ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಎನ್‌ ನಿವಾಸ ಸ್ಮಾರಕವಾಗಿಸಲು ಕ್ರಮ: ಎಸ್‌.ರಂಗಪ್ಪ

Last Updated 24 ಮಾರ್ಚ್ 2021, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕಿಕ್ಕೇರಿಯಲ್ಲಿರುವ ಕೆ.ಎಸ್‌.ನರಸಿಂಹಸ್ವಾಮಿ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಹಾಗೂ 600 ಎಕರೆ ವ್ಯಾಪ್ತಿಯ ಕಿಕ್ಕೇರಿ ಕೆರೆಗೆ ಕೆಎಸ್‌ಎನ್‌ ಸರೋವರವೆಂದು ನಾಮಕರಣ ಮಾಡಿ ಅದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಸಚಿವರ ಜೊತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್‌.ರಂಗಪ್ಪ ಹೇಳಿದರು.

ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌ ಪ್ರಕಟಿಸಿರುವ ‘ಸಾತ್ವಿಕತೆಯ ಪ್ರತಿರೂಪ’, ‘ಇಹದ ತಳಹದಿಯಲ್ಲಿ ದಿಟದ ದರ್ಶನ’, ‘ಕೆ.ಎಸ್‌.ನರಸಿಂಹಸ್ವಾಮಿ ಸಾಹಿತ್ಯ ಸೂಚಿ’ ಹಾಗೂ ‘ಎಲ್ಲರಿಗೊಳಿತನುಬಯಸಲಿ ಕವನ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನರಸಿಂಹಸ್ವಾಮಿ ಅವರು ಜೀವನವನ್ನು ಸಂತೋಷದಿಂದ ಅನುಭವಿಸಿ, ತಮ್ಮ ಅನುಭವಗಳನ್ನು ಕಾವ್ಯ ಮತ್ತು ಕವಿತೆಗಳ ಮೂಲಕ ಜನರಿಗೆ ಉಣಬಡಿಸಿದ ಶ್ರೇಷ್ಠ ಕವಿ’ ಎಂದರು.

ಕೆ.ಎಸ್‌.ನರಸಿಂಹ ಸ್ವಾಮಿ ಟ್ರಸ್ಟ್‌ನ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ‘ಸಮಾಜದಲ್ಲಿ ಇಂದು ಎಲ್ಲೆಡೆ ದ್ವೇಷ, ಅಸಹನೆ, ಹಿಂಸೆ, ಸಿಟ್ಟು ತುಂಬಿದೆ. ಇಂತಹ ಹೊತ್ತಿನಲ್ಲಿ ಪ್ರೀತಿಯನ್ನು ಜೀವನ ಸಿದ್ಧಾಂತವಾಗಿ ಪ್ರತಿಪಾದಿಸಿದವರು ನರಸಿಂಹಸ್ವಾಮಿ. ಅವರು ಬದುಕಿಗೆ ಪ್ರೀತಿಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಪ್ರೀತಿ ಇದ್ದರೆ ದುಃಖ ಕೂಡ ಹಗುರವಾಗಿಬಿಡುತ್ತದೆ. ಪ್ರೀತಿಯು ಹಾಸ್ಯವಲ್ಲ ಅದೊಂದು ಸಿದ್ಧಾಂತ ಎಂಬುದನ್ನು ತಮ್ಮ ಕಾವ್ಯದ ಮೂಲಕ ತಿಳಿ ಹೇಳಿದ್ದಾರೆ’ ಎಂದರು.

‘ನಾವೆಲ್ಲ ಈಗ ಸುಖದ ಬೆನ್ನತ್ತಿದ್ದೇವೆ. ನರಸಿಂಹಸ್ವಾಮಿ ಅವರು ಇಡೀ ಬದುಕಿನಲ್ಲಿ ಬಡತವನ್ನು ಬೇರೆ ಬೇರೆ ನೆಲೆಗಳಲ್ಲಿ ಮುಖಾಮುಖಿಯಾದರೂ ಸಂತೋಷವನ್ನು ಹಂಚಿದರು. ಬಡತನದಲ್ಲೂ ಸಂತೋಷವಿದೆ ಎಂಬುದನ್ನು ತೋರಿಸಿಕೊಟ್ಟರು. ಹೀಗಾಗಿ ಅವರು ನಮಗೆ ಇವತ್ತಿಗೂ ಮುಖ್ಯವೆನಿಸುತ್ತಾರೆ’ ಎಂದು ಹೇಳಿದರು.

‘ಈಗ ಹೊರತಂದಿರುವ ಈ ನಾಲ್ಕೂ ಕೃತಿಗಳು ಅರ್ಥಗರ್ಭಿತವಾಗಿವೆ. ಇವನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಮುಂದೆ ಮಂಡಿಸಿ ಗ್ರಂಥಾಲಯಕ್ಕೆ ತೆಗೆದುಕೊಳ್ಳುತ್ತೇವೆ’ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಕುಮಾರ ಹೊಸಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT