ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಾವೇರಿ ಆಸ್ಪತ್ರೆಯು ನಗರದಲ್ಲಿ ಮಂಗಳವಾರ 15 ಆಂಬುಲೆನ್ಸ್‌ಗಳಿಗೆ ಚಾಲನೆ ನೀಡಿದ್ದು, ತುರ್ತು ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್ ಸ್ಥಳದಲ್ಲಿ ಇರುವುದಾಗಿ ತಿಳಿಸಿದೆ.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಡಾ.ಕೃಷ್ಣ ಚೈತನ್ಯ, ‘ತುರ್ತು ಕರೆ ಸ್ವೀಕರಿಸಿದ 120 ಸೆಕೆಂಡ್‌ಗಳಲ್ಲಿ ಸ್ಥಳಕ್ಕೆ ಆಂಬುಲೆನ್ಸ್ ಕಳಿಸಲು ಕ್ರಮವಹಿಸಲಾಗುತ್ತದೆ. ಆಸ್ಪತ್ರೆಯ 10 ಕಿ.ಮೀ. ವ್ಯಾಪ್ತಿಯ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಆಂಬುಲೆನ್ಸ್‌ಗಳು ಕಾರ್ಯಾಚರಣೆ ಮಾಡಲಿವೆ. ಪಾರ್ಶ್ವವಾಯು, ಹೃದಯಾಘಾತ, ಬೆನ್ನುಮೂಳೆ ಮತ್ತು ತಲೆಯ ಗಾಯಗಳಿಗೆ ತ್ವರಿತ ಹಾಗೂ ನಿಖರವಾದ ಚಿಕಿತ್ಸೆಗೆ ಸಹಕಾರಿಯಾಗಲಿವೆ’ ಎಂದು ಹೇಳಿದರು.
ಆಸ್ಪತ್ರೆಯ ಅಪಘಾತ ಮತ್ತು ತುರ್ತು ಆರೈಕೆಯ ಮುಖ್ಯಸ್ಥ ಡಾ.ಪ್ರಭಾಕರ್ ರೆಡ್ಡಿ, ‘ಹೃದಯಾಘಾತ ಹಾಗೂ ಅಪಘಾತಗಳು ಸಂಭವಿಸಿದಾಗ ನಿಗದಿತ ಅವಧಿಯೊಳಗೆ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವೇಗದ ವೈದ್ಯಕೀಯ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.