ಶುಕ್ರವಾರ, ಸೆಪ್ಟೆಂಬರ್ 17, 2021
30 °C

ದಾಖಲೆ ತಿರುಚಿ ಮಾರಾಟ: ಅಂತರರಾಜ್ಯ ವಾಹನ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿವಿಧ ರಾಜ್ಯಗಳಲ್ಲಿ ವಾಹನಗಳನ್ನು ಕದ್ದು ಬಳಿಕ ಅವುಗಳ ದಾಖಲೆ ತಿರುಚಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಕಳ್ಳರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಭಾಸ್ಕರ್‌, ಶಾಹೀದ್‌, ಇದಾಯತ್‌ ಹಾಗೂ ಇರ್ಫಾನ್‌ ಯಾನೆ ನಿಹಾಲ್‌ ಬಂಧಿತರು. ಇವರಿಂದ ₹1.05 ಕೋಟಿ ಮೌಲ್ಯದ 9 ಮಿನಿ ಲಾರಿಗಳು ಹಾಗೂ ಹುಂಡೈ ಕ್ರೆಡಾಯ್‌ ಕಾರನ್ನು ಜಪ್ತಿ ಮಾಡಲಾಗಿದೆ. ಶಾಹೀದ್ ಮತ್ತು ಇದಾಯತ್‌ ಹಾಸನ ಜೈಲಿನಲ್ಲಿದ್ದುಕೊಂಡೆ ಕೃತ್ಯಕ್ಕೆ ಸಹಕರಿಸುತ್ತಿದ್ದರು. ಅವರ ವಿಚಾರಣೆ ನಡೆಸಿ ಮತ್ತೆ ಜೈಲಿಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಕಂಪನಿಯೊಂದಕ್ಕೆ ಸೇರಿದ್ದ ಅಶೋಕ ಲೇಲ್ಯಾಂಡ್‌ ಲಾರಿಯನ್ನು ಕಂಪನಿಯ ನಿಲುಗಡೆ ಸ್ಥಳದಿಂದಲೇ ಕದ್ದೊಯ್ಯಲಾಗಿತ್ತು. ಈ ಸಂಬಂಧ ಜುಲೈ 10ರಂದು ದಾಖಲಾಗಿದ್ದ ದೂರನ್ನು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಮಂಗಳೂರಿನಲ್ಲಿ ಲಾರಿಯನ್ನು ಪತ್ತೆ ಮಾಡಿದ್ದರು. ಆರೋಪಿಯೊಬ್ಬನನ್ನು ವಿಚಾರಿಸಿದಾಗ ಆತ ಇತರ ಮೂವರ ಹೆಸರು ಬಾಯಿ ಬಿಟ್ಟಿದ್ದ’ ಎಂದರು.

‘ನಿಹಾಲ್‌ ಅಂತರರಾಜ್ಯ ವಾಹನ ಕಳ್ಳ. ತನ್ನ ಸಹಚರರ ಮೂಲಕ ವಾಹನಗಳನ್ನು ಕಳವು ಮಾಡಿಸುತ್ತಿದ್ದ ಆತ ಅವುಗಳ ದಾಖಲೆಗಳನ್ನು ತಿರುಚುತ್ತಿದ್ದ. ವಾಹನಗಳ ರೂಪವನ್ನೇ ಬದಲಿಸಿ ಇತರರಿಗೆ ಮಾರಾಟ ಮಾಡುತ್ತಿದ್ದ. ಹತ್ತು ವರ್ಷಗಳ ಹಿಂದೆ ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಈತ ಬಳಿಕ ತಲೆ ಮರೆಸಿಕೊಂಡಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕೊಲೆ ಪ್ರಕರಣವೂ ಈತನ ಮೇಲಿದೆ’ ಎಂದು ಮಾಹಿತಿ ನೀಡಿದರು.

‘ಕಾಮಾಕ್ಷಿಪಾಳ್ಯ, ಜಿಗಣಿ, ಮಾಗಡಿ, ಹಿರಿಸಾವೆ, ಸವಣೂರು, ಶಿಕಾರಿಪುರ, ಹಾಸನ ನಗರ, ಹಳೆಬೀಡು, ರಾಣೆಬೆನ್ನೂರು ಠಾಣೆ ವ್ಯಾಪ್ತಿಯಲ್ಲಿ ಲಾರಿಗಳನ್ನು ಕದ್ದಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಹುಂಡೈ ಕಾರನ್ನು ನವದೆಹಲಿಯಿಂದ ಕದ್ದು ತಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದೂ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು