ಶನಿವಾರ, ನವೆಂಬರ್ 28, 2020
17 °C
18 ವಿಷಯಗಳಲ್ಲಿ ಅನುತ್ತೀರ್ಣಗೊಂಡ ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿ

ವಿಶೇಷ ಮರು ಪರೀಕ್ಷೆ ನಡೆಸಲು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಿಕೆಯಲ್ಲಿ ಹಿಂದುಳಿದಿದ್ದು, ಮೂರು ವರ್ಷಗಳ ಅವಧಿಯಲ್ಲಿ 18 ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಯೊಬ್ಬರಿಗೆ ವಿಶೇಷ ಮರು ಪರೀಕ್ಷೆ ನಡೆಸುವಂತೆ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ(ಎನ್‌ಎಲ್‌ಎಸ್‌ಐಯು)ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಅರ್ಜಿದಾರ ವಿದ್ಯಾರ್ಥಿ 2016ರಲ್ಲಿ ಎನ್‌ಎಲ್‌ಎಸ್‌ಐಯುನಲ್ಲಿ ಕಾನೂನು ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು. ಆದರೆ, ಹಲವು ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವ ಕಾರಣದಿಂದ 2020–21ನೇ ಶೈಕ್ಷಣಿಕ ವರ್ಷದಲ್ಲಿ ಮೂರನೇ ವರ್ಷದ ಪದವಿ ತರಗತಿಗೆ ಪ್ರವೇಶ ತಡೆಹಿಡಿಯಲಾಗಿತ್ತು. ಅದನ್ನು ಪ್ರಶ್ನಿಸಿ ವಿದ್ಯಾರ್ಥಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘2020ರಲ್ಲಿ ವಿಶ್ವವಿದ್ಯಾಲಯವು ಹೊಸ ಶೈಕ್ಷಣಿಕ ಮತ್ತು ಪರೀಕ್ಷಾ ನಿಯಮಗಳನ್ನು ಅಳವಡಿಸಿಕೊಂಡಿದೆ. ಶೈಕ್ಷಣಿಕ ಮತ್ತು ಪರೀಕ್ಷಾ ನಿಯಮಗಳು–2009ರ ಪ್ರಕಾರ ಒಬ್ಬ ವಿದ್ಯಾರ್ಥಿಗೆ ವಿಶೇಷ ಮರು ಪರೀಕ್ಷೆಯ ರಿಯಾಯತಿ ನೀಡಲು ಸಾಧ್ಯವಿಲ್ಲ’ ಎಂದು ಎನ್‌ಎಲ್‌ಎಸ್‌ಐಯು ವಾದಿಸಿತ್ತು. ಆದರೆ, ವಿಶೇಷ ಮರು ಪರೀಕ್ಷೆ ನಡೆಸುವಂತೆ ಶಿಕ್ಷಣ ಸಂಸ್ಥೆಗೆ ನಿರ್ದೇಶನ ನೀಡಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಪೀಠ, ‘ಬಡವನಾಗಿರುವುದು ಹೇಗೆ ಅಪರಾಧವಲ್ಲವೋ, ಕಲಿಕೆಯಲ್ಲಿ ಹಿಂದುಳಿದಿರುವುದೂ ಹಾಗೆಯೇ’ ಎಂದು ಹೇಳಿದೆ.

2017ರ ಸೆಪ್ಟೆಂಬರ್‌ ಮತ್ತು 2020ರ ಸೆಪ್ಟೆಂಬರ್‌ನಲ್ಲಿ ಎನ್‌ಎಲ್‌ಎಸ್‌ಐಯು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ‘ಈ ಅಧಿಸೂಚನೆಗಳು ಶಾಸನಬದ್ಧ ನಿಯಮಗಳೇನೂ ಅಲ್ಲ. ಕೇವಲ ಮಾರ್ಗದರ್ಶಿ ಸೂತ್ರದಂತೆ ಇವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಕ್ತಿ ತುಂಬುವ ಹಲವು ಅಂಶಗಳು ಅದರಲ್ಲಿವೆ’ ಎಂದು ಅಭಿಪ್ರಾಯಪಟ್ಟಿದೆ.

‘ಇತರ ವಿದ್ಯಾರ್ಥಿಗಳಿಗೆ ನೀಡಿರುವ ಅವಕಾಶವನ್ನು ಒಬ್ಬ ವಿದ್ಯಾರ್ಥಿಗೆ ನಿರಾಕರಿಸುವುದನ್ನು ಒಪ್ಪಲಾಗದು. ಅದು ತಾರತಮ್ಯದಿಂದ ಕೂಡಿದ ಮತ್ತು ಸ್ವೇಚ್ಚಾಚಾರದ ನಡೆಯಾಗುತ್ತದೆ. ಇಂತಹ ನೀತಿ ನ್ಯಾಯ ನಿರಾಕರಣೆಗೆ ದಾರಿಯಾಗುತ್ತದೆ ಮತ್ತು ಬಾಧಿತನು ನೋವು ಅನುಭವಿಸಲು ಕಾರಣವಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರ ವಿದ್ಯಾರ್ಥಿ ಅನುತ್ತೀರ್ಣನಾಗಿರುವ ಎಲ್ಲ ವಿಷಯಗಳಿಗೆ ನಿಗದಿತ ಕಾಲಮಿತಿಯೊಳಗೆ ವಿಶೇಷ ಮರು ಪರೀಕ್ಷೆ ನಡೆಸಬೇಕು ಎಂದು ನ್ಯಾಯಪೀಠ ಎನ್‌ಎಲ್‌ಎಸ್‌ಐಯುಗೆ ನಿರ್ದೇಶನ ನೀಡಿದೆ. ವಿಶೇಷ ಸಂದರ್ಭದಲ್ಲಿ ಅರ್ಜಿದಾರರಿಗೆ ಪರಿಹಾರ ಒದಗಿಸಲಾಗಿದೆ. ಇದನ್ನು ಮಾದರಿ ಎಂದು ಪರಿಗಣಿಸುವಂತಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.