ಸೋಮವಾರ, ಆಗಸ್ಟ್ 15, 2022
28 °C
ರಾಜಧಾನಿಯಲ್ಲಿ 513ನೇ ಜಯಂತಿ, ನಾಡಪ್ರಭು ಪ್ರತಿಮೆಗೆ ಮಾಲಾರ್ಪಣೆ, ಸಾಧನೆ ಕೊಂಡಾಡಿದ ಗಣ್ಯರು

ಕೆಂಪೇಗೌಡರ ದೂರದೃಷ್ಟಿ: ವಿಶ್ವದ ಗಮನಸೆಳೆದ ಬೆಂಗಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜಧಾನಿಯಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯು ಸೋಮವಾರ ಅದ್ದೂರಿಯಿಂದ ನಡೆಯಿತು. ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ಕೆಂಪೇಗೌಡರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ, ಕೆಂಪೇಗೌಡರ ದೂರದೃಷ್ಟಿ ಕೊಂಡಾಡಿದರು. ‌

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದಿಂದ ನಡೆದ ಜಯಂತಿಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ‘ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿದ ಕನಸಿನ ಬೆಂಗಳೂರು ವಿಶ್ವದ ಗಮನ ಸೆಳದಿದೆ. ಸಮರ್ಥ, ಶ್ರೇಷ್ಠ ಆಡಳಿತಗಾರ, ಜಾತ್ಯತೀತ ಸಿದ್ಧಾಂತದ ಹರಿಕಾರ ಕೆಂಪೇಗೌಡರು. ಕಾಯಕ ಸಮಾಜಕ್ಕೆ ಅನುಗುಣವಾಗಿ ವೃತ್ತಿಯ ಆಧಾರದಲ್ಲಿ 64 ಪೇಟೆಗಳನ್ನು ನಿರ್ಮಿಸಿದ್ದರು. ಕಬ್ಬನ್‌ಪೇಟೆ, ಅರಳೆಪೇಟೆ, ಗಾಣಿಗರಪೇಟೆ, ಮಡಿವಾಳಪೇಟೆ, ಅಕ್ಕಿಪೇಟೆ, ಹೂವಾಡಿಗರ ಪೇಟೆ, ತರಗುಪೇಟೆ... ಹೀಗೆ ವೃತ್ತಿಗೆ ತಕ್ಕಂತೆ ಪೇಟೆ ನಿರ್ಮಿಸಿದ್ದರು’ ಎಂದರು.

‘ವಾಜಪೇಯಿ ಆಡಳಿತಾವಧಿಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಡಲಾಯಿತು. ಯಲಹಂಕದಲ್ಲಿ ಅತಿ ಎತ್ತರದ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಆಗಲಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ದಿವ್ಯಾ ಅವಿನಾಶ್, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಬಿ.ಬಿ.ಎಂ.ಪಿ ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್ ವಾಗೇಶ್, ಡಾ.ಎಸ್.ರಾಜು, ದಾಸೇಗೌಡರು, ಜಯರತ್ನಾ, ರೂಪಾ ಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕಿ ಕ್ರಾಂತಿರಾಜು ಪಾಲ್ಗೊಂಡಿದ್ದರು.

ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ‘ರಾಜಧಾನಿ ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡರು ‌ಸದಾಕಾಲ ಸ್ಮರಣೀಯರು. ನಗರದ ಅಭಿವೃದ್ಧಿಗೆ ಕೆಂಪೇಗೌಡರು ನೀಡಿದ‌ ಕೊಡುಗೆಯನ್ನು ಈ ರಾಜ್ಯದ ಯಾವೊಬ್ಬ ‌ಪ್ರಜೆಯೂ ಮರೆಯುವಂತಿಲ್ಲ. ಅಂದಿನ ಅವರ ಶ್ರಮ ‌ಇಂದು ಹೆಮ್ಮರವಾಗಿ ಬೆಳೆದು ಬೆಂಗಳೂರು ವಿಶ್ವಭೂಪಟದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ’ ಎಂದರು.

ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಆಗಿದ್ದು, ‌ಪ್ರಧಾನ ಮಂತ್ರಿ ನರೇಂದ್ರ ‌ಮೋದಿ ಆಗಸ್ಟ್‌ನಲ್ಲಿ ಉದ್ಘಾಟಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಬಿ.ಬಿ.ಎಂ.ಪಿ ಮಾಜಿ ಉಪ ಮೇಯರ್ ಹೇಮಲತಾ ಕೆ. ಗೋಪಾಲಯ್ಯ, ಎಸ್.ಹರೀಶ್, ನಾರಾಯಣ್‌, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ವೆಂಕಟೇಶ್ ಹಾಜರಿದ್ದರು.‌

ಸದಾಶಿವನಗರದ ರಮಣಮಹರ್ಷಿ ಪಾರ್ಕ್‌ನಲ್ಲಿ ಕೆಂಪೇಗೌಡರ ಪ್ರತಿಮೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ಕೃಷ್ಣಪ್ಪ ಪುಷ್ಪಾರ್ಚನೆ ಮಾಡಿದರು.

ಬಿಬಿಎಂಪಿಯ ಕೇಂದ್ರ ಕಚೇರಿಯ ಮುಂಭಾಗದ ಕೆಂಪೇಗೌಡರ ಪ್ರತಿಮೆಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಲಾರ್ಪಣೆ ಮಾಡಿದರು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಪರ್ವೇಜ್, ಬಿ.ಡಿ.ಎ ಆಯುಕ್ತ ರಾಜೇಶ್‌ಗೌಡ, ಜಲಮಂಡಳಿ ಅಧ್ಯಕ್ಷ ಜಯರಾಮ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಇದ್ದರು.

ನಿಜ ಚರಿತ್ರೆ ಯಾವುದು?

‘ಪಠ್ಯಪುಸ್ತಕಗಳನ್ನೂ ರಾಜಕೀಯ ಆವರಿಸಿರುವಾಗ ಯಾವುದು ನಿಜವಾದ ಚರಿತ್ರೆ ಎಂಬ ಪ್ರಶ್ನೆ ಉದ್ಭವಿಸಿದೆ’ ಎಂದು ಚಿಂತಕ ಡಾ.ಕೆ.ವೈ.ನಾರಾಯಣ ಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಕಲಾ ಕಾಲೇಜಿನಲ್ಲಿ ನಡೆದ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿ, ‘ನಿಜವಾದ ಇತಿಹಾಸಕಾರರು, ಡೋಂಗಿ ಇತಿಹಾಸಕಾರರು ಮತ್ತು ಸ್ವಯಂ ಘೋಷಿತ ಇತಿಹಾಸಕಾರರ ನಡುವೆ ಹಲವು ಬಗೆಯ ಕೆಂಪೇಗೌಡರು ಸಿಗುತ್ತಾರೆ. ಅವರಲ್ಲಿ ನಿಜವಾದ ಕೆಂಪೇಗೌಡ ಯಾರು ಎಂಬುದನ್ನು ಕಂಡುಕೊಳ್ಳಬೇಕಿದೆ’ ಎಂದು ವ್ಯಂಗ್ಯವಾಡಿದರು.

ಕೆಂಪೇಗೌಡರ ಚಿಂತನೆಗಳು, ಆಡಳಿತದ ವೈಖರಿ ಮುಂದಿನ ತಲೆಮಾರಿಗೆ ದಾರಿದೀಪ ಆಗಬೇಕು ಎಂದರು.

ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಡಾ.ಹಂ.ಗು.ರಾಜೇಶ್, ಕೆ.ಧನಪಾಲ್, ಟಿ.ಪಿ.ಶ್ರೀನಿವಾಸನಾಯಕ, ಪ್ರಾಧ್ಯಾಪಕ ಡಾ.ರುದ್ರೇಶ್ ಅದರಂಗಿ ಹಾಜರಿದ್ದರು. ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು