ಗುರುವಾರ , ಏಪ್ರಿಲ್ 22, 2021
28 °C
ಮಧ್ಯಾಹ್ನದ ನಂತರದ ಪಾಳಿಗೆ ಗೈರು

ಸಾರಿಗೆ ಮುಷ್ಕರ: ಪರದಾಡಿದ ಪ್ರಯಾಣಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಮುನ್ನ ದಿನವೇ ನಗರದಲ್ಲಿ ಬಸ್ ಸಂಚಾರ ವಿರಳವಾಗಿ ಪ್ರಯಾಣಿಕರು ಪರದಾಡಿದರು.

ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಬನಶಂಕರಿ, ಸ್ಯಾಾಟಲೈಟ್ ಬಸ್‌ ನಿಲ್ದಾಣ, ಯಶವಂತಪುರ, ಕೆಂಗೇರಿ ಸೇರಿ ಹಲವು ನಿಲ್ದಾಣಗಳಲ್ಲಿ ಬಸ್‌ಗಳಿಲ್ಲದೆ ಜನ ಪರಿಪಾಟಲು ಅನುಭವಿಸಿದರು.‌

ಬೆಳಿಗ್ಗೆ ಜನರಲ್ ಶಿಫ್ಟ್‌ನಲ್ಲಿ ಕರ್ತವ್ಯ ಆರಂಭಿಸಿರುವ ಬಸ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿದ್ದವು. ಮಧ್ಯಾಹ್ನದ ನಂತರ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ, ರಾತ್ರಿ ತಂಗುವ ಕರ್ತವ್ಯ ನಿರ್ವಹಿಸುತ್ತಾರೆ. ಈ ಸಿಬ್ಬಂದಿ ಮಂಗಳವಾರ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ, ಮಧ್ಯಾಹ್ನದ ನಂತರ ಬಸ್‌ಗಳ ಕಾರ್ಯಾಚರಣೆ ಆರಂಭವಾಗಲಿಲ್ಲ. ಡಿಪೋಗಳಲ್ಲಿ ಬಸ್‌ಗಳು ನಿಂತಲ್ಲೇ ನಿಂತಿದ್ದವು.

ಇತ್ತ ಬಸ್ ನಿಲ್ದಾಣಗಳಲ್ಲಿ ಬರುತ್ತಿದ್ದ ಕೆಲವೇ ಬಸ್‌ಗಳಲ್ಲಿ ಪ್ರಯಾಣಿಕರು ಭರ್ತಿಯಾಗಿ ತುಂಬಿಕೊಳ್ಳುತ್ತಿದ್ದರು. ಕೋವಿಡ್‌ ನಿಯಮಾವಳಿ ಲೆಕ್ಕಿಸದೆ ಜನ ಬಸ್‌ಗಳಲ್ಲಿ ಪ್ರಯಾಣಿಸಿದರು. ರಾತ್ರಿಯಾದ ಬಳಿಕ ಆ ಬಸ್‌ಗಳ ಕಾರ್ಯಾಚರಣೆಯೂ ಸ್ಥಗಿತಗೊಂಡಿತು. ಬಸ್ ಇಲ್ಲದ ಕಾರಣ ಮೆಟ್ರೊ ರೈಲಿನಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.

ಬೇರೆ ಜಿಲ್ಲೆಗಳಿಂದ ಬರಬೇಕಿದ್ದ ಬಸ್‌ಗಳು ಮಂಗಳವಾರ ಸಂಜೆ ಬಳಿಕ ಕೆಂಪೇಗೌಡ ಬಸ್ ನಿಲ್ದಾಣ ಪ್ರವೇಶಿಸಲಿಲ್ಲ. ಬೇರೆ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಬಸ್‌ಗಳಿಲ್ಲದೆ ಪರದಾಡಿದರು. ಮುಷ್ಕರದ ಕಾರಣ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಕೋಡಿಹಳ್ಳಿ ವಿರುದ್ಧ ದೂರು
ಮುಷ್ಕರದ ನೇತೃತ್ವ ವಹಿಸಿರುವ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಎಂಟಿಸಿ ನೌಕರ ತ್ಯಾಗರಾಜ್ ಎಂಬುವರು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಅವರಿಗೆ ದೂರು ನೀಡಿದ್ದಾರೆ.

‘ಸಾರ್ವಜನಿಕರಿಗೆ ಸೇವೆ ನೀಡುವುದು ನಮ್ಮ ಧ್ಯೇಯ. ಮುಷ್ಕರದ ವೇಳೆ ಅಹಿತಕರ ಘಟನೆಗಳು ನಡೆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಹೊಣೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ರಾಜಕೀಯದ ದಾಳ ಆಗಬೇಡಿ: ನೌಕರರಿಗೆ ಮನವಿ

ಬೆಂಗಳೂರು: ಸಾರಿಗೆ ಸಂಸ್ಥೆ ಸಿಬ್ಬಂದಿ ರಾಜಕೀಯದ ಆಟದ ದಾಳವಾಗಬಾರದು. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಸಾರಿಗೆ ಸಿಬ್ಬಂದಿ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗಾಗಲೇ ವಸ್ತುಸ್ಥಿತಿಯನ್ನು ನೌಕರರಿಗೆ ತಿಳಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ತೆರವಾದ ಬಳಿಕ ವೇತನ ಪರಿಷ್ಕರಣೆ ಜಾರಿ ಮಾಡುವುದಾಗಿಯೂ ಹೇಳಿದ್ದಾರೆ. ಅವರ ಮೇಲೆ ವಿಶ್ವಾಸವಿಟ್ಟು ಮುಷ್ಕರ ಕೈಬಿಡಬೇಕು’ ಎಂದು ರವಿ ಮನವಿ ಮಾಡಿದರು.

ಮೆಟ್ರೊ ರೈಲುಗಳ ಸಂಚಾರ ಸಂಖ್ಯೆ ಹೆಚ್ಚಳ
ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಬಸ್‌ ಸಂಚಾರ ವ್ಯತ್ಯಯವಾಗುವ ನಿಟ್ಟಿನಲ್ಲಿ, ಬೆಂಗಳೂರು ಮೆಟ್ರೊ ರೈಲು ನಿಗಮವು ಬುಧವಾರ ಹೆಚ್ಚು ರೈಲುಗಳ ಸೇವೆ ಒದಗಿಸಲು ಮುಂದಾಗಿದೆ. ಅಂದರೆ, ರೈಲುಗಳ ನಡುವಿನ ಸಂಚಾರ ಸಮಯವನ್ನು ಅಥವಾ ಕಾಯುವ ಸಮಯವನ್ನು ತಗ್ಗಿಸಲಾಗಿದೆ.

ಏ.7ರಂದು ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ನೇರಳೆ ಮಾರ್ಗದಲ್ಲಿ 4.5 ನಿಮಿಷಕ್ಕೆ ಒಂದು, ಹಸಿರು ಮಾರ್ಗದಲ್ಲಿ 5 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಸಾಮಾನ್ಯ ದಿನಗಳಲ್ಲಿ ದಟ್ಟಣೆಯ ಅಲ್ಲದ ಸಂದರ್ಭದಲ್ಲಿ ನೇರಳೆ ಮಾರ್ಗದಲ್ಲಿ 10 ನಿಮಿಷಕ್ಕೊಂದು, ಹಸಿರು ಮಾರ್ಗದಲ್ಲಿ 12 ನಿಮಿಷಕ್ಕೊಂದು ರೈಲು ಸಂಚರಿಸುತ್ತಿತ್ತು.

ಸಾರ್ವಜನಿಕರು ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಬಳಸಿ ಪ್ರಯಾಣಿಸಬಹುದು. ಹೊಸ ಕಾರ್ಡ್‌ಗಳನ್ನು ಡೆಬಿಟ್‌ (ಎಟಿಎಂ) ಅಥವಾ ಕ್ರೆಡಿಟ್‌ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ಪಾವತಿಸಿ ನಿಲ್ದಾಣಗಳಲ್ಲಿ ಖರೀದಿಸಬಹುದು ಎಂದು ನಿಗಮ ಪ್ರಕಟಣೆಯಲ್ಲಿ ಹೇಳಿದೆ.

ಸಾರಿಗೆ ಮುಷ್ಕರಕ್ಕೆ ಆಪ್‌ ಬೆಂಬಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರಕ್ಕೆ ಆಮ್‌ ಆದ್ಮಿ ಪಕ್ಷ ಬೆಂಬಲ ಸೂಚಿಸಿದೆ.

‘ಸಾರಿಗೆ ಸಚಿವ ಲಕ್ಷ್ಮಣ ಸವದಿ ನೌಕರರೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕೆಲ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ನೌಕರರ ಬೇಡಿಕೆ ಈಡೇರಿಸಿದ್ದೇವೆಂದು ಜನರ ದಾರಿ ತಪ್ಪಿಸುತ್ತಿದ್ದಾರೆ. ನೌಕರರನ್ನು ಜೀತದಾಳುಗಳ ರೀತಿ ನಡೆಸಿಕೊಳ್ಳುತ್ತಿರುವ ಸರ್ಕಾರದ ನಡೆಯನ್ನು ಪಕ್ಷವು ಖಂಡಿಸುತ್ತದೆ’ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು