ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈಸಿಸಿಪಿ, ಬಿಡದಿ ಘಟಕ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಿ: ಅಧಿಕಾರಿಗಳಿಗೆ ಜಾರ್ಜ್

Published 26 ಜೂನ್ 2024, 14:43 IST
Last Updated 26 ಜೂನ್ 2024, 14:43 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಸಮೀಪ ಸ್ಥಾಪನೆಯಾಗಿರುವ ರಾಜ್ಯದ ಪ್ರಥಮ ಅನಿಲ ಆಧಾರಿತ 370 ಮೆಗಾವಾಟ್‌ ಸಾಮರ್ಥ್ಯದ ‘ಯಲಹಂಕ ಸಂಯೋಜಿತ ಆವರ್ತ ವಿದ್ಯುತ್ ಘಟಕ’ವನ್ನು (ವೈಸಿಸಿಪಿ) ಜುಲೈ ಎರಡನೇ ವಾರದಲ್ಲಿ ಉದ್ಘಾಟಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಸೂಚಿಸಿದರು.

ಬುಧವಾರ ನಡೆದ ವೈಸಿಸಿಪಿ ಯೋಜನೆ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ‘2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಲಹಂಕ ಸಂಯುಕ್ತ ಆವರ್ತಕ ವಿದ್ಯುತ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಅವರೇ ಉದ್ಘಾಟಿಸಲಿದ್ದಾರೆ’ ಎಂದರು.

ಬಿಡದಿ ಯೋಜನೆಯೂ ಉದ್ಘಾಟನೆ: ಇದೇ ವೇಳೆ ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ‘ಜುಲೈ ಕೊನೆಯ ವಾರದಲ್ಲಿ ಈ ಘಟಕವನ್ನು ಲೋಕಾರ್ಪಣೆ ಮಾಡಲಾಗುವುದು’ ಎಂದು ತಿಳಿಸಿದರು.

ಕೆಪಿಸಿಎಲ್‌ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಆರಂಭವಾಗಿರುವ ₹250 ಕೋಟಿ ವೆಚ್ಚದ 600 ಟನ್‌ ತ್ಯಾಜ್ಯ ಸಂಸ್ಕರಿಸಿ 11.5 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಘಟಕದ ಎಲ್ಲ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ.

ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆ ಆರಂಭಿಸಿ, ಜುಲೈ ಕೊನೆ ವಾರದಲ್ಲಿ ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಸಿಎಲ್‌ನ ಹಣಕಾಸು ನಿರ್ದೇಶಕ ಆರ್.ನಾಗರಾಜ್, ತಾಂತ್ರಿಕ ನಿರ್ದೇಶಕ ಸಿ.ಎಂ.ದಿವಾಕರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT