ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ಜಿಲ್ಲೆಗಳಿಗಿಲ್ಲ ಸಿಎಸ್‌ಆರ್‌ ಹಣ’

ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ * ಹಳ್ಳಿಗಳ ಅಭಿವೃದ್ಧಿಗೆ ಬಳಸಲು ಸಲಹೆ
Last Updated 7 ಫೆಬ್ರುವರಿ 2020, 19:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಾರ್ಪೊರೇಟ್‌ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌)ಸಾವಿರಾರು ಕೋಟಿ ರೂಪಾಯಿಯನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿವೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಹೆಚ್ಚು ಪಾಲು ಪಡೆದರೆ, ಯಾದಗಿರಿಯಂತಹ ಜಿಲ್ಲೆಗಳು ಒಂದು ರೂಪಾಯಿ ಪಡೆಯಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ, ಕಂಪನಿಗಳ ಸಿಎಸ್‌ಆರ್‌ ವಿಭಾಗದವರು ಮತ್ತು ಸರ್ಕಾರೇತರ ಸಂಸ್ಥೆಗಳು ಗಮನ ಹರಿಸಬೇಕು.

ನಗರದಲ್ಲಿ ಶುಕ್ರವಾರ ನಡೆದ ಕರ್ನಾಟಕ ಮತ್ತು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಕುರಿತ ಸಮಾವೇಶದಲ್ಲಿ ಕೇಳಿ ಬಂದ ಪ್ರಮುಖ ಸಲಹೆ ಇದು. ಸತ್ವ ಕನ್ಸಲ್ಟಿಂಗ್ ಹಾಗೂ ಧ್ವನಿ ಫೌಂಡೇಷನ್‌ ಈ ಸಮಾವೇಶ ಆಯೋಜಿಸಿದ್ದವು.

ಸಾಮಾಜಿಕ ಕಾರ್ಯಕರ್ತೆ ರೋಹಿಣಿ ನಿಲೇಕಣಿ, ‘ಯಾವುದೇ ನಿಧಿ ವಿನಿಯೋಗದಲ್ಲಿ ದತ್ತಾಂಶಗಳು ಮುಖ್ಯ ಆಗುತ್ತವೆ. ಇವುಗಳ ಆಧಾರದಲ್ಲಿ ಯಾವ ಜಿಲ್ಲೆ ಅಥವಾ ಯಾವ ಕ್ಷೇತ್ರಕ್ಕೆ ಎಷ್ಟು ಹಣ ವಿನಿಯೋಗಿಸಬೇಕು ಎಂದು ಕಂಪನಿಗಳು ನಿರ್ಧರಿಸುತ್ತವೆ. ಕಂಪನಿಗಳು ನಗರಗಳನ್ನು ಬಿಟ್ಟು, ಗ್ರಾಮಗಳತ್ತ ನೋಡಬೇಕೆಂದರೆ ಅಲ್ಲಿನ ಸಮಸ್ಯೆಗಳನ್ನು ಕಂಪನಿಗಳ ಗಮನಕ್ಕೆ ತರುವ ಕೆಲಸವಾಗಬೇಕಿದೆ’ ಎಂದರು.

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ‘ಸಿಎಸ್‌ಆರ್‌ ನಿಧಿಯಡಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯ ಕೈಗೊಳ್ಳುವ ಕಂಪನಿಗಳಿಗೆ ಸರ್ಕಾರ ಎಲ್ಲ ನೆರವನ್ನೂ ನೀಡುತ್ತದೆ. ಯಾದಗಿರಿ, ಕಲಬುರ್ಗಿ, ರಾಯಚೂರಿನಂತಹ ಹಿಂದುಳಿದ ಜಿಲ್ಲೆಗಳಲ್ಲಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಈ ಸಮಾವೇಶ ಮೊದಲ ಹೆಜ್ಜೆಯಾಗಲಿ. ಸರ್ಕಾರ, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಹಾಗೂ ಕಾರ್ಪೊರೇಟ್ ಕಂಪನಿಗಳು ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದರು.

ರೀಚ್‌ ಸಂಸ್ಥೆಯ ವೆಂಕಟೇಶ್‌, ‘ಗ್ರಾಮೀಣ ಭಾಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುತ್ತಿಲ್ಲ. ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಜನ ವಲಸೆ ಹೋಗುತ್ತಿದ್ದಾರೆ. ಕಾರ್ಮಿಕರ ಗುಳೆಯಿಂದ ಅವರ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಗಮನ ಹರಿಸಲು ಆಗುತ್ತಿಲ್ಲ.ವಲಸೆ ಹೋಗುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಸೃಷ್ಟಿಯಾಗಬೇಕು’ ಎಂದರು.

ಅಂಕಿ–ಅಂಶ

₹5,000 ಕೋಟಿ - ರಾಜ್ಯದಲ್ಲಿ ವರ್ಷಕ್ಕೆ ಕಂಪನಿಗಳು ನೀಡುವ ಸಿಎಸ್‌ಆರ್‌ ನಿಧಿ

₹324.37 ಕೋಟಿ - ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಡೆದ ನಿಧಿ

₹115.85 ಕೋಟಿ - ಬೆಂಗಳೂರು ನಗರ ಜಿಲ್ಲೆ ಪಡೆದ ನಿಧಿ

₹73.56 ಕೋಟಿ - ಉಡುಪಿ ಜಿಲ್ಲೆ ಪಡೆದ ನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT