ಗುರುವಾರ , ಮೇ 26, 2022
23 °C
ಕೃಷಿ ವಿಶ್ವವಿದ್ಯಾಲಯದಿಂದ ಹೊಸ ಸಂಪ್ರದಾಯಕ್ಕೆ ನಾಂದಿ

ಕೃಷಿ ಮೇಳಕ್ಕೆ ಆದಿವಾಸಿ ಮಹಿಳೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು (ಜಿಕೆವಿಕೆ) ಹೊಸ ಸಂಪ್ರದಾಯವೊಂದಕ್ಕೆ ಗುರುವಾರ ನಾಂದಿ ಹಾಡಿತು. ಆದಿವಾಸಿ ಕೃಷಿಕ ಮಹಿಳೆ ಪ್ರೇಮ ದಾಸಪ್ಪ ಅವರು 2021ನೇ ಸಾಲಿನ ಕೃಷಿ ಮೇಳಕ್ಕೆ ಚಾಲನೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಳ ಉದ್ಘಾಟಿಸಬೇಕಿತ್ತು. ಕೃಷಿ ಸಚಿವ ಬಿ.ಸಿ.‍‍ಪಾಟೀಲ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಬೇಕಿತ್ತು. ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು ಮೇಳಕ್ಕೆ ಬರಲಿಲ್ಲ. 

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನ ಸೊಳ್ಳೆಪುರ ಹಾಡಿಯ ಪ್ರೇಮ ಅವರು 4 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಮೂಲಕ ವಾರ್ಷಿಕ ₹5 ಲಕ್ಷ ನಿವ್ವಳ ಆದಾಯ ಗಳಿಸುತ್ತಿದ್ದಾರೆ. ಜೇನು ಸಾಕಣೆ ಹಾಗೂ ಅಣಬೆ ಬೇಸಾಯದ ಮೂಲಕವೂ ಹಲವರಿಗೆ ಮಾದರಿಯಾಗಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಪ್ರೇಮ ಅವರಿಂದ ಮೇಳ ಉದ್ಘಾಟಿಸಲು ನಿರ್ಧರಿಸಿತು. 

ಮೇಳವು ಒಟ್ಟು ನಾಲ್ಕು ದಿನ ನಡೆಯಲಿದ್ದು, ಮೊದಲ ದಿನ ಸುಮಾರು 15 ಸಾವಿರ ಮಂದಿ ಭಾಗಿಯಾಗಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಪ್ರಗತಿಪರ ರೈತರು ತಾವು ಸಾಕಿರುವ ಹೋರಿಗಳು, ವಿವಿಧ ತಳಿಯ ಕೋಳಿ ಹಾಗೂ ಕುರಿಗಳು ಹಾಗೂ ಅಭಿವೃದ್ಧಿಪಡಿಸಿರುವ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಅದಕ್ಕಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಒಟ್ಟು 560ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ.

₹3 ಲಕ್ಷ, ₹1.75 ಲಕ್ಷ ಮೌಲ್ಯದ ಹಳ್ಳಿಕಾರ್‌ ಹೋರಿಗಳು, ₹5 ಲಕ್ಷ ಮೌಲ್ಯದ ಡಾರ್ಪರ್‌ ತಳಿಯ ಟಗರು ಮೇಳದ ಆಕರ್ಷಣೆಯಾಗಿದ್ದವು. ಅವುಗಳ ಬೆಲೆ ಕೇಳಿ ಬಂದವರೆಲ್ಲಾ ಬೆರಗಾಗುತ್ತಿದ್ದರು. ಕಪ್ಪು ವರ್ಣದ ಖಡಕ್‌ನಾಥ್‌ ತಳಿಯ ಕೋಳಿ ಹಾಗೂ ಹುಂಜಗಳನ್ನು ನೋಡಲು, ಅವುಗಳ ಮರಿಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಅನೇಕರು ಕೃಷಿ ಯಂತ್ರೋಪಕರಣಗಳನ್ನು ನೋಡುತ್ತಿದ್ದ, ಅವುಗಳ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ದೃಶ್ಯಗಳೂ ಕಂಡುಬಂದವು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿರುವ 10 ಬಗೆಯ ಹೊಸ ಕೃಷಿ ತಳಿಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.