ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಅಂಗಾಂಗಗಳ ಅವಶೇಷ ಮರಳಿಸಲು ನಿಯಮ ಪ್ರಕಟ

Published 12 ಜನವರಿ 2024, 16:13 IST
Last Updated 12 ಜನವರಿ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಉಗುರು, ಆನೆ ದಂತ ಸೇರಿದಂತೆ ವನ್ಯಜೀವಿ ಅಂಗಾಂಗಗಳ ಅವಶೇಷಗಳನ್ನು ಮರಳಿಸಲು ಮೂರು ತಿಂಗಳ ಕಾಲಾವಕಾಶ ನೀಡಲು ನಿಯಮ ಪ್ರಕಟಿಸಿರುವ ರಾಜ್ಯ ಸರ್ಕಾರ, ಕಳ್ಳಬೇಟೆಯ ಕುರಿತು ತನಿಖೆಗೂ ಅವಕಾಶ ಕಲ್ಪಿಸಿದೆ.

ಸಾರ್ವಜನಿಕರು ಪರವಾನಗಿ ಇಲ್ಲದೇ ತಮ್ಮ ಬಳಿ ಇರಿಸಿಕೊಂಡಿರುವ ವನ್ಯಜೀವಿಗಳ ಅಂಗಾಂಗಗಳ ಅವಶೇಷಗಳನ್ನು ಮರಳಿಸಲು ಮೂರು ತಿಂಗಳ ಕಾಲಾವಕಾಶ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದಕ್ಕೆ ಪೂರಕವಾಗಿ ‘ವನ್ಯಜೀವಿ (ಸಂರಕ್ಷಣೆ ಮತ್ತು ಅಘೋಷಿತ ವನ್ಯಜೀವಿ ಅಥವಾ ಪ್ರಾಣಿ ಅಂಗಾಂಗಗಳ ಅವಶೇಷ, ಟ್ರೋಫಿ ಮರಳಿಸುವ) (ಕರ್ನಾಟಕ) ನಿಯಮಗಳು– 2024’ ಅನ್ನು ಗುರುವಾರ ಪ್ರಕಟಿಸಲಾಗಿದೆ.

ರಾಜ್ಯ ಸರ್ಕಾರ ನಿಗದಿಪಡಿಸಿದ ದಿನದಿಂದ ಮೂರು ತಿಂಗಳವರೆಗೆ ವನ್ಯಜೀವಿ ಅಂಗಾಂಗಗಳ ಅವಶೇಷಗಳನ್ನು ಮರಳಿಸಲು ಅವಕಾಶವಿರುತ್ತದೆ. ಆಯಾ ಪ್ರದೇಶದ ಭೌಗೋಳಿಕ ಮತ್ತು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಅಥವಾ ಪೊಲೀಸ್‌ ಠಾಣೆಯ ಮುಖ್ಯಸ್ಥರಿಗೆ ನಿಗದಿತ ನಮೂನೆಯಲ್ಲಿ ಘೋಷಣಾ ಪತ್ರದೊಂದಿಗೆ ಅಂತಹ ವಸ್ತುಗಳನ್ನು ಒಪ್ಪಿಸಬಹುದು ಎಂಬ ಅಂಶ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಪ್ರಕಟಿಸಿರುವ ನಿಯಮಗಳಲ್ಲಿದೆ.

ಆಯಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಒಪ್ಪಿಸಲಾದ ವನ್ಯಜೀವಿ ಅಂಗಾಂಗಗಳ ಅವಶೇಷಗಳ ಮಾಹಿತಿಯನ್ನು ಏಳು ದಿನಗಳೊಳಗೆ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗೆ ಸಲ್ಲಿಸಬೇಕು. ಆ ರೀತಿ ಒಪ್ಪಿಸಲಾಗಿರುವ ವಸ್ತುಗಳನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದ ಬಳಿಕ ಕಳ್ಳಬೇಟೆಯ ಮೂಲಕ ಸಂಗ್ರಹಿಸಿಲ್ಲ ಎಂಬುದನ್ನು ಖಾತರಿಪಡಿಸಲು ತನಿಖೆ ನಡೆಸಬಹುದು ಎಂದು ನಿಯಮಗಳಲ್ಲಿ ಹೇಳಲಾಗಿದೆ.

ವಸ್ತುಗಳನ್ನು ಒಪ್ಪಿಸಿದ ದಿನದಿಂದ 90 ದಿನಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಬೇಕು. ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸದಿದ್ದರೆ ಸಂಶಯದ ಲಾಭವನ್ನು ಆ ವಸ್ತುಗಳನ್ನು ಒಪ್ಪಿಸಿದವರಿಗೆ ನೀಡಬಹುದು. ಆದರೆ, ಕೇವಿಯಟ್‌ ಬಳಸಿಕೊಂಡು ನಂತರದ ಅವಧಿಯಲ್ಲಿ ಲಭಿಸುವ ಸಾಕ್ಷ್ಯಗಳನ್ನು ಆಧರಿಸಿ ಕ್ರಮ ಜರುಗಿಸುವುದಕ್ಕೂ ಅವಕಾಶವಿದೆ ಎಂಬ ಅಂಶ ನಿಯಮಗಳಲ್ಲಿದೆ.

ಈ ನಿಯಮಗಳ ಅಡಿಯಲ್ಲಿ ಒಪ್ಪಿಸಲಾಗುವ ಎಲ್ಲ ವನ್ಯಜೀವಿ ಅಂಗಾಂಗಗಳ ಅವಶೇಷಗಳ ಸ್ವತ್ತುಗಳು ಸರ್ಕಾರಕ್ಕೆ ಸೇರುತ್ತವೆ. ಅವುಗಳನ್ನು ವನ್ಯಜೀವಿ ಉತ್ಪನ್ನಗಳ ವಿಲೇವಾರಿ ನಿಯಮಗಳು–2023ರ ಅನುಸಾರ ವಿಲೇವಾರಿ ಮಾಡಬೇಕು ಎಂದು ನೂತನ ನಿಯಮ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT