ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತಾರ್: 3 ಸಾವಿರ ಕನ್ನಡಿಗರ ಸಂಕಷ್ಟ

ರಾಜ್ಯಕ್ಕೆ ವಿಮಾನ ಸೇವೆ ಕಲ್ಪಿಸುವಂತೆ ಮನವಿ
Last Updated 25 ಮೇ 2020, 20:03 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಉದ್ದೇಶಗಳಿಗಾಗಿ ಕತಾರ್‌ಗೆ ತೆರಳಿದ್ದ ಮೂರು ಸಾವಿರ ಕನ್ನಡಿಗರು ಲಾಕ್‍ಡೌನ್‍ನಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ‌

ಕತಾರ್‌ ರಾಜಧಾನಿ ದೋಹಾದಿಂದ ಭಾರತದ ವಿವಿಧ ಭಾಗಗಳಿಗೆ ಈ ವಾರ ವಿಶೇಷ ವಿಮಾನಗಳ ಸೇವೆ ಇದೆ. ಕನ್ನಡಿಗರನ್ನು ಕರೆದುಕೊಂಡು ಬರಲು ರಾಜ್ಯಕ್ಕೂ ವಿಮಾನ ಸೇವೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

'ಇಲ್ಲಿನ ಭಾರತೀಯ ರಾಯಭಾರಿ ಕಾರ್ಯಾಲಯದಡಿ ಕಾರ್ಯನಿರ್ವಹಿಸುತ್ತಿರುವ 'ಭಾರತೀಯ ಸಮುದಾಯ ಹಿತೈಷಿ ವೇದಿಕೆ'ಯು (ಐಸಿಬಿಎಫ್) ಕತಾರ್‌ನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಧಾವಿಸಿತು. ಲಾಕ್‍ಡೌನ್ ಬಳಿಕ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಯಿತು. ಮೊದಲ ಹಂತದಲ್ಲಿ ಬೆಂಗಳೂರಿಗೆ ಯಾವುದೇ ವಿಮಾನ ಸೇವೆ ಇರಲಿಲ್ಲ. ವೇದಿಕೆ ಕೋರಿಕೆ ಮೇರೆಗೆ ಎರಡನೇ ಹಂತದಲ್ಲಿ 185 ಮಂದಿಯನ್ನು ಮೇ 22ರಂದು ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿಸಲಾಯಿತು' ಎಂದು ವೇದಿಕೆಯ ಜಂಟಿ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಬ್ಬಾಗಿಲು ತಿಳಿಸಿದರು.

'ಮೂರು ಸಾವಿರ ಕನ್ನಡಿಗರು ತಾಯ್ನಾಡಿಗೆ ಮರಳಲು ಕಾತುರದಿಂದ ಕಾಯುತ್ತಿದ್ದಾರೆ. 1,500ಕ್ಕೂ ಹೆಚ್ಚು ಮಂದಿ ಈಗಾಗಲೇ ಪ್ರಯಾಣ ಕೋರಿ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಬಹುಪಾಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಚಿಕ್ಕಮಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ಸೇರಿ ವಿವಿಧ ಜಿಲ್ಲೆಗಳ ಜನರೂ ಇದ್ದಾರೆ' ಎಂದರು.

'ಇವರಲ್ಲಿ ಬಂಧುಗಳನ್ನು ಕಾಣಲು ಬಂದವರು, ಪ್ರವಾಸಿಗರು, ಉದ್ಯೋಗವನ್ನರಸಿ ಬಂದವರು ಹಾಗೂ ಕಾರ್ಮಿಕರಿದ್ದಾರೆ. ಗರ್ಭಿಣಿಯರು, ಹಿರಿಯ ನಾಗರಿಕರಿಗೆ ರಾಜ್ಯದಲ್ಲಿ ಸಿಗುತ್ತಿದ್ದ ವೈದ್ಯಕೀಯ ನೆರವು ಸಿಗುತ್ತಿಲ್ಲ. ಲಾಕ್‍ಡೌನ್‍ನಿಂದ ಇವರಿಗೆ ಊಟ, ವಸತಿ ಸಮಸ್ಯೆ ಉಂಟಾಗಿದೆ. ವಿಮಾನ ಸೇವೆ ಇಲ್ಲದೆ ಕುಟುಂಬಸ್ಥರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೆಲವರಿಗೆ ಸಾಧ್ಯವಾಗಲಿಲ್ಲ' ಎಂದು ವಿವರಿಸಿದರು.

'ವಿಮಾನ ಸೇವೆ ಒದಗಿಸುವಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಕನ್ನಡಿಗರನ್ನು ಕೂಡಲೇ ರಾಜ್ಯಕ್ಕೆ ಕರೆಸಿಕೊಳ್ಳಲು ವಿಮಾನ ಸೇವೆ ಕಲ್ಪಿಸುವ ನಿರೀಕ್ಷೆಯಲ್ಲಿದ್ದೇವೆ' ಎಂದರು.

ಐಸಿಬಿಎಫ್‍ನಿಂದ ಕನ್ನಡಿಗರಿಗೆ ಆಹಾರ ಪೂರೈಕೆ: 'ಕತಾರ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಪತ್ತೆಹಚ್ಚಿದ ಐಸಿಬಿಎಫ್ ಸಂಸ್ಥೆಯು ಪ್ರತಿನಿತ್ಯ 700 ಮಂದಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಿದೆ. ದಾನಿಗಳ ನೆರವಿನಿಂದ ತರಕಾರಿ, ಸೊಪ್ಪು, ಹಣ್ಣುಗಳನ್ನು ವಿತರಿಸಲಾಗುತ್ತಿದೆ' ಎಂದು ಸುಬ್ರಹ್ಮಣ್ಯ ಹೆಬ್ಬಾಗಿಲು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT