ಕೆಐಎ: ಕ್ಯಾಟ್–3ಬಿ ರನ್ವೇ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ನೂತನ ರನ್‍ವೇಯನ್ನು ಕ್ಯಾಟ್–3ಬಿ ನಿಯಮಗಳನುಸಾರ ಮೇಲ್ದರ್ಜೆಗೇರಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಇದುವರೆಗೆ ಮಂಜು ಕವಿದ ವಾತಾವರಣದಿಂದ ವಿಮಾನ ಹಾರಾಟ ಮತ್ತು ವಿಮಾನಗಳು ಇಳಿಯುವಾಗ ವಿಳಂಬವಾಗುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು.
ಈಗ ದಕ್ಷಿಣ ರನ್‌ವೇಯಲ್ಲಿ ವಿಮಾನಗಳು ಇಳಿಯಲು ಉನ್ನತ ಮಟ್ಟದ ವ್ಯವಸ್ಥೆ(ಐಎಲ್ಎಸ್), ವಿಮಾನದ ರನ್‍ವೇ ಮತ್ತು ಸುತ್ತಲಿನ ಪ್ರದೇಶದಲ್ಲಿ ಏರ್‌ಫೀಲ್ಡ್ ಗ್ರೌಂಡ್ ಲೈಟ್(ಎಜಿಎಲ್) ಬೆಳಕಿನ ವ್ಯವಸ್ಥೆ, ಟ್ರ್ಯಾನ್ಸ್‌ಮಿಸ್ಸೊ ಮೀಟರ್, ಸ್ವಯಂಚಾಲಿತ ಹವಾಮಾನ ನಿರೀಕ್ಷಣಾಲಯ (ಎಡಬ್ಲ್ಯುಒಎಸ್), ಮೇಲ್ಮೈ ಚಲನೆಯ ರ‍್ಯಾಡಾರ್ (ಎಸ್ಎಂಆರ್) ಮತ್ತು ಮಾರ್ಗ ಸೂಚಿಸುವ ಇತರೆ ವ್ಯವಸ್ಥೆಗಳು ಇವೆ.
ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ (ಡಿಜಿಸಿಎ) ರನ್‍ವೇ ಕಾರ್ಯಾಚರಣೆ ನಡೆಸಲು ನಿಯಂತ್ರಣಾ ಒಪ್ಪಿಗೆ ಸಿಕ್ಕಿದೆ. ಈಗ 50 ಮೀಟರ್‌ಗಳಷ್ಟು ಕಡಿಮೆ ರನ್‍ವೇ ವಿಷುವಲ್ ರೇಂಜ್‍ನಲ್ಲಿ ವಿಮಾನ ಇಳಿಯಲು ಮತ್ತು 125 ಮೀಟರ್ ರನ್‍ವೇ ವಿಷುವಲ್ ರೇಂಜ್‍ನಲ್ಲಿ ವಿಮಾನ ಹಾರಲು ಅವಕಾಶ ಇರಲಿದೆ. ಈವೆರೆಗೆ ವಿಮಾನ ಇಳಿಯಲು 550 ಮೀಟರ್ ಹಾಗೂ ಹಾರಲು 300 ಮೀಟರ್ ವಿಷುವಲ್ ರೇಂಜ್‍ಗೆ ಪರವಾನಗಿ ಇರುತ್ತಿತ್ತು.
ಮಂಜು ಕುರಿತು ಅಧ್ಯಯನ: ವಿಮಾನ ನಿಲ್ದಾಣದ ಪ್ರದೇಶದಲ್ಲಿ ಹವಾಮಾನ ಸ್ಥಿತಿಗಳನ್ನು ಕುರಿತು ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್ಆರ್) ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ನಿಲ್ದಾಣದಲ್ಲಿ ವಿಕಿರಣಾತ್ಮಕ ಮಂಜು ಕವಿಯುವುದನ್ನು ಮುಂಚಿತವಾಗಿ ತಿಳಿಸುವ ಉಪಕರಣವನ್ನು ಅಭಿವೃದ್ಧಿಪಡಿಸಲು ಅಧ್ಯಯನ ನಡೆಯುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.