ಹೊಸ ಸಾಲ ಮಾಡುವ ಅಧಿಕಾರ ಇಲ್ಲ: ಕುಮಾರಸ್ವಾಮಿ

7

ಹೊಸ ಸಾಲ ಮಾಡುವ ಅಧಿಕಾರ ಇಲ್ಲ: ಕುಮಾರಸ್ವಾಮಿ

Published:
Updated:
ಕಟ್ಟಡದ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೆರವೇರಿಸಿದರು. ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್, ಕಾಸಿಯಾ ಗೌರವ ಅಧ್ಯಕ್ಷ ಆರ್‌. ಹನುಮಂತೇಗೌಡ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಗೌರವ ಉಪಾಧ್ಯಕ್ಷ ಬಸವರಾಜ್ ಜವಳಿ, ಶಾಸಕ ಕೆ. ಗೋಪಾಲಯ್ಯ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಾಲ ತೆಗೆದುಕೊಳ್ಳಲು ಸಾಧ್ಯವೇ ಇಲ್ಲದ ಸ್ಥಿತಿಯನ್ನು ತಲುಪಿದ್ದೇವೆ. ಹೊಸದಾಗಿ ಸಾಲ ಮಾಡುವ ಅಧಿಕಾರವೂ ಈ ಸರ್ಕಾರಕ್ಕೆ ಇಲ್ಲ. ಅಲ್ಲದೆ, ನಾನು ಕೊರತೆ ಬಜೆಟ್‌ ಮಂಡನೆ ಮಾಡಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.  

ಕಾಸಿಯಾ (ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರ’ದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಪೂರ್ಣ ಬಹುಮತ ನೀಡಿದರೆ, 24 ತಾಸಿನಲ್ಲಿ ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದ್ದು ನಿಜ. ಅದನ್ನೇ ಕೆಲವರು ‘ಕುಮಾರಸ್ವಾಮಿ ಇನ್ನೂ ಸಾಲಮನ್ನಾ ಮಾಡಿಲ್ಲ, ಎಷ್ಟು ಸಮಯ ಬೇಕು’ ಎಂದು ಟೀಕಿಸುತ್ತಿದ್ದಾರೆ. ಆದರೆ, ಅವರಿಗೆ ನನ್ನ ಕಷ್ಟಗಳು ತಿಳಿದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಈ ತೀರ್ಮಾನ ಮಾಡಲು ನನಗೆ ಏನೆಲ್ಲ ಅಡಚಣೆಗಳಿವೆ ಎಂಬುದು ಗೊತ್ತಿಲ್ಲ. ಸ್ವತಂತ್ರ ಸರ್ಕಾರ ಇದ್ದಿದ್ದರೆ, ನಾನು ಯಾರನ್ನೂ ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ. ನಾನು ಈ ರೀತಿ ಮಾಡಲೇಬೇಕು ಎಂದಿದ್ದರೆ, ಅಧಿಕಾರಿಗಳೂ ಎಲ್ಲದಕ್ಕೂ ರುಜು ಹಾಕುತ್ತಿದ್ದರು’ ಎಂದು ಸಾಲಮನ್ನಾದ ಕುರಿತು ವಿವರಣೆ ನೀಡಿದರು.

‘ದೇವರು ನನಗೆ, ಸಮ್ಮಿಶ್ರ ಸರ್ಕಾರ ನಡೆಸುವ ಸವಾಲನ್ನು ಕೊಟ್ಟಿದ್ದಾನೆ. ಅಂದಿನ ಸಮ್ಮಿಶ್ರ ಸರ್ಕಾರದ ಅನುಭವವೇ ಬೇರೆ, ಇಂದಿನದೇ ಬೇರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾನೆ. ಇವನು ಇದ್ದಾಗಲೇ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎನ್ನುವ ಕಾತರ ಎಲ್ಲರಲ್ಲಿಯೂ ಇದೆ. ಒಂದೊಂದಾಗಿಯೇ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಸಣ್ಣ’ ಖಾತೆ ಎಂಬ ಬೇಸರ: ‘ರೈತ ಕುಟುಂಬದಿಂದ ಬಂದವನು, ವ್ಯವಸಾಯ ಮಾಡುತ್ತಿದ್ದವನು. ಸಣ್ಣ ಕೈಗಾರಿಕೆ ಖಾತೆ ಕೊಟ್ಟಾಗ ಅಯ್ಯೊ, ಇದನ್ನು ಕೊಟ್ಟಿದ್ದಾರಲ್ಲ ಎಂದು ಮೂರ್ನಾಕು ದಿನ ಸುಮ್ಮನಿದ್ದೆ. ಇದರಲ್ಲಿ ‘ಸಣ್ಣದು’ ಅಂತ ಬೇರೆ ಇದೆಯಲ್ಲ, ಸಹಜವಾಗಿ ಬೇಸರವಾಗಿತ್ತು. ನಂತರ ಖಾತೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಂಡಾಗ ಈ ಕ್ಷೇತ್ರದ ಕೊಡುಗೆಗಳು ತಿಳಿಯಿತು’ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್. ಶ್ರೀನಿವಾಸ್ ಅವರು ಹೇಳಿದಾಗ ಸಭೆಯಲ್ಲಿ ನಗು ಆವರಿಸಿತು.

‘ಹಳ್ಳಿಗಳಲ್ಲಿ ರೈತರ ಬಳಿ ಭಾಷಣ ಮಾಡುವಾಗ ಕೈಗಾರಿಕೆಗಳಿಗೆ ಬೈಯುತ್ತಿದ್ದೆ. ಆದರೆ, ಈ ಖಾತೆ ನೀಡಿದ ನಂತರ ಇಲ್ಲಿನ ವಿಚಾರಗಳನ್ನು, ಕಷ್ಟಗಳನ್ನು ಕಂಡು ಬೇಸರವಾಗಿದೆ. ಕೈಗಾರಿಕೋದ್ಯಮಿಗಳಿಗೂ ಈ ಸ್ಥಿತಿ ಇದೆಯಾ ಎಂದು ಅಚ್ಚರಿಗೊಂಡಿದ್ದೇನೆ’ ಎಂದರು.
‘ಮೈಸೂರು ಪೇಟ ಧರಿಸಲ್ಲ’
‘ಯಾವುದೇ ಸನ್ಮಾನ ಕಾರ್ಯಕ್ರಮದಲ್ಲಿ ಮೈಸೂರು ಪೇಟ ಧರಿಸಲು ಬಂದಾಗ, ಅದನ್ನು ನಿರಾಕರಿಸುತ್ತೇನೆ. ಮೈಸೂರು ಪೇಟಕ್ಕೆ ಅದರದ್ದೇ ಆದ ಪರಂಪರೆ, ಘನತೆ ಇದೆ. ಈ ರಾಜ್ಯದ ಬಗ್ಗೆ ನಾನು ಕಂಡಿರುವ ಕನಸುಗಳು ಈಡೇರಿದ ನಂತರ ಆ ಪೇಟವನ್ನು ಧರಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 2

  Sad
 • 2

  Frustrated
 • 5

  Angry

Comments:

0 comments

Write the first review for this !