ಭಾನುವಾರ, ಸೆಪ್ಟೆಂಬರ್ 26, 2021
21 °C
ವಾರ್ಡ್ ನೋಟ

ಕೆ.ಆರ್. ವಿಧಾನಸಭಾ ಕ್ಷೇತ್ರl ನಲ್ಲಿಯಲ್ಲಿ ನೀರಿಲ್ಲ, ಬಳಸಲಾಗದ ರಸ್ತೆ!

ಗುರು ಪಿ. ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಿಬಿಎಂಪಿ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಕೊರತೆ ಮತ್ತು ಹದಗೆಟ್ಟ ರಸ್ತೆಗಳ ಸಮಸ್ಯೆಯೇ ಎದ್ದು ಕಾಣುತ್ತದೆ. 110 ಹಳ್ಳಿಗಳ ಕುಡಿಯುವ ನೀರು ಪೂರೈಕೆ ಯೋಜನೆ ವ್ಯಾಪ್ತಿಗೆ ಬರುವ ವಾರ್ಡ್‌ನ ಗ್ರಾಮಗಳಲ್ಲಿ ಈ ಸಮಸ್ಯೆ ಇದ್ದರೆ, ಈ ಯೋಜನೆಗೆ ಒಳಪಡದ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯೇ ತಲೆನೋವಾಗಿದೆ. ನೂರು ಮನೆಗಳು ಇರಬೇಕಾದ ಜಾಗದಲ್ಲಿ 500ಕ್ಕೂ ಹೆಚ್ಚು ಮನೆಗಳು ತಲೆ ಎತ್ತಿದ್ದು, ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಎಲ್ಲೆಂದರಲ್ಲಿ ಕಾಣುವ ಕಸದ ರಾಶಿಯಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ವಾರ್ಡ್‌ಗಳ ಸ್ಥಿತಿಗತಿ ಬಗ್ಗೆ ಗುರು ಪಿ.ಎಸ್‌. ಬೆಳಕು ಚೆಲ್ಲಿದ್ದಾರೆ.

ರಾಮಮೂರ್ತಿನಗರ ವಾರ್ಡ್‌ –26

ಈ ವಾರ್ಡ್‌ನ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಪೈಪ್‌ಲೈನ್‌ ಅಳವಡಿಕೆ ಮುಗಿದಿರುವ ರಸ್ತೆಗಳನ್ನೂ ದುರಸ್ತಿ ಮಾಡಿಲ್ಲ. ಕುಡಿಯುವ ನೀರೂ ಸಿಗದೆ, ರಸ್ತೆಯೂ ಸರಿಯಾಗದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬಸ್‌ ಸಂಚಾರ, ಜನ ಸಂಚಾರ ಕಡಿಮೆಯಾಗಿರುವುದರಿಂದ ವ್ಯಾಪಾರವೂ ಇಲ್ಲ ಎಂದು ವರ್ತಕರು ಅಳಲು ತೋಡಿಕೊಳ್ಳುತ್ತಾರೆ. 

ಗ್ರೀನ್‌ ಗಾರ್ಡನ್‌, ಲೇಕ್‌ವ್ಯೂ ಗಾರ್ಡನ್‌, ಟ್ರಿನಿಟಿ ಬಡಾವಣೆ, ಬಂಜಾರ ಬಡಾವಣೆ, ಕನಕಗಿರಿ, ಪುಣ್ಯಭೂಮಿ ಬಡಾವಣೆ, ಗುಂಡಪ್ಪ ಬಡಾವಣೆ, ಕಲ್ಕೆರೆ, ಕನಕನಗರ, ಚನ್ನಸಂದ್ರ, ಎಂ.ವಿ. ನಗರ, ಶಾಂತಿ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ, ಬೋವಿ ಕಾಲೊನಿ, ಆಂಧ್ರ ಕಾಲೊನಿ, ರಾಜಕುಮಾರ್ ಬಡಾವಣೆ ಸುತ್ತ–ಮುತ್ತಲ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. 

ಕೆ.ಆರ್. ಪುರ ವಾರ್ಡ್‌– 52

110 ಹಳ್ಳಿಗಳ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಈ ವಾರ್ಡ್‌ನ ಯಾವುದೇ ಗ್ರಾಮಗಳಿಲ್ಲ. ಬಹುತೇಕ ರಸ್ತೆಗಳು ಉತ್ತಮವಾಗಿವೆ. ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ವಾರಕ್ಕೆ ಒಂದೆರಡು ಬಾರಿ ಮಾತ್ರ ನೀರು ಪೂರೈಸುತ್ತಿರುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. 

ಕೆ.ಆರ್. ಪುರ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದ ಬಡಾವಣೆಗಳು, ಗಣಪತಿ ದೇವಸ್ಥಾನ, ಭಟ್ರಹಳ್ಳಿ, ಹಳೆಯ ಆರ್‌ಟಿಒ ಕಚೇರಿ, ಟಿ.ಸಿ. ಪಾಳ್ಯ, ಆನಂದಪುರ ಈ ವಾರ್ಡ್‌ ವ್ಯಾಪ್ತಿಯಲ್ಲಿದ್ದು, ಅಕ್ಕ–ಪಕ್ಕದ ವಾರ್ಡ್‌ಗಳಿಗೆ ಹೋಲಿಸಿದರೆ ಇದು ಚಿಕ್ಕದು. 

ಎ.ನಾರಾಯಣಪುರ ವಾರ್ಡ್‌–56

ಒಂದು ರೀತಿಯಲ್ಲಿ ‘ಮಿನಿ ಇಂಡಿಯಾ’ದಂತೆ ಕಾಣುವ ವಾರ್ಡ್‌ ಇದು. ಎಲ್ಲ ಜಾತಿ–ಧರ್ಮದ ಜನ ಮಾತ್ರವಲ್ಲದೆ, ಕನ್ನಡ, ತಮಿಳು, ತೆಲುಗು, ಮಲಯಾಳಿ ಮತ್ತು ಹಿಂದಿ ಮಾತನಾಡುವ ಜನ ಇಲ್ಲಿದ್ದಾರೆ. ಪೈ ಲೇಔಟ್, ಉದಯನಗರ, ಎ. ನಾರಾಯಣಪುರ, ಆಂಧ್ರ ಕಾಲೊನಿ, ಶಕ್ತಿನಗರ, ವಿಜಯನಗರ ಕಾಲೊನಿ, ದರ್ಗಾ ಮೊಹಲ್ಲಾ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ.

ಕುಡಿಯುವ ನೀರಿನ ಸಮಸ್ಯೆ ಇಲ್ಲಿ ಹೆಚ್ಚಿಲ್ಲ. ಆದರೆ, ಒಳಚರಂಡಿ ಪೈಪ್‌ಗಳು ಚಿಕ್ಕದಾಗಿದ್ದು, ಮಲಿನ ನೀರು ರಸ್ತೆಯಲ್ಲಿ ಹರಿಯುವುದು ಸಾಮಾನ್ಯ ಎನ್ನುವಂತಾಗಿದೆ. ಕುಡಿಯುವ ನೀರು, ಒಳಚರಂಡಿ, ವಿದ್ಯುತ್‌ ಕೇಬಲ್‌ಗೆ ಹೀಗೆ ವಿವಿಧ ಉದ್ದೇಶಕ್ಕೆ ಪದೇ ಪದೇ ರಸ್ತೆಗಳನ್ನು ಅಗೆಯುತ್ತಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.

ಕಾವೇರಿ ನೀರಿನ ಟ್ಯಾಂಕ್‌ ಪಕ್ಕದಲ್ಲಿನ ಹನುಮಾನ್‌ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಆದರೆ, ವಾರ್ಡ್‌ನಲ್ಲಿ ಸಿಎ ನಿವೇಶನಗಳು ಇಲ್ಲದ ಕಾರಣ ಆಸ್ಪತ್ರೆ, ಸಮುದಾಯ ಭವನದಂತಹ ಸೌಲಭ್ಯಗಳು ಇಲ್ಲ. ಉದ್ಯಾನಗಳು, ಬೀದಿದೀಪ ವ್ಯವಸ್ಥೆ ಚೆನ್ನಾಗಿದೆ.

ವಿಜ್ಞಾನ ನಗರ ವಾರ್ಡ್‌ – 81

ಇಕ್ಕಟ್ಟಾದ ರಸ್ತೆಗಳು, ಒತ್ತು ಒತ್ತಾಗಿರುವ ಮನೆಗಳು ಈ ವಾರ್ಡ್‌ನಲ್ಲಿ ಕಂಡು ಬರುತ್ತವೆ. ಎರಡು ಮಹಡಿ ಇರಬೇಕಾದಲ್ಲಿ ನಾಲ್ಕು, ನಾಲ್ಕು ಮಹಡಿಗಳು ಇರಬೇಕಾದಲ್ಲಿ ಆರು ಮಹಡಿಗಳ ಕಟ್ಟಡಗಳು ಇಲ್ಲಿವೆ. ನೀರು, ಒಳಚರಂಡಿ, ಬೀದಿದೀಪದ ವ್ಯವಸ್ಥೆ ಮಾಡಲಾಗಿದ್ದರೂ, ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕ ಸೌಲಭ್ಯಗಳು ಆಗಿಲ್ಲ. ಕಸ ವಿಲೇವಾರಿ ಸಮಸ್ಯೆ ಇದ್ದು, ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಕಂಡು ಬರುತ್ತದೆ. 

ಎಸ್‌ಆರ್‌ಆರ್‌ ಬಡಾವಣೆ, ಎಂಇಜಿ ಬಡಾವಣೆ, ಲಕ್ಷ್ಮಿ, ಶಿವಗಂಗಾ, ನಾಗಪ್ಪ ರೆಡ್ಡಿ ಬಡಾವಣೆ, ವಿಜ್ಞಾನ ನಗರ, ವೀರಭದ್ರನಗರ ಒಂದು ಮತ್ತು ಎರಡನೇ ಹಂತ, ತಾಳಪ್ಪ ಬಡಾವಣೆ, ಎಲ್.ಬಿ. ಶಾಸ್ತ್ರಿ ನಗರ, ನಾಗರಾಜಪ್ಪ ಬಡಾವಣೆ, ಕಾವೇರಪ್ಪ ಬಡಾವಣೆ. ಅಂಕಪ್ಪ ರೆಡ್ಡಿ ಬಡಾವಣೆ, ರಾಮಯ್ಯರೆಡ್ಡಿ ಎ ಮತ್ತು ಬಿ ಸೆಕ್ಟರ್, ವಿಭೂತಿಪುರ ಈ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ.

‘₹60 ಕೋಟಿ ಕೆಲಸ ನಡೆಯುತ್ತಿದೆ’

ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಕಾರ್ಯ ಮುಗಿಯದೆ ಬೇರೆ ಯಾವ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಈವರೆಗೆ ಬಿಬಿಎಂಪಿಯಿಂದ ಒಟ್ಟು ₹14 ಕೋಟಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹60 ಕೋಟಿ ಅನುದಾನ ಬಂದಿದೆ.

– ಎಂ. ಪದ್ಮಾವತಿ ಶ್ರೀನಿವಾಸ್, ರಾಮಮೂರ್ತಿನಗರ

ರಸ್ತೆ ಅಗೆತವೇ ಸಮಸ್ಯೆ

ಒಂದೊಂದು ಉದ್ದೇಶಕ್ಕೆ ಒಮ್ಮೊಮ್ಮೆ ರಸ್ತೆ ಅಗೆಯುತ್ತಿರುವುದರಿಂದ ಸಮಸ್ಯೆಯಾಗಿದೆ. ಸರ್ಕಾರಿ ಸಂಸ್ಥೆಗಳ ನಡುವೆ ಸಂವಹನ ಕೊರತೆಯಿಂದ ಜನ ತೊಂದರೆ ಅನುಭವಿಸುವಂತಾಗಿದೆ. ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕರ್‌ ವ್ಯವಸ್ಥೆ ಮಾಡಿದ್ದೇವೆ. ಒಟ್ಟು ₹35 ಕೋಟಿ ವೆಚ್ಚದ ಕೆಲಸಗಳು ಪೂರ್ಣಗೊಂಡಿವೆ.

- ವಿ. ಸುರೇಶ್‌, ಎ. ನಾರಾಯಣಪುರ

ನೀರಿನ ಅಭಾವ ನೀಗಲು ಕ್ರಮ

ನಾಲ್ಕೂವರೆ ವರ್ಷಗಳಲ್ಲಿ ವಾರ್ಡ್‌ನಲ್ಲಿ ಶಟಲ್‌ ಕೋರ್ಟ್‌, ಗ್ರಂಥಾಲಯ, ಉದ್ಯಾನ ಅಭಿವೃದ್ಧಿ ಮಾಡಿದ್ದೇನೆ. ಒಟ್ಟು ₹40 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಕಾವೇರಿ ನೀರು ಪೂರೈಕೆಯೂ ಇದೆ. ಬೇಸಿಗೆಯಲ್ಲಿ ಅಭಾವ ಉಂಟಾಗದಂತೆ ಕ್ರಮ ವಹಿಸಲಾಗುತ್ತಿದೆ.

- ಕೆ. ಪೂರ್ಣಿಮಾ, ಕೆ.ಆರ್. ಪುರ

ಕೆರೆಗಳ ಅಭಿವೃದ್ಧಿ

ನೀರು, ಒಳಚರಂಡಿ, ಬೀದಿದೀಪ ಸೇರಿದಂತೆ ವಾರ್ಡ್‌ನಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ವಿಭೂತಿಪುರ, ಮಹದೇವಪುರ ಕೆರೆ ಅಭಿವೃದ್ಧಿಗೊಳಿಸಲಾಗಿದೆ. ವಾರ್ಡ್‌ಗೆ ನಾಲ್ಕೂವರೆ ವರ್ಷಗಳಲ್ಲಿ ಒಟ್ಟು ₹100 ಕೋಟಿ ಅನುದಾನ ಬಂದಿದ್ದು, ಈಗ ₹20 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ.

- ಎಸ್.ಜಿ. ನಾಗರಾಜ್‌, ವಿಜ್ಞಾನ ನಗರ

ವ್ಯಾಪಾರಕ್ಕೆ ಕುತ್ತು

ರಸ್ತೆಗಳು ಹದಗೆಟ್ಟಿದ್ದು, ಜನ–ವಾಹನ ಸಂಚಾರ ಇಲ್ಲದೆ ವ್ಯಾಪಾರ ಸಂಪೂರ್ಣ ಹಾಳಾಗಿದೆ. ಬಹಳಷ್ಟು ವಾಣಿಜ್ಯ ಮಳಿಗೆಗಳು ಸ್ಥಗಿತಗೊಂಡಿವೆ. ಅಕ್ಷಯನಗರದ ಟಿ.ಸಿ. ಪಾಳ್ಯ ಮುಖ್ಯರಸ್ತೆಯಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಇದ್ದು, ಹದಗೆಟ್ಟ ರಸ್ತೆಗಳಲ್ಲಿ ನೀರಿನ ಟ್ಯಾಂಕರ್‌ಗಳು ಕೂಡ ಇತ್ತ ಬರುತ್ತಿಲ್ಲ. 

- ಸುರೇಶ್‌, ರಾಮಮೂರ್ತಿನಗರ ವಾರ್ಡ್‌ ನಿವಾಸಿ

ಸೊಳ್ಳೆ ಕಾಟ ವಿಪರೀತ

ಇಡೀ ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ರಸ್ತೆಯ ಬದಿ ನಿತ್ಯ ಕೊಳಚೆ ನೀರು ಹರಿಯುತ್ತದೆ. ಸೊಳ್ಳೆ ಕಾಟ ಜಾಸ್ತಿ ಆಗಿದೆ. ದುರ್ವಾಸನೆ ಸಹಿಸಲು ಆಗುವುದಿಲ್ಲ. ಕೆಲವು ಕಡೆ ರಸ್ತೆಗಳು ಹಾಳಾಗಿದ್ದು, ವಾಹನದಲ್ಲಿ ಸಂಚರಿಸಲು ಸಾಹಸ ಮಾಡಬೇಕಾಗುತ್ತದೆ. ಬಸ್‌ಗಳು ಬರುತ್ತಿಲ್ಲ. 

- ಮಂಜು, ಕೆ.ಆರ್. ಪುರ ವಾರ್ಡ್‌ ನಿವಾಸಿ

ಸುಲಿಗೆಕೋರರ ಹಾವಳಿ

ವಾರ್ಡ್‌ನಲ್ಲಿ ರಾತ್ರಿ ವೇಳೆ ಸಂಚರಿಸುವವರಿಗೆ ಸೂಕ್ತ ರಕ್ಷಣೆ ಇಲ್ಲ. ಹಣಕ್ಕಾಗಿ, ಮೊಬೈಲ್‌ಗಾಗಿ ಪುಂಡರು ದಾಳಿ ಮಾಡುತ್ತಾರೆ. ಕೇವಲ ₹500ಕ್ಕಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಯಿತು. ಅವರ ಪತ್ನಿ, ಮಕ್ಕಳು ಈಗಲೂ ಸಂಕಷ್ಟ ಅನುಭವಿಸುತ್ತಿದ್ದಾರೆ. ವಾರ್ಡ್‌ನಲ್ಲಿ ಬೇರೆ ಯಾವುದೇ ಸಮಸ್ಯೆ ಇಲ್ಲ. 

- ಸೆಲ್ವಿ, ಎ.ನಾರಾಯಣಪುರ ವಾರ್ಡ್‌ ನಿವಾಸಿ

ವಿದ್ಯುತ್‌ ಕಡಿತ

ವಾರ್ಡ್‌ನಲ್ಲಿ ಸರಿಯಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಅಲ್ಲದೆ, ಕಸದ ವಿಲೇವಾರಿ ಸಮರ್ಪಕವಾಗಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ. 

- ರವಿಶಂಕರ್, ವಿಜ್ಞಾನ ನಗರ ವಾರ್ಡ್‌ ನಿವಾಸಿ

ವಾರ್ಡ್‌ನ ಪ್ರಮುಖ ಮೂರು ಸಮಸ್ಯೆಗಳು

26 – ರಾಮಮೂರ್ತಿ ನಗರ

* ಹದಗೆಟ್ಟಿರುವ ರಸ್ತೆಗಳು 

* ಕುಡಿಯುವ ನೀರಿನ ಅಭಾವ 

* ಅಸಮರ್ಪಕ ಕಸ ವಿಲೇವಾರಿ

52 – ಕೆ.ಆರ್. ಪುರ

* ಕುಡಿಯುವ ನೀರಿನ ಕೊರತೆ 

* ಹದಗೆಟ್ಟಿರುವ ರಸ್ತೆಗಳು

* ಸಂಚಾರ ದಟ್ಟಣೆ 

56 – ಎ. ನಾರಾಯಣಪುರ

* ಎಲ್ಲೆಂದರಲ್ಲಿ ಕಾಣುವ ಕಸದ ರಾಶಿ 

* ಕಾಮಗಾರಿಯಿಂದ ಹದಗೆಟ್ಟಿರುವ ರಸ್ತೆಗಳು 

* ಸುಲಿಗೆಕೋರರ ಹಾವಳಿ

81 – ವಿಜ್ಞಾನ ನಗರ

* ಪದೇ ಪದೇ ವಿದ್ಯುತ್ ಕಡಿತ

* ಅಸಮರ್ಪಕ ಒಳಚರಂಡಿ ವ್ಯವಸ್ಥೆ

* ಅಸಮರ್ಪಕ ಕಸ ವಿಲೇವಾರಿ

2011ರ ಜನಗಣತಿ ಪ್ರಕಾರ 

ವಾರ್ಡ್‌: ಜನಸಂಖ್ಯೆ

ರಾಮಮೂರ್ತಿ ನಗರ: 47,358

ಕೆ.ಆರ್. ಪುರ: 35,168

ಎ. ನಾರಾಯಣಪುರ: 43,358

ವಿಜ್ಞಾನ ನಗರ: 57,062

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು