ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Krishi Mela 2023 |ಬರ: ರೈತರಿಗೆ ₹16 ಸಾವಿರ ಕೋಟಿ ನಷ್ಟ; ಸಿದ್ದರಾಮಯ್ಯ

ಕೃಷಿಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
Published 17 ನವೆಂಬರ್ 2023, 14:35 IST
Last Updated 17 ನವೆಂಬರ್ 2023, 14:35 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳೆ ವಿಮೆ ಪಾವತಿಸಿದ್ದರೂ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ನಷ್ಟ ಪರಿಹಾರ ದೊರೆಯುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಶುಕ್ರವಾರದಿಂದ ಆರಂಭವಾದ ಕೃಷಿಮೇಳ–2023ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರಿಗೆ ಸರ್ಕಾರವು ಸಹಾಯಧನ ನೀಡಬಹುದು. ಆದರೆ, ಬೆಳೆನಷ್ಟಕ್ಕೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ವಿಮಾ ಕಂಪನಿಗಳೂ ಪೂರ್ಣ ಪ್ರಮಾಣದಲ್ಲಿ ಬೆಳೆ ಪರಿಹಾರ ನೀಡುತ್ತಿಲ್ಲ’ ಎಂದು ಹೇಳಿದರು.

‘ಮುಂಗಾರು ಕೈಕೊಟ್ಟಿದ್ದರಿಂದ ರಾಜ್ಯದಲ್ಲಿ ₹ 33 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ನಷ್ಟವಾಗಿದೆ. ಅದರಲ್ಲಿ ಎನ್‌ಡಿಆರ್‌ಎಫ್‌ ಅಡಿ, ₹17,900 ಕೋಟಿಯಷ್ಟು ಪರಿಹಾರ ನೀಡಲು ಮಾತ್ರ ಸಾಧ್ಯವಾಗಲಿದೆ. ಉಳಿದಂತೆ ರೈತರಿಗೇ ₹16 ಸಾವಿರ ಕೋಟಿಯಷ್ಟು ಬೆಳೆ ನಷ್ಟವಾಗುತ್ತಿದೆ. ಈ ಮೊತ್ತವನ್ನು ಯಾರೂ ಭರಿಸುತ್ತಿಲ್ಲ’ ಎಂದು ಹೇಳಿದರು.

‘ಹಸಿರು ಕ್ರಾಂತಿ ನಿರಂತರವಾಗಿ ಆಗಬೇಕು. ಹೊಸ ತಳಿಗಳು, ಮಣ್ಣಿನ ಫಲವತ್ತತೆ, ತಂತ್ರಜ್ಞಾನ, ರೈತರಿಗೆ ನ್ಯಾಯಯುತ ಬೆಲೆ, ಆಹಾರ ಸಂಗ್ರಹಣೆಗೆ ಗೋದಾಮುಗಳು ಆಗಬೇಕು. ಆಗ ಮಾತ್ರ ಸುಸ್ಥಿರವಾದ ಕೃಷಿ ಬೆಳವಣಿಗೆ ಆಗುತ್ತದೆ’ ಎಂದು ಹೇಳಿದರು.

‘ಬರಗಾಲದ ಸಂದರ್ಭದಲ್ಲಿ ಉತ್ತಮ ಇಳುವರಿ ನೀಡುವ ತಳಿಗಳನ್ನು ಆವಿಷ್ಕರಿಸಿದರೆ ಕೃಷಿ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಮಳೆ ನೀರು ಸಂಗ್ರಹಿಸುವ ರೈತರಿಗೆ ಅನುದಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಕೃಷಿ ವಿಶ್ವವಿದ್ಯಾಲಯಗಳು ಕೇವಲ ಕೃಷಿ ಪದವೀಧರರನ್ನು ತಯಾರು ಮಾಡುವ ಸಂಸ್ಥೆಗಳಲ್ಲ. ಕೃಷಿ ವಿದ್ಯಾರ್ಥಿಗಳನ್ನು ತಯಾರಿಸುವ ಜೊತೆಗೆ ಸಂಶೋಧನೆಗಳಿಗೆ ಒತ್ತು ನೀಡಬೇಕು. ರಾಜಸ್ಥಾನ ಬಿಟ್ಟರೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣಭೂಮಿಯಿದೆ. ಕೃಷಿಯಿಂದ ವಿಮುಖರಾಗುವ ರೈತರ ಸಂಖ್ಯೆ ಹೆಚ್ಚುತ್ತಿದ್ದು, ಕೃಷಿಯನ್ನು ಲಾಭದಾಯಕ ಮಾಡುವತ್ತ ಕೃಷಿ ವಿಶ್ವವಿದ್ಯಾಲಯಗಳು ಮುಂದಾಗಬೇಕು’ ಎಂದು ಹೇಳಿದರು.

‘ಕಡಿಮೆ ನೀರು ಸಾಕಾಗುವ ಹಾಗೂ ರೋಗ ನಿರೋಧಶಕ್ತಿಯಿರುವ ತಳಿಗಳನ್ನು ಆವಿಷ್ಕಾರ ಮಾಡಬೇಕು’ ಎಂದು ಸೂಚನೆ ನೀಡಿದರು.‌

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಕೃಷಿಯನ್ನು ಲಾಭದಾಯಕ ಮಾಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಶಾಸಕ ಶರತ್‌ ಬಚ್ಚೇಗೌಡ, ಕುಲಪತಿ ಎಚ್‌.ವಿ.ಸುರೇಶ್‌ ಇದ್ದರು.

‘ಲಂಚವಿಲ್ಲದ ಕೆಲಸ ರೈತರದ್ದು’

‘ಸಂಬಳ ಬಡ್ತಿ ನಿವೃತ್ತಿ ವೇತನ ಲಂಚವಿಲ್ಲದ ಕೆಲಸ ರೈತರದ್ದು. ಕೃಷಿ ಕೆಲಸದಿಂದ ರೈತರಿಗೆ ನಿವೃತ್ತಿ ಎಂಬುದೂ ಇಲ್ಲ. ಹೇಗೋ ರೈತರು ಬದುಕು ನಡೆಸುತ್ತಿದ್ದಾರೆ. ಸರ್ಕಾರಗಳು ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ‌ ‘ನಗರಗಳತ್ತ ರೈತರ ವಲಸೆ ಹೆಚ್ಚಾಗಿದೆ. ಆಸ್ತಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ಶೇ 42ರಷ್ಟು ಮಂದಿ ನಗರಗಳತ್ತ ವಲಸೆ ಬಂದಿದ್ದಾರೆ’ ಎಂದು ಹೇಳಿದರು. ‘ಬರಗಾಲವಿರುವ ಕಾರಣ ನರೇಗಾ ಯೋಜನೆ ಮಾನವ ದಿನಗಳನ್ನು 100 ದಿನಗಳ ಬದಲು 150 ದಿನಗಳಿಗೆ ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು. ‘ನಮ್ಮ ರೈತರು ಇಡೀ ದೇಶಕ್ಕೆ ಮಾದರಿ’: ನೀರಿನ ಸದ್ಬಳಕೆ ಮತ್ತು ಭೂಮಿಯ ಫಲವತ್ತತೆಯನ್ನು ಕಾಪಾಡುವ ಬಗ್ಗೆ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಯ ರೈತರು ಇಡೀ ದೇಶಕ್ಕೆ ಮಾದರಿ ಆಗಿದ್ದಾರೆ. ರಾಮನಗರದ ರೈತರಿಗಿಂತ ಈ ಭಾಗದ ರೈತರು ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT