ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಸಮುಚ್ಚಯ: ಕತ್ತಲಲ್ಲಿ 900 ಕುಟುಂಬಗಳು

ಹೊರವಲಯದ ಒಳ ಬೇಗುದಿ: ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಮನೆಗಳಿಗಿಲ್ಲ ಮೂಲಸೌಕರ್ಯ
Last Updated 29 ಜನವರಿ 2022, 4:08 IST
ಅಕ್ಷರ ಗಾತ್ರ

ಕೆ.ಆರ್.ಪುರ: ಸಾವಿರಾರು ರೂಪಾಯಿ ಹಣ ಪಾವತಿಸಿದರೂ ಶುದ್ಧ ಕುಡಿಯುವ ನೀರು ಬರುತ್ತಿಲ್ಲ. ಕಟ್ಟಡ ನಿರ್ಮಾಣವಾಗಿ ಐದು ವರ್ಷಗಳಾದರೂ ವಿದ್ಯುತ್ ಸಂಪರ್ಕ ಸಾಕಾರವಾಗಿಲ್ಲ. ಕೊಳವೆ ಬಾವಿ ಇದ್ದರೂ ನೀರು ತೆಗೆಯಲು ಯಂತ್ರ ಅಳವಡಿಸುವ ಹಾಗಿಲ್ಲ.

ಇವುಮಹದೇವಪುರ ವಿಧಾನಸಭೆ ಕ್ಷೇತ್ರದ ಕೊಡತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂಲಿಕುಂಟೆ ಸಮೀಪದಲ್ಲಿ ನೆಲೆಸಿರುವ 900 ಕುಟುಂಬಗಳ ಅಳಲು.ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯುರಾಜೀವ್ ಗಾಂಧಿ ವಸತಿ ಯೋಜನೆ ಅಡಿ 2017ರಲ್ಲಿ 900 ಮನೆಗಳನ್ನು ಇಲ್ಲಿ ನಿರ್ಮಿಸಿ, ಹಂಚಿಕೆ ಮಾಡಿದೆ. ಆದರೆ, ಈವರೆಗೂ ಅಗತ್ಯ ಮೂಲಸೌಕರ್ಯವನ್ನು ಅಲ್ಲಿ ಒದಗಿಸಿಲ್ಲ. ಇದರಿಂದ ಅಲ್ಲಿನ ನಿವಾಸಿಗಳು ಸಮಸ್ಯೆಗಳ ನಡುವೆಯೇ ದೈನಂದಿನ ಜೀವನ ನಡೆಸಬೇಕಾಗಿದೆ.

ಈ ವಸತಿ ಸಮುಚ್ಚಯದ ಸುತ್ತಮುತ್ತಲಿನ ವಾತಾವರಣವೂ ಹದಗೆಟ್ಟಿದೆ. ಇಲ್ಲಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಎಲ್ಲೆಂದರೆಲ್ಲಿ ಕಸಗಳನ್ನು ಎಸೆಯಲಾಗಿದೆ. ಕೊಳಚೆ ನೀರು ಹೋಗಲು ಸೂಕ್ತ ಒಳಚರಂಡಿ ವ್ಯವಸ್ಥೆಯೂ ಇಲ್ಲದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಭಯವೂ ಇಲ್ಲಿನವರಿಗೆ ಕಾಡಲಾರಂಭಿಸಿದೆ. ವಾಸವಿರುವ ಬಹುತೇಕ ಕುಟುಂಬಗಳು ದಿನಗೂಲಿ ಕೆಲಸವನ್ನೇ ನೆಚ್ಚಿಕೊಂಡಿವೆ. ಕಟ್ಟಡ ನಿರ್ಮಾಣವಾಗಿ ಐದು ವರ್ಷಗಳಾದರೂ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕುಟುಂಬಗಳು ಸ್ಥಳಾಂತರ: ಆರ್ಥಿಕ ದುರ್ಬಲ ವರ್ಗದವರಿಗೆ ಕೋರಮಂಗಲ ಸಮೀಪನಿರ್ಮಿಸಿದ್ದ ಇ.ಡಬ್ಲ್ಯೂ.ಎಸ್ ವಸತಿ ಸಮುಚ್ಚಯ ಕೆಲ ವರ್ಷಗಳ ಹಿಂದೆ ಶಿಥಿಲಗೊಂಡಿತ್ತು. ಹೀಗಾಗಿ, ಅಲ್ಲಿ ಎರಡು ದಶಕಗಳ ಕಾಲ ವಾಸವಿದ್ದ 900 ಕುಟುಂಬಗಳನ್ನುರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸುಸಜ್ಜಿತ ಸೂರು ಸಿಕ್ಕ ಸಂಭ್ರಮ ಅಲ್ಲಿನ ಕುಟುಂಬಗಳಿಗೆ ಈಗ ಇಲ್ಲವಾಗಿದೆ.

‘ಸರ್ಕಾರದ ಅಸಡ್ಡೆಯಿಂದಾಗಿ ಮೂಲ ಸೌಕರ್ಯಗಳು ಇಲ್ಲವಾಗಿವೆ. ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಕತ್ತಲಲ್ಲಿ ಜೀವನ ಕಳೆಯಬೇಕಾಗಿದೆ. ಕೋವಿಡ್‌ನಿಂದಾಗಿ ಶಾಲೆಗಳು ಸ್ಥಗಿತವಾಗಿದ್ದು, ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇಲ್ಲಿನ ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸ್ಮಾರ್ಟ್‌ಫೋನ್‌ ಖರೀದಿಸಿದರೂಅದನ್ನು ಚಾರ್ಜ್ ಮಾಡಲು ವಿದ್ಯುತ್ ಇಲ್ಲ. ಇದರಿಂದ ಮಕ್ಕಳ ಕಲಿಕೆಗೂ ತೊಡಕಾಗಿದ್ದು, ಅಧ್ಯಯನದಲ್ಲಿ ಹಿಂದೆ ಬೀಳುತ್ತಿದ್ದಾರೆ’ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

‘ದುಡಿದ ಹಣ ನೀರಿಗೆ ವೆಚ್ಚ’
‘ವಸತಿ ಸಮುಚ್ಚಯದಲ್ಲಿ ವಾಸಿಸುವ ಬಹುತೇಕ ಕುಟುಂಬಗಳು ದೈನಂದಿನ ದುಡಿಮೆಯನ್ನೇ ಅವಲಂಬಿಸಿವೆ. ನೀರಿನ ಸಂಪರ್ಕ ಇಲ್ಲದಿರುವುದರಿಂದದುಡಿದ ಹಣವೆಲ್ಲ ಕುಡಿಯುವ ನೀರಿಗಾಗಿ ವ್ಯಯ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಟ್ಯಾಂಕರ್ ನೀರಿಗೆ ₹ 600 ರಿಂದ ₹ 700 ಖರ್ಚು ಮಾಡುತ್ತಿದ್ದೇವೆ. ವಸತಿ ಸಮುಚ್ಚಯದಲ್ಲಿ 5 ಕೊಳವೆ ಬಾವಿ ಕೊರೆಯಲಾಗಿದೆ. ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಅವನ್ನು ಬಳಸಿಕೊಳ್ಳಲುಸಾಧ್ಯವಾಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಇರ್ಫಾನ್ ಆಕ್ರೋಶ ವ್ಯಕ್ತಪಡಿಸಿದರು.

‘ವಿದ್ಯುತ್ ಸಂಪರ್ಕಕ್ಕೆ ಕ್ರಮ’
‘ರಾಜೀವ್ ಗಾಂಧಿ ವಸತಿ ಸಮುಚ್ಛಯದಲ್ಲಿ ವಿದ್ಯುತ್ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈ ಮೊದಲು ಕೋರಮಂಗಲದಇ.ಡಬ್ಲ್ಯೂ.ಎಸ್ ವಸತಿ ಸಮುಚ್ಚಯದಲ್ಲಿ ವಾಸವಿದ್ದ ಕುಟುಂಬಗಳನ್ನು ಸೂಲಿಕುಂಟೆಯ ರಾಜೀವ್ ಗಾಂಧಿ ಸಮುಚ್ಛಯಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿನ ನಿವಾಸಿಗಳಿಗೆ ಬಿಬಿಎಂಪಿ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ನೀಡಿದ ಬಳಿಕಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು’ ಎಂದುಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ)ಚರಣ್ ರಾಜ್ ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

‘ಬದಲಾಗದ ಗುರುತಿನ ಚೀಟಿ’
‘ಈ ಮೊದಲು ವಾಸವಿದ್ದ ಇ.ಡಬ್ಲ್ಯೂ.ಎಸ್ ವಸತಿ ಸಮುಚ್ಚಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿತ್ತು.ಸೂಲಿಕುಂಟೆಗೆ ಸ್ಥಳಾಂತರಗೊಂಡ ಬಳಿಕ ನಮ್ಮ ಮತದಾನದ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆಯಾಗಿಲ್ಲ. ಅಧಿಕಾರಿಗಳ ಬಳಿ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿಕೊಂಡರೂ ಸ್ಪಂದನೆ ದೊರೆತಿಲ್ಲ. ಹೊಸದಾಗಿ ಮತದಾನದ ಗುರುತಿನ ಚೀಟಿಗಾಗಿ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಈವರೆಗೂ ಗುರುತಿನ ಚೀಟಿಯನ್ನು ನೀಡಿಲ್ಲ. ಇದರ ಹಿಂದೆ ರಾಜಕೀಯ ಹುನ್ನಾರ ಇರಬಹುದು’ ಎಂದು ವಸತಿ ಸಮುಚ್ಚಯದನಿವಾಸಿ ಲೂಯಿಸ್ ಪ್ಯಾಟ್ರಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT