ಶುಕ್ರವಾರ, ನವೆಂಬರ್ 22, 2019
23 °C

ರಾಜ್ಯೋತ್ಸವ ಆಚರಿಸಿದ ಸಿಬ್ಬಂದಿ ವಜಾ: ಪ‍್ರತಿಭಟನೆ

Published:
Updated:
Prajavani

ಕೆ.ಆರ್.ಪುರ: ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು ಎಂಬ ಕಾರಣಕ್ಕೆ ನೌಕರ ನವೀನ್ ಮಲ್ಲೇನಹಳ್ಳಿ ಅವರನ್ನು ಐಟಿಸಿ ಇನ್ಫೊಟೆಕ್ ಸಂಸ್ಥೆ ಕೆಲಸದಿಂದ ವಜಾಗೊಳಿಸಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡಪರ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು.

ಪ್ರತಿಭಟನೆಗೂ ಮುನ್ನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಬೈಕ್ ರ‍್ಯಾಲಿ ನಡೆಸಿದರು. ‘ಕನ್ನಡಿಗರಿಗೆ ಯಾವುದೇ ಕಾರಣಕ್ಕೂ ಅವಮಾನ ಮಾಡಬಾರದು. ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಐಟಿಸಿ ಕಂಪನಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಪ್ರತಿಭಟನೆ ವಿಷಯ ತಿಳಿದು ಐಟಿಸಿ ಕಂಪನಿಯ ಪ್ರಧಾನ ವ್ಯವಸ್ಥಾಪಕ ಕೋದಂಡರಾಮ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ‘ಕನ್ನಡಿಗರಿಗೆ ಉದ್ಯೋಗ ಕೊಡಬೇಕು. ನವೀನ್ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ‘ಐಟಿಸಿ ಕಂಪನಿಯಲ್ಲಿ 7 ಸಾವಿರ ಹುದ್ದೆಗಳಲ್ಲಿ 800 ಹುದ್ದೆಗಳು ಮಾತ್ರ ಕನ್ನಡಿಗರಿಗೆ ದೊರಕಿವೆ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದಕ್ಕಾಗಿ ಕನ್ನಡಿಗ ನವೀನ್‌ ಅವರನ್ನು ಕೆಲಸದಿಂದ ಕಿತ್ತು ಹೊಟ್ಟೆ ಮೇಲೆ ಹೊಡೆಯುವಂತಹ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬಾರದೇ’ ಎಂದು ಪ್ರಶ್ನಿಸಿದರು. ‘ಖಾಸಗಿ ಕಂಪನಿಗಳಲ್ಲಿ ಹಿರಿಯ ಅಧಿಕಾರಿಗಳು ಕನ್ನಡಿಗರಿಗೆ ನಿರಂತರವಾಗಿ ತೊಂದರೆ ಕೊಡುತ್ತ ಬಂದಿದ್ದಾರೆ. ಇದರ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಕ್ರಿಯಿಸಿ (+)