ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸರಹಳ್ಳಿ : ಜೆಡಿಎಸ್‌ ಕೋಟೆಗೆ ಬಿಜೆಪಿ ಲಗ್ಗೆ: ಗೆಲುವಿಗೆ ಕಾಂಗ್ರೆಸ್‌ ಕಸರತ್ತು

ಜಿದ್ದಾಜಿದ್ದಿಯ ಕಣವಾದ ದಾಸರಹಳ್ಳಿ ಕ್ಷೇತ್ರ: ಅಭ್ಯರ್ಥಿಗಳ ಪ್ರಬಲ ಪೈಪೋಟಿ
Published 4 ಮೇ 2023, 20:47 IST
Last Updated 4 ಮೇ 2023, 20:47 IST
ಅಕ್ಷರ ಗಾತ್ರ

ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ಕೈಗಾರಿಕೆ ಪ್ರದೇಶ ಎಂದು ಗುರುತಿಸಲಾಗಿರುವ ಪೀಣ್ಯಾ ಕೈಗಾರಿಕೆ ಪ್ರದೇಶ ಹೊಂದಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಈಗ ಜಿದ್ದಾಜಿದ್ದಿ ಕಣವಾಗಿದೆ.

ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರೆ, ಬಿಜೆಪಿ ಪ್ರಬಲ ಪೈಪೋಟಿ ನೀಡಿ ಮುಂಚೂಣಿಗೆ ಬರಲು ಸರ್ವ ರೀತಿಯ ಪ್ರಯತ್ನ ನಡೆಸುತ್ತಿದೆ. ಈ ಉಭಯ ಪಕ್ಷಗಳ ನಡುವೆ ತನ್ನ ಅಸ್ತಿತ್ವ ಉಳಿಸಿಕೊಂಡು, ಸಾಂಪ್ರದಾಯಿಕ ಮತಗಳ ಆಧಾರದ ಮೇಲೆ ಗೆಲುವಿನ ದಾರಿ ಹುಡುಕಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಮೂರು ಪಕ್ಷಗಳ ಅಭ್ಯರ್ಥಿಗಳ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದರೂ,  ಅನುದಾನದ ವಿಷಯವೇ ಈ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಸರ್ಕಾರ ಅನುದಾನ ನೀಡಲು ತಾರತಮ್ಯ ಮಾಡಿದ್ದರೂ ಹೋರಾಟ ಮಾಡಿಯೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾಯಿತು ಎಂದು ಜೆಡಿಎಸ್‌ ಅಭ್ಯರ್ಥಿ ಆರ್‌. ಮಂಜುನಾಥ್‌ ಪ್ರತಿಪಾದಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್‌. ಮುನಿರಾಜು ಸಹ ಇದೇ ವಿಷಯ  ಪ್ರಸ್ತಾಪಿಸಿ, ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೀಡಿರುವ ಅನುದಾನವನ್ನು ಎಲ್ಲಿ ಬಳಸಲಾಗಿದೆ ಎನ್ನುವುದನ್ನು ಜೆಡಿಎಸ್‌ನ ಹಾಲಿ ಶಾಸಕರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿ ಪ್ರಚಾರ ಕೈಗೊಂಡಿದ್ದಾರೆ.

2008 ಮತ್ತು 2013ರಲ್ಲಿ ಸತತ ಎರಡು ಬಾರಿ ಆಯ್ಕೆಯಾಗಿದ್ದ ಮುನಿರಾಜು ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಆರ್‌. ಮಂಜುನಾಥ್‌ ವಿರುದ್ಧ ಪರಾಭವಗೊಂಡಿದ್ದರು. ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಮಂಜುನಾಥ್‌ ಅವರು, ಮುನಿರಾಜು ಅವರನ್ನು 10,675 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಇಬ್ಬರು ಮತ್ತೊಮ್ಮೆ ಈಗ ಎದುರಾಳಿಗಳಾಗಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ಗೊಂದಲ ಪರಿಹರಿಸಿಕೊಳ್ಳುವಲ್ಲಿ ತುಸು ವಿಳಂಬವಾದರೂ ಮೈಕೊಡವಿಕೊಂಡು ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌, ಕಳೆದ 15 ವರ್ಷಗಳ ಅಭಿವೃದ್ಧಿ ವಿಷಯವನ್ನೇ ಮುನ್ನಲೆಗೆ ತರಲು ಯತ್ನಿಸುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಜಿ. ಧನಂಜಯ ಅವರು, ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಕಾರ್ಯವೈಖರಿಯನ್ನು ಗುರಿಯಾಗಿರಿಸಿಕೊಂಡು ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ನಕಾಶೆ
ನಕಾಶೆ

ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್‌ ಸೋಲು ಅನುಭವಿಸಿರುವುದು ಪಕ್ಷ ಸಂಘಟನೆಗೆ ಹಿನ್ನಡೆಯಾಗಿತ್ತು. 2008 ಮತ್ತು 2013ರಲ್ಲಿ ಎರಡನೇ ಸ್ಥಾನ ಪಡೆದಿದ್ದ ಕಾಂಗ್ರೆಸ್‌, 2018ರಲ್ಲಿ ಮೂರನೇ ಸ್ಥಾನ ಪಡೆಯಿತು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪಿ.ಎನ್‌. ಕೃಷ್ಣಮೂರ್ತಿ 31,711( ಶೇ14.66) ಮತಗಳನ್ನು ಮಾತ್ರ ಪಡೆದಿದ್ದರು.

ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬಂದರೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆಯೇ ಪ್ರಬಲ ಪೈಪೋಟಿ ನಡೆಯುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಮುನಿರಾಜು ವಿರುದ್ಧದ ಅಲೆ, ಎಚ್‌.ಡಿ. ಕುಮಾರಸ್ವಾಮಿ ಪರ ಅಲೆ, ಬಿಎಸ್‌ಪಿ ಬೆಂಬಲ ಮತ್ತು ಕಾಂಗ್ರೆಸ್‌ ಮತ ಬುಟ್ಟಿಗೆ ಕೈಹಾಕಿದ್ದರಿಂದ ಜೆಡಿಎಸ್‌ ಸುಲಭವಾಗಿ ಗೆಲುವಿನ ಮಾರ್ಗದಲ್ಲಿ ಸಾಗಿತ್ತು. ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ತನ್ನ ಸಾಂಪ್ರದಾಯಿಕ ಮತಗಳನ್ನು ಕಾಂಗ್ರೆಸ್‌ ಭದ್ರಪಡಿಸಿಕೊಳ್ಳುತ್ತಿದೆ.

ಮೂರು ಪಕ್ಷಗಳು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿವೆ.

ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪಕ್ಷೇತರರಾಗಿ ಇಬ್ಬರು ಆರ್‌. ಮಂಜುನಾಥ್‌ ಮತ್ತು ಒಬ್ಬರು ಎನ್‌. ಮಂಜುನಾಥ್‌ ಎನ್ನುವವರು ಸಹ ಸ್ಪರ್ಧಿಸಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧಿಸಿರುವ ಕೀರ್ತನ್‌ ಕುಮಾರ್‌ ಎಂ. ಅವರ ಪ್ರಚಾರವೂ ಜೋರಾಗಿದೆ.

ಕೈಗಾರಿಕೆ ಪ್ರದೇಶವಾಗಿರುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ವಿವಿಧೆಡೆಯಿಂದ ಬದುಕು ಕಟ್ಟಿಕೊಳ್ಳಲು ಬಂದಿರುವವರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಕೇರಳ ಮೂಲದ ಮತದಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಮತ ಸೆಳೆಯಲು ಮಲಯಾಳಿ ನಟ ಸುರೇಶ್‌ ಗೋಪಿ ಬಿಜೆಪಿ ಪರ ಇತ್ತೀಚೆಗೆ ಪ್ರಚಾರ ಕೈಗೊಂಡಿದ್ದರು. ವಲಸಿಗರು ಮತ್ತು ವಿವಿಧ ಸಮುದಾಯಗಳ ಮತಗಳು ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಯಾರನ್ನು ಗೆಲುವಿನ ದಡಕ್ಕೆ ಸೇರಿಸುತ್ತಾರೆ ಎನ್ನುವುದು ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT