ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ ರಿಜಿಸ್ಟ್ರಾರ್ ವಿರುದ್ಧ ಕ್ರಮ ಅಶೋಕ ಅಸಹಾಯಕತೆ

ಒತ್ತುವರಿ ತೆರವುಗೊಳಿಸಿ ತಹಶೀಲ್ದಾರ್‌ ಅಣಕ: ಕೃಷ್ಣ ಬೈರೇಗೌಡ ಕಿಡಿ
Last Updated 9 ಮಾರ್ಚ್ 2020, 23:25 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಹೋಬಳಿಯ ಚೊಕ್ಕನಹಳ್ಳಿಯ 21 ಎಕರೆ 19 ಗುಂಟೆ ಸರ್ಕಾರಿ ಗೋಮಾಳ ಮಾರಾಟ ಪ್ರಕರಣವು ವಿಧಾನಸಭೆಯಲ್ಲಿ ಸೋಮವಾರ ಪ್ರತಿಧ್ವನಿಸಿತು. ಸಬ್‌ ರಿಜಿಸ್ಟ್ರಾರ್‌ ವಿರುದ್ಧ ಕ್ರಮ ಕೈಗೊಳ್ಳುವಾಗ ಎದುರಿಸಿದ ಸಮಸ್ಯೆಯನ್ನು ಕಂದಾಯ ಸಚಿವ ಆರ್.ಅಶೋಕ ಹೇಳಿಕೊಂಡರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಕೃಷ್ಣ ಬೈರೇಗೌಡ, ‘ಈ ಜಾಗವು ಸರ್ಕಾರಿ ಜಾಗ ಎಂದು ಪಹಣಿಯಲ್ಲಿದೆ. ಆದರೆ, ಸಬ್‌ ರಿಜಿಸ್ಟ್ರಾರ್ ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ಎರಡು ತಿಂಗಳ ಹಿಂದೆಯೇ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿರಲಿಲ್ಲ. ಸದನದಲ್ಲಿ ವಿಷಯ ಪ್ರಸ್ತಾಪವಾಗುತ್ತದೆ ಎಂದು ಗೊತ್ತಾಗಿ ಯಲಹಂಕ ತಹಶೀಲ್ದಾರ್ ಒತ್ತುವರಿ ತೆರವು ಮಾಡಿ ಅಣಕ ಮಾಡಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಂಡಿದ್ದಾರೆ’ ಎಂದರು.

‘ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ ಮಾಡಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ. ಆದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸರ್ಕಾರಿ ಜಾಗ ಉಳಿಸಲು ನಾವು ಸದನದಲ್ಲಿ ಪ್ರಶ್ನೆ ಮಾಡಬೇಕೇ’ ಎಂದು ಅವರು ಪ್ರಶ್ನಿಸಿದರು.

ಆರ್‌.ಅಶೋಕ ಉತ್ತರಿಸಿ, ‘ನಿಯಮ ಮೀರಿ ಕ್ರಯಪತ್ರ ಕರಾರು ನೋಂದಾಯಿಸಿದ ಪ್ರಭಾರ ಉಪನೋಂದಣಾಧಿಕಾರಿ ಬಿ.ಪ್ರಶಾಂತ್‌ ಅವರನ್ನು ಅಮಾನತು ಮಾಡಲಾಯಿತು. ಇದನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದರು. ಅವರ ಪರ ತೀರ್ಪು ಬಂತು. ಬಳಿಕ ಅವರನ್ನು ತುಮಕೂರಿಗೆ ವರ್ಗಾವಣೆ ಮಾಡಿದೆವು. ಇದಕ್ಕೆ ಕೆಎಟಿಯಲ್ಲಿ ತಡೆಯಾಜ್ಞೆ ತಂದರು. ಹೀಗಿದೆ ನಮ್ಮ ವ್ಯವಸ್ಥೆ’ ಎಂದರು. ‘ಸರ್ಕಾರಿ ಭೂಮಿ ಉಳಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಕೃಷ್ಣ ಬೈರೇಗೌಡ, ‘ಬ್ಯಾಟರಾಯನಪುರ ಸಬ್‌ ರಿಜಿಸ್ಟ್ರಾರ್ ಕಚೇರಿ ವ್ಯಾಪ್ತಿಯ ಹೆಸರಘಟ್ಟದಲ್ಲಿ ಒಂದೇ ಆಸ್ತಿ ಗುರುತಿನ ಸಂಖ್ಯೆ ಬಳಸಿ 10 ಆಸ್ತಿಗಳ ಮಾರಾಟ ಮಾಡಲಾಗಿದೆ. ಪ್ರತಿ ಆಸ್ತಿಗೆ ವಿಶಿಷ್ಟ ಸಂಖ್ಯೆ ಇರುತ್ತದೆ. ಇದನ್ನು ಬಳಸಿ 10 ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯ. ಇಲಾಖೆಯಲ್ಲಿನ ಅಕ್ರಮಕ್ಕೆ ಇದು ಸಾಕ್ಷಿ’ ಎಂದು ಬೆಳಕು ಚೆಲ್ಲಿದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಅವರು, ‘ಬೆಂಗಳೂರು ಭೂಗಳ್ಳರ ಸ್ವರ್ಗ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT