ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಮಿನಲ್‌-2: ಹೊರಗಡೆ ಥಳಕು, ಬಳಕು; ಒಳಗಡೆ ಹುಳುಕು!

ಪೂರ್ಣ ಗೊಳ್ಳದ ಕಾಮಗಾರಿ * ಹಲವು ಸಮಸ್ಯೆಗಳ ಹೊರತಾಗಿಯೂ ಪ್ರಶಸ್ತಿಗಳ ಗರಿ
Published 21 ಮೇ 2023, 5:09 IST
Last Updated 21 ಮೇ 2023, 5:09 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ –2 ಉದ್ಘಾಟನೆಗೊಂಡು ಆರು ತಿಂಗಳು ಕಳೆದರೂ ಸಮರ್ಪಕ ಸೇವೆ ನೀಡುವಲ್ಲಿ ವಿಫಲವಾಗಿದ್ದು, ಪ್ರಯಾಣಕರ ಟೀಕೆಗೆ ಗುರಿಯಾಗಿದೆ.

ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಯದೇ ತರಾತುರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಟರ್ಮಿನಲ್‌-2 ಇತ್ತಿಚ್ಚೇಗೆ ಸುರಿದ ಭಾರಿ ಮಳೆಯ ನೀರು ಚಾವಣಿ ಮೂಲಕ ಸೋರಿ ಲಾಂಜ್‌ನಲ್ಲಿ ಸಂಗ್ರಹವಾಗಿತ್ತು. ಇದರಿಂದ ವಿಮಾನ ನಿಲ್ದಾಣ ಆಡಳಿತ ಮುಜಗರಕ್ಕೆ ಒಳಗಾಗಿತ್ತು. 

ಇದೀಗ ಟ್ವಿಟ್ಟರ್‌ನಲ್ಲಿ ಸಾಲು ಸಾಲು ನೂನ್ಯತೆಗಳನ್ನು ಪ್ರಯಾಣಿಕರು ಬಯಲಿಗೆ ಎಳೆಯುತ್ತಿದ್ದು, ಅಪೂರ್ಣ ಕಾಮಗಾರಿಯ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಪ್ರತಿ ಬಾರಿ ಇಂತಹ ಆರೋಪ ಕೇಳಿ ಬಂದರೂ ಅದನ್ನು ಸರಿಪಡಿಸುವ ಭರವಸೆ ನೀಡಿದ್ದ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪ್ರಯಾಣಿಕರ ಅಸಮಾಧಾನ ಸರಿಪಡಿಸಲು ಸೋತಿದ್ದಾರೆ. 

ಉದ್ಯಾನ ನಗರದ ಪರಿಸರ ಪ್ರೀತಿ ಬಿಂಬಿಸುವಂತೆ ಇಡೀ ಟರ್ಮಿನಲ್‌-2 ಒಳಾಂಗಣವನ್ನು ಬಿದಿರಿನಿಂದ ವಿನ್ಯಾಸವನ್ನು ಮಾಡಲಾಗಿದೆ. ಇದಕ್ಕಾಗಿ ₹5 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಆದರೂ ಐಷರಾಮಿ, ನೆಮ್ಮದಿ ಅನುಭವವನ್ನು ಟರ್ಮಿನಲ್‌–2 ಪ್ರಯಾಣಿಕರಿಗೆ ನೀಡುತ್ತಿಲ್ಲ ಎಂಬುದೇ ಪ್ರಯಾಣಿಕರ ದೂರಾಗಿದೆ.

'ಟರ್ನಿನಲ್‌-2ರಲ್ಲಿ ನೀಡಲಾಗಿರುವ ವೆಂಟಿಲೇಷನ್‌ ರಂದ್ರಗಳು ಕೇವಲ ಕಲಾಕೃತಿಯಾಗಿದ್ದು, ಇಲ್ಲಿ ಇನ್ನೂ ಅದಕ್ಕೆ ಬೇಕಾಗಿರುವ ತಾಂತ್ರಿಕ ಉಪಕರಣ ಹಾಕಿಲ್ಲ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ಇದು ಆಶ್ಚರ್ಯಕರ ಸಂಗತಿ’ ಎಂದು ಅಭಿರುತ್‌ ಗುಪ್ತ ಟ್ವೀಟ್‌ ಮಾಡಿದ್ದಾರೆ.

ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಲಭಿಸುತ್ತಿಲ್ಲ. ಮೊಬೈಲ್‌ ಚಾರ್ಜ್ ಮಾಡಿಕೊಳ್ಳಲು ಅವಕಾಶವಿಲ್ಲ. ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಪೂರ್ಣ ಹದಗೆಟ್ಟಿದೆ ಸಾಕಷ್ಟು ಪ್ರಯಾಣಿಕರು ದೂರಿದ್ದಾರೆ. 

ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಗಳ ಕುರಿತು ನಿರಂತರವಾಗಿ ವಿಮಾನ ನಿಲ್ದಾಣಕ್ಕೆ ದೂರು ನೀಡುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಹಾಗಿದ್ದರೆ ₹5 ಸಾವಿರ ಕೋಟಿಯಷ್ಟು ದೊಡ್ಡ ಮೊತ್ತದ ಹಣವನ್ನು ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಸಮಸ್ಯೆಗಳ ಆಗರ ಟರ್ಮಿನಲ್‌ -2

ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ನಿಜಕ್ಕೂ ನಿರಾಸೆ ಮೂಡಿಸುತ್ತದೆ. ಮೊದಲು ವಿಮಾನ ನಿಲ್ದಾಣ ಸರಿಯಾಗಿ ಕಾರ್ಯಚರಣೆ ಮಾಡಬೇಕು. ಇಲ್ಲಿರುವ ಶೌಚಾಲಯ ಶೌಚಾಗೃಹಗಳ ನಿರ್ವಹಣೆ ಸಮರ್ಪಕವಾಗಿಲ್ಲ. ‘ಕಸದ ಬುಟ್ಟಿಗಳೇ ಕಾಣುವುದಿಲ್ಲ. ಹಸಿವನ್ನು ತಣಿಸಲು ತಕ್ಷಣ ಆಹಾರ ಸಿಗಲ್ಲ. ಇದಕ್ಕಿಂತ ಹಳೆಯ ಟರ್ಮಿನಲ್‌ 1 ಎಷ್ಟೇ ವಾಸಿ’ ಎಂದು ಕ್ಯಾರೋನಾ ಮಹಾಪಾತ್ರ ಎಂಬ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಟರ್ಮಿನಲ್‌-2ನಲ್ಲಿ ಸಿಗುವ ಆಹಾರ ಎರಡೂ ರೂಪಾಯಿ ಕೊಡಲು ಯೋಗ್ಯವಾಗಿಲ್ಲ’ ಎಂದು ರಿಶಬ್‌ ಶ್ರೀವಾತ್ಸವ್‌ ಎಂಬುವರು ಅಸಮಾಧಾನ ಹೊರಹಾಕಿದ್ದಾರೆ. 

ಮೊಬೈಲ್‌ ನೆಟ್‌ವರ್ಕ್‌ಗೆ ಪರದಾಟ!

ಟರ್ಮಿನಲ್‌-2ಕ್ಕೆ ಆಪ್ತರನ್ನು ಬರಮಾಡಿಕೊಳ್ಳಲು ಬರುವ ಬೆಂಗಳೂರಿಗರಿಗೆ ಮೊಬೈಲ್‌ ನೆಟ್‌ವರ್ಕ್‌ ದೊಡ್ಡ ಸಮಸ್ಯೆಯಾಗಿದೆ. ವಿಮಾನ ಲ್ಯಾಂಡ್ ಆದ ನಂತರವೂ ಮೊಬೈಲ್‌ ಮೂಲಕ ಪ್ರಯಾಣಿಕರನ್ನು ಸಂಪರ್ಕಿಸುವುದು ಕಷ್ಟ ಸಾಧ್ಯವಾಗಿದೆ. ಮೊಬೈಲ್‌ ಯುಗದಲ್ಲಿ ನೆಟ್‌ವರ್ಕ್ ಸಿಗದಂತಹ ಏಕೈಕ ವಿಮಾನ ನಿಲ್ದಾಣವೆಂದು ಕುಖ್ಯಾತಿಗೆ ಬೆಂಗಳೂರು ವಿಮಾನ ನಿಲ್ದಾಣ ಗುರಿಯಾಗಿದೆ. ತಮ್ಮ ಕುಟುಂಬ ಸದಸ್ಯರನ್ನು ನಿಲ್ದಾಣದಿಂದ ಮನೆಗೆ ಕರೆದೊಯ್ಯಲು ಬಂದ ಸಪ್ನ ಎಂಬುವವರಿಗೆ ಶುಕ್ರವಾರ ಮಧ್ಯಾಹ್ನ ಸತತ 2 ಗಂಟೆಯ ಕಾಲ ನೆಟ್‌ವರ್ಕ್‌ ಸಿಗದೇ ಪರದಾಡಿದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಹಾಯಕ್ಕಾಗಿ ಕೇಳಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಎಂ.ಡಿ.ಹರಿ ಮಾರನ್‌ ಅವರು ಟರ್ಮಿನಲ್‌ 2ರಲ್ಲಿ 5ಜಿ ಪ್ಲಸ್‌ ನೆಟ್‌ವರ್ಕ್‌ ಸೇವೆ ಒದಗಿಸುತ್ತಿದ್ದೇವೆ ಎಂದು ನವೆಂಬರ್ 3 ರಂದು ತಿಳಿಸಿದ್ದರು ಆದರೆ 6 ತಿಂಗಳು ಕಳೆದರೂ ನೆಟ್‌ವರ್ಕ್‌ ಸಿಗುತ್ತಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್ 2 –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಟರ್ಮಿನಲ್ 2 –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ಪ್ರಯಾಣಿಕರು 
ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ಪ್ರಯಾಣಿಕರು 
ಟರ್ನಿನಲ್‌-2ರಲ್ಲಿರುವ ವೆಂಟಿಲೇಷನ್‌ ರಂದ್ರಗಳು ತಾಂತ್ರಿಕ ಉಪಕರಣಗಳನ್ನು ಹಾಕದೆ ಕೇವಲ ಕಲಾಕೃತಿಯಾಗಿರುವುದು 
ಟರ್ನಿನಲ್‌-2ರಲ್ಲಿರುವ ವೆಂಟಿಲೇಷನ್‌ ರಂದ್ರಗಳು ತಾಂತ್ರಿಕ ಉಪಕರಣಗಳನ್ನು ಹಾಕದೆ ಕೇವಲ ಕಲಾಕೃತಿಯಾಗಿರುವುದು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT