ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ ಮುಗಿದ ಅಧ್ಯಾಯವೆಂದು ಕೇಂದ್ರ ಘೋಷಿಸಲಿ: ಸಿ.ವೀರಣ್ಣ

ಬೆಂಗಳೂರು ನಗರ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Last Updated 20 ಮಾರ್ಚ್ 2021, 18:18 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಗಳ ಗಡಿ ವಿವಾದ ಮುಗಿದ ಅಧ್ಯಾಯ ಎಂದು ಕೇಂದ್ರ ಸರ್ಕಾರಘೋಷಣೆ ಮಾಡಬೇಕು’ ಎಂದು ಸಾಹಿತಿ ಡಾ.ಸಿ. ವೀರಣ್ಣ ಒತ್ತಾಯಿಸಿದರು.

ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಳದ ಪಶುವೈದ್ಯಕೀಯ ಮಹಾ ವಿದ್ಯಾಲಯದ ಆವರಣದಲ್ಲಿನ ಹಳೆ ವಿದ್ಯಾರ್ಥಿಗಳ ಸಂಘದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ನಗರ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಳಗಾವಿ ನಮ್ಮದು ಎಂದು ಮಹಾರಾಷ್ಟ್ರ ಪದೇ ಪದೇ ಹೇಳುವ ಮೂಲಕ ಜನರ ಭಾವನೆ ಕದಡುತ್ತಿದೆ. ಮಹಾರಾಷ್ಟ್ರದವರೇ ಆಗಿದ್ದ ಮಹಾಜನ್ ವರದಿಯನ್ನು ಕನ್ನಡಿಗರು ಒಪ್ಪಿಕೊಂಡಿದ್ದೇವೆ. ಮಹಾರಾಷ್ಟ್ರದವರು ಪದೇ ಪದೇ ತಗಾದೆ ತೆಗೆಯುವುದು ಸಲ್ಲ’ ಎಂದು ಹೇಳಿದರು.

‘ಹಾಗೆ ನೋಡಿದರೆ ಊಟಿ ಮತ್ತು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಹಾಗೆಂದು ದಿನ ನಿತ್ಯ ಜಗಳವಾಡಿಕೊಂಡು ಕೂರಲು ಸಾಧ್ಯವೇ? ಗಡಿ ವಿಚಾರದಲ್ಲಿ ಯಾವ ರಾಜ್ಯಗಳೂ ತಕರಾರು ಎತ್ತಕೂಡದು ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ರವಾನಿಸಬೇಕು’ ಎಂದು ಸಲಹೆ ನೀಡಿದರು.

‘ಕನ್ನಡ ಮಾತೃಭಾಷೆಯಾಗಿದೆಯೇ ವಿನಃ ಅನ್ನದ ಭಾಷೆಯಾಗಿಲ್ಲ. ಹೀಗಾಗಿಯೇ, ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ವ್ಯಾಮೋಹದಲ್ಲಿ ಮುಳುಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಉದ್ಯೋಗ ಸಿಗಲಿದೆ ಎಂಬ ಖಾತ್ರಿಯನ್ನು ಸರ್ಕಾರ ನೀಡಿದರೆ ಕನ್ನಡ ಶಾಲೆಗಳು ತಾನಾಗಿಯೇ ಉಳಿಯುತ್ತವೆ. ಆದರೆ, ಹೀಗೆ ಮಾಡುವ ಧೈರ್ಯ ಸರ್ಕಾರಕ್ಕೆ ಇಲ್ಲ. ಏಕೆಂದರೆ, ಇಂಗ್ಲಿಷ್ ಮಾಧ್ಯಮದ ಬಹುತೇಕ ಶಾಲೆಗಳು ರಾಜಕಾರಣಿಗಳಿಗೇ ಸೇರಿವೆ’ ಎಂದರು.

‘ಮೀಸಲಾತಿಗಾಗಿ ಮಠಾಧೀಶರು ಹಾದಿ–ಬೀದಿಗಳಲ್ಲಿ ರಂಪಾಟ ಮಾಡುತ್ತಿರುವುದು ಈ ದೇಶದ ದೌರ್ಭಾಗ್ಯ. ಮಾಡಬೇಕಾದ ಕೆಲಸ ಬಿಟ್ಟು ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ರಾಜ್ಯದ ಜನರು ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಎಲ್ಲಾ ಜಾತಿಯ ಬಡವರನ್ನು ಮೇಲೆತ್ತುವುದೇ ನಿಮ್ಮ ಉದ್ದೇಶವಾಗಿದ್ದರೆ, ಅದನ್ನು ಮಾಡಲು ನಿಮಗೆ ಅಡ್ಡಿಯಾಗಿರುವವರು ಯಾರು ಎಂದು ಸ್ಪಷ್ಟಪಡಿಸಬೇಕು. ಬಲ ಇದೆ ಎಂಬ ಕಾರಣಕ್ಕೆ ಗೋಡೆ ಗುದ್ದುವ ಕೆಲಸ ಮಾಡಬಾರದು’ ಎಂದರು.

‘ಶೇ 70ರಷ್ಟು ರೈತರನ್ನು ಹೊಂದಿರುವ ದೇಶ ನಮ್ಮದು. ಅವರನ್ನು ನೋಯಿಸುವ ಕೆಲಸವನ್ನು ಯಾರೂ ಮಾಡಬಾರದು. ಎಲ್ಲರ ಹಿತಾಸಕ್ತಿ ಕಾಪಾಡುವ ನಾಯಕತ್ವ ಈ ದೇಶಕ್ಕೆ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಸೃಜನಶೀಲ ಅಧ್ಯಾಪನಾ ಕೇಂದ್ರದ ಅಧ್ಯಕ್ಷ ಡಾ. ಗುರುರಾಜ ಕರಜಗಿ, ‘ಟಿ.ವಿ ಧಾರಾವಾಹಿ ನೋಡುವುದರ ಬದಲು ಕನ್ನಡದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಆಗ ಮಾತ್ರ ಕನ್ನಡ ಸಾಹಿತ್ಯ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆ ಕಲಿಯಲಿದೆ’ ಎಂದು ಹೇಳಿದರು.

ಈಜಿಪ್ಟ್‌ನಲ್ಲಿ ಕನ್ನಡ ಶಾಸನ

ಕನ್ನಡ ಅತ್ಯಂತ ಪ್ರಾಚೀನ ಭಾಷೆ ಎಂಬುದಕ್ಕೆ ಈಜಿಪ್ಟ್‌ನಲ್ಲಿರುವ ಶಾಸನವೇ ಸಾಕ್ಷಿ ಎಂದು ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡರಂಗೇಗೌಡ ಹೇಳಿದರು.

‘ಹಲ್ಮಿಡಿ ಶಾಸನವೇ ಮೊದಲ ಶಾಸನವೆಂದು ನಾವು ಭಾವಿಸಿಕೊಂಡಿದ್ದೇವೆ. ಈಜಿಪ್ಟಿನಲ್ಲಿ ಇದ್ದ ಎರಡು ಗ್ರಂಥಾಲಯಗಳಲ್ಲಿ ಎಲ್ಲಾ ಭಾಷೆಗಳ ತಾಳೆಗರಿಗಳಿದ್ದವು. ಅಲೆಕ್ಸಾ‌ಂಡರ್ ದಂಡಯಾತ್ರೆ ವೇಳೆ ಅವು ಬೆಂಕಿಗೆ ಆಹುತಿಯಾದವು. ಅಳುದುಳಿದ ತಾಳೆಗರಿಯ ತುಣುಕುಗಳನ್ನು ಕಲ್ಲಿನಲ್ಲಿ ಕೆತ್ತಿಸಿ ಸಂರಕ್ಷಿಸಲಾಗಿದೆ. ಅದರಲ್ಲಿ ‘ಊರೊಳ್’ ಎಂಬ ಪದ ಇದೆ. ಇದರ ಕುರಿತು ಸಂಶೋಧನೆಗೆ ಸಾಕಷ್ಟು ಸಮಯ, ಹಣವನ್ನು ನಾನು ಖರ್ಚು ಮಾಡಿದ್ದೇನೆ’ ಎಂದು ವಿವರಿಸಿದರು.

‘ಕನ್ನಡಕ್ಕೆ ಪ್ರಾಚೀನ ಪರಂಪರೆ ಇದೆ. ಆದರೆ, ಈಗ ಕನ್ನಡ ನಾಡಿನಲ್ಲೇ ಭಾಷೆ ಅನಾಥವಾಗುತ್ತಿದೆ. ಸಂಪರ್ಕಕ್ಕಾಗಿ ಎಷ್ಟು ಭಾಷೆಯನ್ನಾದರೂ ಕಲಿಯಿರಿ. ಆದರೆ, ಕನ್ನಡಕ ನಮ್ಮ ಉಸಿರಾಗಿರಬೇಕು’ ಎಂದು ಹೇಳಿದರು.

ಮೆರವಣಿಗೆ ಮೊಟುಕು

ಕೋವಿಡ್ ಕಾರಣಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮೊಟುಕುಗೊಳಿಸಲಾಗಿತ್ತು. ಕಾಲೇಜಿನ ಗೇಟಿನಿಂದ ಸಭಾಂಗಣದ ತನಕ ಮಾತ್ರ ಮೆರವಣಿಗೆ ಮಾಡಲಾಯಿತು.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಬಾರದು ಎಂಬ ಕಾರಣಕ್ಕೆ ಹೆಚ್ಚು ಜನರಿಗೆ ಆಹ್ವಾನವನ್ನೂ ನೀಡಲಿಲ್ಲ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT