ಸೋಮವಾರ, ನವೆಂಬರ್ 29, 2021
20 °C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾಹಿತಿ

ದಂಡನೆಗೆ ಸಮಗ್ರ ಕನ್ನಡ ಭಾಷಾ ಮಸೂದೆ: ಟಿ.ಎಸ್. ನಾಗಾಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆದಷ್ಟು ಬೇಗ ‘ಸಮಗ್ರ ಕನ್ನಡ ಭಾಷಾ ಮಸೂದೆ’ಯ ಕರಡನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗುವುದು. ಇದು ಕಾಯ್ದೆಯಾಗಿ ಜಾರಿಗೊಂಡಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ಕನ್ನಡಕ್ಕೆ ಶಕ್ತಿ ತುಂಬಲು ಸಾಧ್ಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು. 

ಪ್ರಾಧಿಕಾರವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಕನ್ನಡ– ಕನ್ನಡಿ ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಎರಡು ವರ್ಷಗಳ ಸಾಧನೆ ಬಗ್ಗೆ ಅವರು ವಿವರಿಸಿದರು.

‘ಅಧಿಕಾರ ವಹಿಸಿಕೊಂಡ ಬಳಿಕ ಎರಡು ವರ್ಷಗಳ ಅವಧಿಯಲ್ಲಿ ಒಂದೂವರೆ ವರ್ಷ ಕೋವಿಡ್‌ ನಡುವೆಯೇ ಸಾಗಬೇಕಾಯಿತು. ಅಷ್ಟಾಗಿಯೂ ಸವಾಲುಗಳ ನಡುವೆಯೇ ಇರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ವಿವಿಧ ಕನ್ನಡ ಪರ ಕಾರ್ಯಗಳನ್ನು ನಡೆಸಲಾಯಿತು. ಈ ಅವಧಿಯಲ್ಲಿ ಅಂದುಕೊಂಡಿದ್ದ ಎಲ್ಲವನ್ನೂ ಮಾಡಲು ಸಾಧ್ಯವಾಗಲಿಲ್ಲ’ ಎಂದರು.

ಒಂದು ವರ್ಷಕ್ಕೆ ಯೋಜನೆ: ‘ಎರಡು ವರ್ಷಗಳಲ್ಲಿ ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನ, ನ್ಯಾಯಾಲಯದಲ್ಲಿ ಕನ್ನಡ ಬಳಕೆ ಸೇರಿದಂತೆ ವಿವಿಧ ಅಭಿಯಾನಗಳನ್ನು ನಡೆಸಿ, ಜಾಗೃತಿ ಮೂಡಿಸಲಾಯಿತು. ಮುಂದಿನ ಒಂದು ವರ್ಷದಲ್ಲಿ ಕೈಗೊಳ್ಳಬೇಕಾದ ಯೋಜನೆಗಳನ್ನು ಈಗಾಗಲೇ ರೂಪಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕನ್ನಡ ಅನುಷ್ಠಾನ ಅಭಿಯಾನ, ತಂತ್ರಾಂಶಗಳ ಮೂಲಕ ತಂತ್ರಜ್ಞಾನದಲ್ಲಿ ಭವಿಷ್ಯದ ಕನ್ನಡ ಸಿದ್ಧಪಡಿಸುವಿಕೆ ಹಾಗೂ ಆನ್‌ಲೈನ್ ಕನ್ನಡ ಕಲಿಕಾ ಪಾಠಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಧ್ಯಯನ ನಡೆಸಲು ಹಾಗೂ ನಾಡಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಇಚ್ಛಿಸುವವರಿಗೆ ಅನುಕೂಲವಾಗುವಂತೆ ‘ಕರ್ನಾಟಕ ಸಂಗಾತಿ’ ಕೃತಿಯನ್ನು ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತಿದೆ’ ಎಂದರು. 

ಪ್ರಾಧಿಕಾರದ ಸದಸ್ಯ ಪ್ರೊ. ಅಬ್ದುಲ್ ರೆಹಮಾನ್ ಪಾಷ, ‘ಕನ್ನಡ ತಿಳಿಯದವರಿಗೆ ಕನ್ನಡ ಕಲಿಸುವ ಅಭಿಯಾನವನ್ನು ನಡೆಸುತ್ತಿದ್ದೇವೆ. ಜಿಲ್ಲಾ ಮಟ್ಟದಲ್ಲಿಯೂ ಅನುವಾದ ಕಮ್ಮಟಗಳನ್ನು ನಡೆಸಲು ನಿರ್ಧರಿಸಲಾಗಿದೆ. ಉರ್ದು ಭಾಷಾ ಶಿಕ್ಷಕರಿಗೆ ಕನ್ನಡ ಅನುವಾದ ಕಮ್ಮಟವನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ಸದಸ್ಯರಾದ ಗುಬ್ಬಿಗೂಡು ರಮೇಶ್, ಡಾ.ಸಿ.ಎ. ಕಿಶೋರ್, ಕಾರ್ಯದರ್ಶಿ ಸಂತೋಷ್ ಹಾನಗಲ್ ಇದ್ದರು. 

‘ಕೆನರಾ ಬ್ಯಾಂಕ್‌ನಲ್ಲಿ ಕನ್ನಡ ಕಡೆಗಣನೆ’

‘ಟಿ.ಎಸ್. ನಾಗಾಭರಣ ಅವರ ನೇತೃತ್ವದಲ್ಲಿ ಪ್ರಾಧಿಕಾರದವರು ಕೆನರಾ ಬ್ಯಾಂಕ್‌ ಕೇಂದ್ರ ಕಚೇರಿ ಆವರಣದಲ್ಲಿ ಈ ಹಿಂದೆ ಕನ್ನಡ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಸಿದ್ದರು. ಆದರೆ, ಅದರಿಂದ ಯಾವುದೇ ಬದಲಾವಣೆಗಳಾಗಿಲ್ಲ. ನಮ್ಮ ನೆಲದಲ್ಲೇ ಹುಟ್ಟಿದ ಬ್ಯಾಂಕ್ ಆದರೂ ಕನ್ನಡ ಅಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಹಿಂದಿಯಲ್ಲಿಯೇ ವ್ಯವಹರಿಸುತ್ತಾರೆ’ ಎಂದು ಬ್ಯಾಂಕಿನ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ಹಿಂದಿ ದಿವಸದ ಪ್ರಯುಕ್ತ ಬ್ಯಾಂಕ್‌ನಲ್ಲಿ ತಿಂಗಳು ಪೂರ್ತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಆದರೆ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮಗಳನ್ನು ನಡೆಸಲು ಯಾರೂ ಆಸಕ್ತಿ ತೋರುತ್ತಿಲ್ಲ. ಅಲ್ಲಿ ಕನ್ನಡಿಗರು ಇದ್ದರೂ ಕನ್ನಡದ ಕಾರ್ಯಕ್ರಮಗಳನ್ನು ನಡೆಸುವ ವಾತಾವರಣವಿಲ್ಲ. ಹಾಗಾಗಿ, ಪ್ರಾಧಿಕಾರವು ಬ್ಯಾಂಕ್‌ಗಳಿಗೆ ನಿರಂತರ ಭೇಟಿ ನೀಡಿ, ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು