ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಗುಂಪುಗಾರಿಕೆ ಗಲಭೆಗೆ ಕಾರಣ: ಈಶ್ವರಪ್ಪ

ಡಿ.ಜೆ. ಹಳ್ಳಿ ಗಲಭೆ ಕುರಿತು ಸಚಿವರ ಹೇಳಿಕೆ
Last Updated 19 ಆಗಸ್ಟ್ 2020, 21:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯಿಂದ ಡಿ.ಜೆ.ಹಳ್ಳಿಯಲ್ಲಿ ಗಲಭೆ ನಡೆದಿದೆ. ಪಕ್ಷದಲ್ಲಿನ ಈ ಗುಂಪುಗಾರಿಕೆಗೆ ಸಿದ್ದರಾಮಯ್ಯ ಪ್ರಮುಖ ಕಾರಣ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಸಿದ್ದರಾಮಯ್ಯ ಅವರಾಗಲಿ, ಡಿ.ಕೆ.ಶಿವಕುಮಾರ್‌ ಆಗಲಿ ನನ್ನ ಬೆಂಬಲಕ್ಕೆ ನಿಂತಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ನಾಚಿಕೆ ಆಗಬೇಕು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಂದಾಗಿ ಗುಂಪುಗಾರಿಕೆ ಹೆಚ್ಚಾಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ಬೇಕಾಬಿಟ್ಟಿ ಟ್ವೀಟ್‌‌ ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಕಾಂಗ್ರೆಸ್‌ ಪಕ್ಷ ಮುಳುಗಿಸುವುದು ನಿಶ್ಚಿತ’ ಎಂದು ಕುಟುಕಿದರು.

‘2013ರಲ್ಲಿ ಬಿಜೆಪಿ– ಕೆಜೆಪಿ ವಿಭಜನೆಯಿಂದ ಸಿದ್ದರಾಮಯ್ಯ ಆಕಸ್ಮಿಕವಾಗಿ ಮುಖ್ಯಮಂತ್ರಿ ಆದರು. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸುವ ಹುನ್ನಾರ ನಡೆದಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಾಲಿಶ. ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷವೂ ಮುಖ್ಯಮಂತ್ರಿ‘ ಎಂದರು.

ಗಲಭೆ ಪ್ರಕರಣ: ನಾಲ್ವರ ಬಂಧನ
ಗಲಭೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತೌಸಿಫ್, ಫಾಜಿಲ್, ಅಫ್ಜಲ್ ಹಾಗೂ ಪಾಷಾ ಬಂಧಿತರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಜೆಡಿಎಸ್ ಮುಖಂಡ ವಾಜಿದ್‍ನನ್ನು ಮಂಗಳವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಗಲಭೆಗೆ ಜನರನ್ನು ಕರೆತಂದಿದ್ದಾಗಿ ವಾಜಿದ್ ತಪ್ಪೊಪ್ಪಿಕೊಂಡಿದ್ದ. ವಾಜಿದ್ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಈ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರು ವಾಜಿದ್ ಸೂಚನೆ ಮೇರೆಗೆ ಹಿಂಸಾಚಾರಕ್ಕೆ ನಗರದ ಬೇರೆ ಬೇರೆ ಭಾಗಗಳಿಂದ ಜನರನ್ನು ಕರೆತರುವ ಹೊಣೆಗಾರಿಕೆ ಹೊತ್ತಿದ್ದರು. ಗಲಭೆ ಎಬ್ಬಿಸುವ ಉದ್ದೇಶದಿಂದಲೇ ನೂರಾರು ಜನರನ್ನು ಸಂಪರ್ಕಿಸಿದ್ದರು.

ಇದಕ್ಕಾಗಿ ಅವರಿಗೆ ಆರ್ಥಿಕ ನೆರವು, ಮೊಬೈಲ್, ವಾಹನ ವ್ಯವಸ್ಥೆ, ಜಾಮೀನು ಕೊಡಿಸುವುದು, ಬಂಧನಕ್ಕೊಳಗಾದರೆ ಕುಟುಂಬದವರಿಗೆ ಹಣಕಾಸಿನ ನೆರವು ನೀಡುವ ಆಮಿಷವೊಡ್ಡಿದ್ದರು ಎನ್ನಲಾಗಿದೆ. ವಿಚಾರಣೆ ವೇಳೆ ವಾಜಿದ್, 10 ಪ್ರಮುಖರ ಹೆಸರನ್ನು ಬಾಯ್ಬಿಟ್ಟಿದ್ದು, ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಆರು ಮಂದಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT