ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವೇಳೆ ಗ್ರಾಹಕರು, ವರ್ತಕರಿಗೆ ತೊಂದರೆ ಆಗಬಾರದು: ರಾಕೇಶ್ ಸಿಂಗ್‌

ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿ ಪರಿಶೀಲನೆ
Last Updated 19 ಜುಲೈ 2021, 19:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೃಷ್ಣರಾಜ ಮಾರುಕಟ್ಟೆಯ (ಕೆ.ಆರ್.ಮಾರುಕಟ್ಟೆ) ನವೀಕರಣ ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ವರ್ತಕರು ಹಾಗೂ ಗ್ರಾಹಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕೆ.ಆರ್.ಮಾರುಕಟ್ಟೆಯ ನವೀಕರಣ ಕಾಮಗಾರಿಯಯನ್ನು ಸೋಮವಾರ ಪರೀಶೀಲನೆ ನಡೆಸಿದ ಅವರು ಬೀದಿ ಬದಿ ವ್ಯಾಪಾರಿಗಳ ಜೊತೆಗೂ ಮಾತನಾಡಿದರು.

‘ನಿಮಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ವ್ಯವಸ್ಥಿತವಾದ ಸ್ಥಳದಲ್ಲಿ ವ್ಯಾಪಾರ ಮುಂದುವರಿಸಲು ಅವಕಾಶ ಮಾಡಿಕೊಡಲಾಗುವುದು. ಕಾಮಗಾರಿ ನಡೆಸಲು ಸಹಕರಿಸಬೇಕು. ಆಗ ಮಾತ್ರ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ’ ಎಂದು ವ್ಯಾಪಾರಿಗಳ ಮನವೊಲಿಸುವ ಪ್ರಯತ್ನ ನಡೆಸಿದರು.

ವ್ಯಾಪಾರಿಗಳು, ‘ಕಾಮಗಾರಿ ನಡೆಸಲು ಸಹಕರಿಸುತ್ತೇವೆ’ ಎಂದು ಭರವಸೆ ತಿಳಿಸಿದರು.

ಮಳೆನೀರು ಹರಿಸುವ ಚರಂಡಿಯ ಕಾಮಗಾರಿ ಪ್ರಗತಿಯಲ್ಲಿದೆ. ಮಾರುಕಟ್ಟೆಯ ನೆಲಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿಗಳಲ್ಲಿ ನೆಲಹಾಸು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಪಶ್ಚಿಮ ಪ್ರವೇಶದ್ವಾರದ ಬಳಿ ರ‍್ಯಾಂಪ್ ನಿರ್ಮಾಣ ಕೆಲಸ ನಡೆಯುತ್ತಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಅತಿ ಜನದಟ್ಟಣೆ ಇರುವ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಂಡಾಗ ಸಮಸ್ಯೆಗಳು ಸಹಜ. ಎದುರಾಗುವ ತೊಡಕುಗಳನ್ನು ಇತ್ಯರ್ಥಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇವೆ’ ಎಂದರು.

ಬೆಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಬಿಬಿಎಂಪಿಯ ಜಂಟಿ ಆಯುಕ್ತರಾದ ವೀರಭದ್ರಸ್ವಾಮಿ, ಶಿವಸ್ವಾಮಿ, ಸರ್ಫರಾಜ್ ಖಾನ್ ಹಾಗೂ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಉಪಸ್ಥಿತರಿದ್ದರು.

ಜಂಕ್ಷನ್ ಅಭಿವೃದ್ಧಿ: ಶೇ 60ರಷ್ಟು ಪೂರ್ಣ

ನಗರದ ಕೆ.ಆರ್.ಮಾರುಕಟ್ಟೆ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಶೇ 60 ರಷ್ಟು ಪೂರ್ಣಗೊಂಡಿದೆ. ಜಾಮೀಯಾ ಮಸೀದಿ ಬಳಿಯ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಮುಗಿದಿದೆ. ಇಲ್ಲಿನ ಬಸ್ ಟರ್ಮಿನಲ್ ಬಳಿ ಎರಡು ಪಾದಚಾರಿ ಮಾರ್ಗಗಳು ಹಾಗೂ ಎರಡು ಕ್ಯಾರಿಯೇಜ್ ವೇ ಕಾಮಗಾರಿಗಳಲ್ಲಿ ಒಂದು ಪಾದಚಾರಿ ಮಾರ್ಗ ಹಾಗೂ ಒಂದು ಕ್ಯಾರಿಯೇಜ್ ವೇ ಕೆಲಸ ಪೂರ್ಣಗೊಂಡಿದೆ. ಇನ್ನೊಂದು ಕಡೆಯ ಪಾದಚಾರಿ ಮಾರ್ಗದ ಕೆಲಸ ಪ್ರಗತಿಯಲ್ಲಿದೆ.

‘ಕ್ಯಾರಿಯೇಜ್‌ ವೇ ಬಳಿ ರಾಜಕಾಲುವೆಯ ಕಾಮಗಾರಿಯೂ ನಡೆಯುತ್ತಿದೆ. ಅದರ ಕೆಲಸ ಮುಗಿದ ಬಳಿಕ ಕ್ಯಾರಿಯೇಜ್ ವೇ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ಪಾದಚಾರಿ ಸುರಂಗಮಾರ್ಗದಲ್ಲಿ ವಾಟರ್ ಪ್ರೂಫಿಂಗ್ ಕಾಮಗಾರಿ ನಡೆಯುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅವೆನ್ಯೂ ರೆಸ್ತೆ: ಕಾಂಕ್ರೀಟೀಕರಣ ಬಾಕಿ

ಸ್ಮಾರ್ಟ್ ಸಿಟಿ ಯೋಜನೆ ಅಡಿ 1.80 ಕಿ.ಮೀ ಉದ್ದದ ಅವೆನ್ಯೂ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಯಲ್ಲಿ ಎರಡೂ ಕಡೆ ಒಳಚರಂಡಿ, ರಾಜಕಾಲುವೆ ಕಾಮಗಾರಿ, ವಿದ್ಯುತ್‌ ಕೇಬಲ್‌ ಹಾಗೂ ಒಎಫ್‌ಸಿ ಕೇಬಲ್‌ಗಳನ್ನು ಅಳವಡಿಸುವ ಡಕ್ಟ್ ಕಾಮಗಾರಿಗಳು ಪೂರ್ಣಗೊಂಡಿವೆ. ರಸ್ತೆಯ ಕಾಂಕ್ರೀಟೀಕರಣ ಮಾತ್ರ ಬಾಕಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT