ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview : ಪುಲಕೇಶಿನಗರ ಕ್ಷೇತ್ರದ ಅಭ್ಯರ್ಥಿಗಳು ಏನಂತಾರೆ?

Published 6 ಮೇ 2023, 20:25 IST
Last Updated 6 ಮೇ 2023, 20:25 IST
ಅಕ್ಷರ ಗಾತ್ರ

ರಾಜೇಶ್‌ ರೈ ಚಟ್ಲ

ಅಖಂಡ ಶ್ರೀನಿವಾಸ ಮೂರ್ತಿ : ಬಿಎಸ್‌ಪಿ ಅಭ್ಯರ್ಥಿ

ಶಾಸಕರಾಗಿದ್ದ ಅವಧಿಯ ನಿಮ್ಮ ಸಾಧನೆಗಳನ್ನು ಹೇಳಿಕೊಳ್ಳಬಹುದೇ?

ಕ್ಷೇತ್ರದಲ್ಲಿ ಶೇ 90ರಷ್ಟು ಕೊಳಗೇರಿ ಪ್ರದೇಶ. ಹತ್ತು ವರ್ಷಗಳ ಹಿಂದೆ ಬಹುತೇಕ ಭಾಗದಲ್ಲಿ ಒಂದು ಬಿಂದಿಗೆ ನೀರಿಗೆ ₹ 10 ಕೊಡಬೇಕಿತ್ತು. ಆದರೆ, ಈ ಬಹುದೊಡ್ಡ ಸಮಸ್ಯೆಯನ್ನು ಪರಿಹರಿಸಿದ್ದೇನೆ. ಪ್ರತಿ ಪ್ರದೇಶದಲ್ಲಿ ಕೊಳವೆಬಾವಿ, ಕುಡಿಯುವ ನೀರು, ಒಳಚರಂಡಿ, ಬೀದಿದೀಪ ವ್ಯವಸ್ಥೆ ಆಗಿದೆ. ರಸ್ತೆ, ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಶಾಲೆಗಳಿಗೆ ಹೊಸ ಕಟ್ಟಡಗಳನ್ನು ಕಟ್ಟಿಸಿದ್ದೇನೆ. ಎರಡು ಪದವಿ ಕಾಲೇಜು, ಎರಡು ಪಿಯು ಕಾಲೇಜುಗಳು ಆಗಿವೆ. ಕ್ರೀಡಾ ಕಾಂಪ್ಲೆಕ್ಸ್‌, ಅಂಬೇಡ್ಕರ್‌ ಭವನ, ಇತರ ಸಮುದಾಯ ಭವನಗಳು, ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಿದ್ದೇನೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ನನ್ನ ಅವಧಿಯಲ್ಲೇ ಆಗಿದೆ. ಕ್ಷೇತ್ರಕ್ಕೆ ಐಟಿಐ ಮಂಜೂರಾಗಿದೆ. ಸಾವಿರಾರು ಕುಟುಂಬಗಳಿಗೆ ಹಕ್ಕು ಪತ್ರ ಕೊಟ್ಟಿದ್ದೇನೆ. ವಸತಿರಹಿತರಿಗಾಗಿ ಆರು ಸಾವಿರ ಮನೆಗಳನ್ನು ಕಟ್ಟಿಸಿದ್ದೇನೆ. ಕೋವಿಡ್‌ ಸಮಯದಲ್ಲಿ 50 ಸಾವಿರ ಜನರಿಗೆ ರೇಷನ್‌ ಕಿಟ್‌, 10 ಲಕ್ಷ ಜನಕ್ಕೆ ಊಟ ಪೂರೈಸಿದ್ದೇನೆ. ಹೀಗೆ ಕ್ಷೇತ್ರದ ಇಡೀ ಚಿತ್ರಣ ಬದಲಾಗಲು ನಾನು ಕಾರಣ.

ಹಾಗಿದ್ದರೆ, ನಿಮಗೆ ಈ ಬಾರಿ ಕಾಂಗ್ರೆಸ್‌ ಮತ್ತೆ ಟಿಕೆಟ್‌ ಯಾಕೆ ಕೊಡಲಿಲ್ಲ?

2018ರ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು 81,626 ಮತಗಳಿಂದ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್ ವಿರುದ್ಧ ಗೆದ್ದಿದ್ದೇನೆ. ಆದರೂ 2020ರಲ್ಲಿ ಡಿಜಿ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆ ನೆಪವಾಗಿಟ್ಟು ಪಕ್ಷದ ಹಿರಿಯ ನಾಯಕರು ತೀರ್ಮಾನ ತೆಗೆದುಕೊಂಡು ಟಿಕೆಟ್‌ ತಪ್ಪಿಸಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನನಗೆ ಶಿಕ್ಷೆ ಕೊಟ್ಟಿದ್ದಾರೆ. ನನ್ನನ್ನು ಬಲಿಪಶು ಮಾಡಿದ್ದಾರೆ. ಕ್ಷೇತ್ರದಲ್ಲಿ ನಾವು ಹಿಂದುಗಳು, ಮುಸ್ಲಿಮರು, ಕ್ರಿಶ್ಚಿಯನರು, ಜೈನರು ಹೀಗೆ ಎಲ್ಲ ಧರ್ಮದವರು ಅಣ್ಣ ತಮ್ಮಂದಿರಂತೆ ಒಟ್ಟಾಗಿ ಇದ್ದೇವೆ. ಆದರೂ ಷಡ್ಯಂತ್ರ ಮಾಡಿ ಟಿಕೆಟ್‌ ಸಿಗದಂತೆ ಮಾಡಿದ್ದಾರೆ

ಕಾಂಗ್ರೆಸ್‌ ಟಿಕೆಟ್‌ ನೀಡದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದವರು ಬಿಎಸ್‌ಪಿ ಸೇರಲು ಏನು ಕಾರಣ?

ಕಾಂಗ್ರೆಸ್‌ ಟಿಕೆಟ್‌ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆ. ಆದರೆ, ಕ್ಷೇತ್ರ ನನ್ನ ಪರ ಒಲವು ಹೊಂದಿದ್ದ ನಾಯಕರು, ಬೆಂಬಲಿಗರು ಯಾವುದಾದರೂ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಿದರೆ ಒಳ್ಳೆಯದೆಂದು ಸಲಹೆ ನೀಡಿದರು. ಹೀಗಾಗಿ, ಕಾಂಗ್ರೆಸ್‌ ತ್ಯಜಿಸಿ  ಬಿಎಸ್‌ಪಿ ಸೇರಿ ಕಣಕ್ಕಿಳಿದಿದ್ದೇನೆ.

ನಿಮ್ಮ ಮೇಲೆ ಕ್ಷೇತ್ರದ ಮತದಾರರಿಗೆ ಅನುಕಂಪ ಇದೆ ಅನಿಸುತ್ತಿದೆಯೇ?

ನನಗೆ ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದಕ್ಕೆ ಕ್ಷೇತ್ರದ ನಾಯಕರಿಗೆ, ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ನೋವಾಗಿದೆ. ನನಗೆ ಅನ್ಯಾಯ ಆಗಿದೆ ಎನ್ನುವುದನ್ನು ಜನ ಮಾತನಾಡುತ್ತಿದ್ದಾರೆ. ಈ ಅನುಕಂಪ ಖಂಡಿತವಾಗಿಯೂ ನನಗೆ ಅನುಕೂಲವಾಗುತ್ತದೆ. ಜನರಿಗೆ ನನ್ನ ಮೇಲೆ ವಿಶ್ವಾಸ ಬಂದಿದೆ. ಅವರೆಲ್ಲರೂ ನನ್ನ ಜೊತೆಗೇ ಇದ್ದಾರೆ. ಅವರೇ ನನಗೆ ಬಲ. ಹೀಗಾಗಿ ಗೆಲ್ಲುವ ಪೂರ್ಣ ವಿಶ್ವಾಸವಿದೆ.

ನಿಮ್ಮ ಪ್ರಚಾರ ಹೇಗೆ ಸಾಗಿದೆ?

ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆ ಸಂಪರ್ಕ ಮಾಡಿದ್ದೇನೆ. ಎಲ್ಲ ಕಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.  

ನಿಮ್ಮ ಪ್ರತಿಸ್ಪರ್ಧಿ ಯಾರು?

ಕಾಂಗ್ರೆಸ್‌ ಅಭ್ಯರ್ಥಿ ನನ್ನ ಸ್ಪರ್ಧಿ. ಎಸ್‌ಡಿಪಿಐ ಅಭ್ಯರ್ಥಿಯೂ ಕಣದಲ್ಲಿದ್ದಾರೆ. ಆದರೆ, ಅವರಿಬ್ಬರೂ ಈ ಕ್ಷೇತ್ರದವರಲ್ಲ. ನಾನು ಸ್ಥಳೀಯ ನಿವಾಸಿ. ಇಡೀ ಕ್ಷೇತ್ರವನ್ನು ಚೆನ್ನಾಗಿ ಬಲ್ಲೆ. ಮತ್ತೊಮ್ಮೆ ವಿಧಾನಸೌಧ ಸೌಧ ಪ್ರವೇಶಿಸಲು ಕ್ಷೇತ್ರದ ಜ ನ ನನಗೆ ಆಶೀರ್ವಾದ ಮಾಡುತ್ತಾರೆಂಬ ಪೂರ್ಣ ವಿಶ್ವಾಸವಿದೆ.

ಎ.ಸಿ. ಶ್ರೀನಿವಾಸ್‌
ಎ.ಸಿ. ಶ್ರೀನಿವಾಸ್‌

ನನ್ನ ಪಕ್ಷದ ಮತಗಳು ನನ್ನ ಕೈಹಿಡಿಯಲಿದೆ: ಎ.ಸಿ. ಶ್ರೀನಿವಾಸ್ ಕಾಂಗ್ರೆಸ್‌ ಅಭ್ಯರ್ಥಿ

ಆಕಸ್ಮಿಕವಾಗಿ ಕ್ಷೇತ್ರದ ಟಿಕೆಟ್‌ ಗಿಟ್ಟಿಸಿಕೊಂಡಿದ್ದೀರಿ. ಏನು ಅನಿಸುತ್ತದೆ?

ನಾನು ಈ ಹಿಂದೆ ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಈ ಬಾರಿ ದೇವನಹಳ್ಳಿ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆ ಮಾಡಿದ್ದೆ. ಅಲ್ಲಿಂದ ಕಣಕ್ಕಿಳಿಯಲು ಎಲ್ಲ ತಯಾರಿಯನ್ನೂ ಮಾಡಿದ್ದೆ. ಆದರೆ ಪಕ್ಷದ ನಾಯಕರು ನನಗೆ ಈ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದಾರೆ.

ನಿಮಗೆ ಈ ಕ್ಷೇತ್ರ ಹೊಸತಲ್ವಾ?

ಮೊದಲು ಈ ಕ್ಷೇತ್ರ ಯಲಹಂಕದ ಭಾಗವಾಗಿತ್ತು. 2008ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡನೆಯ ಬಳಿಕ ಹೊಸ ಕ್ಷೇತ್ರವಾಗಿದೆ. ನಾನು ಪಕ್ಷದ ಹಿರಿಯ ಮುಖಂಡ ಜಾಫರ್‌ ಷರೀಫ್ ಜೊತೆ ಈ ಭಾಗದಲ್ಲಿ ಕೆಲಸ ಮಾಡಿದ್ದೇನೆ.

ಮತದಾರರಿಗೆ ಏನು ಭರವಸೆ ಕೊಡುತ್ತೀರಿ ?

ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಕಸ ನಿರುದ್ಯೋಗ ಸಮಸ್ಯೆಯಿದೆ. ಶಾಲಾ ಕಾಲೇಜು ಕ್ರೀಡಾಂಗಣ ಇಲ್ಲ. ಉದ್ಯಾನಗಳಿಲ್ಲ. ಆಸ್ಪತ್ರೆಗಳಿಲ್ಲ. ಜನರಿಗೆ ಅಗತ್ಯವಾದ ಮೂಲಸೌಲಭ್ಯ ಒದಗಿಸಲು ನಾನು ಬದ್ಧನಾಗಿದ್ದೇನೆ. ಇಡೀ ಕ್ಷೇತ್ರದ ಅಭಿವೃದ್ಧಿಗೆ ಖಂಡಿತಾ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಈಗಾಗಲೇ ಕ್ಷೇತ್ರದಾದ್ಯಂತ ಸುತ್ತಾಡಿದ್ದೇನೆ. ಎಲ್ಲ ಧರ್ಮದವರು ಸೌಹಾರ್ದಯುತವಾಗಿ ಇದ್ದಾರೆ. ಗೆಲ್ಲುವ ವಿಶ್ವಾಸ ಮೂಡಿದೆ.

ಪ್ರಚಾರ ಹೇಗೆ ನಡೆಯುತ್ತಿದೆ?

15 ಸಾವಿರ ಜನರ ಬೆಂಬಲದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದ ಎಲ್ಲ ಮುಖಂಡರನ್ನು ಭೇಟಿ ಮಾಡಿದ್ದೇನೆ. ವಾರ್ಡ್‌ವಾರು ಸಭೆಗಳನ್ನು ನಡೆಸಿದ್ದೇನೆ. ಎಲ್ಲ ಜನರು ಬೆಂಬಲ ಕೊಡುತ್ತಿದ್ದಾರೆ.

ನಿಮಗೆ ಯಾರು ಇಲ್ಲಿ ಪ್ರತಿಸ್ಪರ್ಧಿ?

ಇಲ್ಲಿ ನನಗೆ ಪ್ರತಿಸ್ಪರ್ಧಿಗಳೇ ಇಲ್ಲ. ನನಗೆ ಕೆಲಸಗಳೇ ಸವಾಲು. ಹಿಂದೆ ಇಲ್ಲಿ ಗೆದ್ದವರು ಕಾಂಗ್ರೆಸ್‌ ಮತಗಳಿಂದ ಆಯ್ಕೆಯಾಗಿದ್ದಾರೆ. ಅವರ ಸ್ವಂತ ಮತಗಳು ಅಲ್ಲ. ಹೀಗಾಗಿ ಪಕ್ಷದ ಮತಗಳು ನನ್ನ ಪರವಾಗುವ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT