ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮದಲ್ಲಿ ಶಾಮೀಲು ಆರೋಪ: KBJNL ಎಂಡಿ ಬಿ.ಎಸ್‌. ಶಿವಕುಮಾರ್‌ ಅಮಾನತು

ತನಿಖಾ ಹಂತದ ಕಾಮಗಾರಿಗಳ ಬಿಲ್ ಪಾವತಿ
Published 3 ನವೆಂಬರ್ 2023, 15:36 IST
Last Updated 4 ನವೆಂಬರ್ 2023, 2:19 IST
ಅಕ್ಷರ ಗಾತ್ರ

ಬೆಂಗಳೂರು: ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಗಳ ಅಕ್ರಮದಲ್ಲಿ ಶಾಮೀಲಾಗಿರುವುದು ಮತ್ತು ತನಿಖೆ ಪ್ರಗತಿಯಲ್ಲಿರುವಾಗಲೇ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿರುವ ಆರೋಪದ ಮೇಲೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್‌) ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌. ಶಿವಕುಮಾರ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಅಕ್ಟೋಬರ್‌ 30ರಂದು ನಡೆದ ಕೆಬಿಜೆಎನ್ಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಶಿವಕುಮಾರ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಕ್ರಮದ ಮಾಹಿತಿ ಮುಚ್ಚಿಟ್ಟು ಬಿಲ್‌ ಪಾವತಿ ಹಾಗೂ ಹೆಚ್ಚುವರಿ ಕಾಮಗಾರಿಗಳ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿದ್ದ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತು ಮಾಡುವಂತೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಗುರುವಾರ ಅಮಾನತು ಆದೇಶ ಹೊರಬಿದ್ದಿದೆ.

ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಆರಂಭದಿಂದ 95 ಕಿ.ಮೀ.ವರೆಗಿನ ಆಧುನೀಕರಣ ಪ್ಯಾಕೇಜ್‌ ಕಾಮಗಾರಿ ಹಾಗೂ ಒಂದರಿಂದ 18ರವರೆಗಿನ ಉಪ/ ಸೀಳು ಕಾಲುವೆಗಳ ನಿರ್ಮಾಣ, ವಿಸ್ತರಣೆ ಮತ್ತು ನವೀಕರಣ ಕಾಮಗಾರಿಗಳಲ್ಲಿ ಭಾರಿ ಅಕ್ರಮ ನಡೆಸಿರುವ ಆರೋಪವಿದೆ. ಈ ಕುರಿತು ವಿಧಾನಸಭೆಯ ಅಂದಾಜುಗಳ ಸಮಿತಿಯು ತನಿಖೆ ನಡೆಸುತ್ತಿದೆ.

‘ಕಾಮಗಾರಿಗಳನ್ನು ಕೈಗೊಂಡಿರುವುದು, ದರಪಟ್ಟಿ ಸಿದ್ಧಪಡಿಸಿರುವುದು, ಮಾಪನ ಪುಸ್ತಕಗಳನ್ನು ಬರೆದಿರುವುದು, ಮುರುಂ ಸಾಗಾಣಿಕೆ, ಏರಿ ನಿರ್ಮಾಣದಲ್ಲಿ ಭಾರಿ ಅಕ್ರಮ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿದೆ’ ಎಂದು ಅಂದಾಜು ಸಮಿತಿ ಹೇಳಿತ್ತು. ಈ ಕುರಿತು ಪರಿಶೀಲಿಸಿ ವರದಿ ನೀಡಲು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್‌.ಬಿ. ಸಿದ್ದಗಂಗಪ್ಪ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿ 2022ರ ಜೂನ್‌ 10ರಂದು ಆದೇಶ ಹೊರಡಿಸಲಾಗಿತ್ತು.

ಪರಿಶೀಲನಾ ಸಮಿತಿಗೆ ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಸಮಿತಿಯು ವರದಿ ನೀಡುವ ಮೊದಲೇ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಶಿವಕುಮಾರ್‌ ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವುದು ಮತ್ತು ಅವ್ಯವಹಾರ ನಡೆಸಿರುವುದು ಕಂಡುಬಂದಿರುವುದರಿಂದ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ಉನ್ನತ ಮಟ್ಟದ ತನಿಖೆಗೆ ಸೂಚನೆ: ತಾಂತ್ರಿಕ ತಜ್ಞರ ಸಮಿತಿಯ ಪರಿಶೀಲನಾ ವರದಿ ಸಲ್ಲಿಕೆಯಾಗುವ ಮುನ್ನವೇ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿದ್ದ ಶಿವಕುಮಾರ್‌, ಬಾಕಿ ಉಳಿದ ಬಿಲ್‌ ಪಾವತಿಗೂ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾವ ಮಂಡಿಸಿದ್ದರು. ಹೆಚ್ಚುವರಿಯಾಗಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಪ್ರಸ್ತಾವವೂ ಇತ್ತು. ವಿರೋಧ ಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ ತಾವೇ ಸದನದಲ್ಲಿ ಪ್ರಸ್ತಾಪಿಸಿದ್ದ ವಿಚಾರಗಳಿಗೆ ವಿರುದ್ಧವಾಗಿ ಪ್ರಸ್ತಾವ ಸಲ್ಲಿಸಿದ್ದ ಅಧಿಕಾರಿಯ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಒಂದೆರಡು ದಿನಗಳಲ್ಲಿ ಈ ಕುರಿತು ಪ್ರತ್ಯೇಕ ಆದೇಶ ಹೊರಡಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ಹೇಳಿವೆ.

ರಾಜೇಶ್‌ ಅಮ್ಮಿನಭಾವಿಗೆ ಪ್ರಭಾರ ಶಿವಕುಮಾರ್ ಅವರ ಅಮಾನತಿನಿಂದ ತೆರವಾಗಿರುವ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಅಮ್ಮಿನಭಾವಿ ಅವರಿಗೆ ವಹಿಸಲಾಗಿದೆ. ರಾಜೇಶ್‌ ಅವರನ್ನು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಅಕ್ಟೋಬರ್‌ 27ರಂದು ವರ್ಗಾವಣೆ ಮಾಡಲಾಗಿತ್ತು. ವಾರದೊಳಗೆ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನೂ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT