಷೆ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ದಟ್ಟಣೆ ನಿಯಂತ್ರಣಕ್ಕಾಗಿ ವಾಹನಗಳ ಸಂಚಾರ ಮಾರ್ಗಗಳನ್ನು ಡಿ.1ರವರೆಗೆ ಬದಲಾವಣೆ ಮಾಡಲಾಗಿದೆ.

ನವಂಬರ್ ತಿಂಗಳಲ್ಲಿ ಕಾರ್ತಿಕ ಮಾಸದ ಕೊನೆ ಸೋಮವಾರ ಕಡಲೆಕಾಯಿ ಪರಿಷೆ ಆಚರಿಸಲಾಗುತ್ತದೆ. ಪರಂಪರಾನುಗತವಾಗಿ ನಡೆಯುತ್ತಾ ಬಂದಿರುವ ಈ ಪರಿಷೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು