ಶನಿವಾರ, ಮೇ 21, 2022
23 °C
ಕಟ್ಟಡ ನಿರ್ಮಾಣ ಸಾಮಗ್ರಿ ದರ ಇಳಿಕೆ ಮಾಡಲು ಕಾರ್ಮಿಕರ ಆಗ್ರಹ

‘ದರ ಹೆಚ್ಚಳದಿಂದ ಉದ್ಯೋಗ ನಷ್ಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳದಿಂದ ಕಾಮಗಾರಿಗಳು ಅರ್ಧಕ್ಕೆ ನಿಲ್ಲುತ್ತಿವೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್’ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ‘ಕಟ್ಟಡ ನಿರ್ಮಾಣ ಸಾಮಗ್ರಿ ದರ ಇಳಿಕೆ ಮಾಡಿ’, ‘ಕಾರ್ಮಿಕರ ಕೆಲಸ ಕಿತ್ತುಕೊಳ್ಳಬೇಡಿ’, ‘ಕಾರ್ಮಿಕರಿಗೆ ಪರಿಹಾರ ನೀಡಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು.

‘ಸಿಮೆಂಟ್, ಕಬ್ಬಿಣ, ಎಲೆಕ್ಟ್ರಿಕಲ್, ಟೈಲ್ಸ್–ಮಾರ್ಬಲ್ಸ್‌, ಹೀಗೆ... ಪ್ರತಿಯೊಂದು ಸಾಮಗ್ರಿಯ ದರವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ನಿರ್ಮಾಣ ಕ್ಷೇತ್ರವೇ ಸಂಕಷ್ಟಕ್ಕೆ ಸಿಲುಕಿದೆ. ಕಟ್ಟಡ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ನಗರ ತೊರೆದು ಹಳ್ಳಿಗಳಿಗೆ ಹೋಗುತ್ತಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

‘ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಹೆಚ್ಚಳ ಮಾಡಿರುವುದೇ ದರ ಹೆಚ್ಚಳಕ್ಕೆ ಕಾರಣ. ಸಾಮಗ್ರಿ ಖರೀದಿಸಲು ಸಾಧ್ಯವಾಗದೇ ಬಹುಮಹಡಿ ಕಟ್ಟಡಗಳು, ಅಪಾರ್ಟ್‌ಮೆಂಟ್ ಸಮುಚ್ಛಯಗಳು ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಕೆಲಸಗಳು ನಿಂತಿವೆ. ದರವನ್ನು ಕೂಡಲೇ ಇಳಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮಂಡಳಿಯಲ್ಲಿ ಅಕ್ರಮ: ‘ಕಾರ್ಮಿಕರ ಅಭಿವೃದ್ಧಿಗಾಗಿ, ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ₹ 10 ಸಾವಿರ ಕೋಟಿ ಇದೆ. ಈ ಹಣದ ಬಳಕೆಯಲ್ಲಿ ಅಕ್ರಮವಾಗುತ್ತಿದ್ದು, ಇದರಲ್ಲಿ ಸಚಿವರು ಹಾಗೂ ಅಧಿಕಾರಿಗಳೂ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ
ತನಿಖೆ ನಡೆಯಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು