ಬೆಂಗಳೂರು: ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದಕ್ಕೆ ತಮ್ಮ ವಿರೋಧವಿದೆ ಎಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲೇ ಅವರು ತಮ್ಮ ವಿರೋಧವನ್ನು ಪ್ರಕಟಿಸಿದರು.
ದೇಶದ ಶೇಕಡ 34ರಷ್ಟು ಜನರು ಮಾತ್ರ ಹಿಂದಿಯನ್ನು ಮಾತೃಭಾಷೆಯಾಗಿ ಸ್ವೀಕರಿಸಿದ್ದಾರೆ. ಉಳಿದ ಶೇಕಡ 66ರಷ್ಟು ಜನರ ಮೇಲೆ ಹಿಂದಿ ಭಾಷೆಯನ್ನು ಹೇರುವುದು ಪ್ರಜಾಪ್ರಭುತ್ವದ ವಿರೋಧಿ ಎಂದರು.
ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯುವುದನ್ನು ಒಪ್ಪಬಹುದು. ಆದರೆ, ಹಿಂದಿಯನ್ನು ಹೇರುವುದನ್ನು ಸಹಿಸಲಾಗದು ಎಂದು ಹೇಳಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಕಡ್ಡಾಯ ಪ್ರಶ್ನಿಸಿ ಕೆಲವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲೂ ಗಟ್ಟಿಯಾದ ನಿಲುವು ಅಗತ್ಯ ಎಂದರು.