ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಸೊಗಡಿಲ್ಲ ಸಿಟಿ ಸೌಲಭ್ಯವಿಲ್ಲ

ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕುವೆಂಪುನಗರ, ಶೆಟ್ಟಿಹಳ್ಳಿಯಲ್ಲಿ ಮೂಲಸೌಲಭ್ಯ ಕೊರತೆ * ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ನಿವಾಸಿಗಳು
Last Updated 27 ನವೆಂಬರ್ 2019, 6:06 IST
ಅಕ್ಷರ ಗಾತ್ರ

ಕಾವೇರಿ ನೀರು ಕುಡಿಯುವ ನೀರಿನ ಯೋಜನೆಯಡಿ ಬರುವ 110 ಹಳ್ಳಿಗಳ ಪೈಕಿ, ಈ ವಾರ್ಡ್‌ನಲ್ಲಿ ಯಾವುದೇ ಗ್ರಾಮಗಳು ಇಲ್ಲ. ಹಾಗಾಗಿ, ಕಾವೇರಿ ನೀರು ಹಾಗೂ ಒಳಚರಂಡಿಗಾಗಿ ರಸ್ತೆ ಅಗೆಯಲಾಗಿಲ್ಲ. ಆದರೆ, ಅನಿಲ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಸದ್ಯ, ವಿದ್ಯಾರಣ್ಯಪುರ, ಸಪ್ತಗಿರಿ ಬಡಾವಣೆ, ದುರ್ಗಾ ಪರಮೇಶ್ವರಿ ಲೇಔಟ್‌ ಹಾಗೂ ತಿಂಡ್ಲು ಸುತ್ತಮುತ್ತ ಈ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಗೆಯಲಾಗುತ್ತಿದೆ. ಕಾಮಗಾರಿ ಮುಗಿದಿರುವ ರಸ್ತೆಗಳನ್ನು ತಕ್ಷಣಕ್ಕೆ ದುರಸ್ತಿ ಮಾಡದಿರುವುದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.

ಆರೇಳು ಉದ್ಯಾನಗಳಿದ್ದು, ಉತ್ತಮ ನಿರ್ವಹಣೆ ಇದೆ. ಎಚ್‌ಎಂಟಿಯಂತಹ ಪ್ರತಿಷ್ಠಿತ ಸಂಸ್ಥೆಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಕಸ ವಿಲೇವಾರಿ ಸಮಸ್ಯೆ ಇಲ್ಲ. ಆದರೆ, ಮಂಡೂರಿನಲ್ಲಿ ಪ್ರತಿಭಟನೆ ನಡೆದಾಗ ಇಲ್ಲಿ ಸಮಸ್ಯೆ ಉಂಟಾಗುತ್ತದೆ. ಸರ್ಕಾರಿ ಭೂಮಿಯಲ್ಲಿ ಫಲಾನುಭವಿಗಳಿಗೆ ಮನೆ ನೀಡಲಾಗಿದೆ. ಕೆಲವರಿಗೆ ಇನ್ನೂ ಹಕ್ಕುಪತ್ರ ನೀಡದಿರುವುದು ವಾರ್ಡ್‌ನ ಪ್ರಮುಖ ಸಮಸ್ಯೆ. ಜೊತೆಗೆ, ಹೆಚ್ಚು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿರುವುದರಿಂದ ಸಂಚಾರ ದಟ್ಟಣೆಯೂ ಹೆಚ್ಚು.

ಅಕ್ಕ–ಪಕ್ಕದ ವಾರ್ಡ್‌ಗಳಿಗೆ ಹೋಲಿಸಿದರೆ ಹೆಚ್ಚು ಅಭಿವೃದ್ಧಿ ಹೊಂದಿದ ವಾರ್ಡ್‌ನಂತೆ ಕಾಣುತ್ತದೆ ದೊಡ್ಡಬೊಮ್ಮಸಂದ್ರ. ಬಿಇಎಲ್‌
ನಂತಹ ಸಂಸ್ಥೆಗಳು ಈ ವಾರ್ಡ್‌ನಲ್ಲಿ ಸಿಎಸ್‌ಆರ್‌ ನಿಧಿಯಡಿ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿವೆ. ‘ಕಸ ಮುಕ್ತ ವಾರ್ಡ್‌’ ಎಂದು ಇದನ್ನು ಘೋಷಿಸಲಾಗಿದೆ. ಆದರೆ, ಅಕ್ಕ–ಪಕ್ಕದ ವಾರ್ಡ್‌ನವರು ರಾತ್ರಿ ವೇಳೆಯಲ್ಲಿ ಈ ವಾರ್ಡ್‌ನ ಖಾಲಿ ಜಾಗದಲ್ಲಿ ಕಸ ಸುರಿಯುವುದರಿಂದ ತೊಂದರೆ
ಯಾಗುತ್ತಿದೆ ಎಂದು ಪಾಲಿಕೆ ಸದಸ್ಯೆ ಹೇಳುತ್ತಾರೆ. ಈ ಸಮಸ್ಯೆ ಪರಿಹಾರಕ್ಕಾಗಿ ಮಾರ್ಷಲ್‌ಗಳನ್ನು ನೇಮಿಸಲಾಗಿದೆ. ಆದರೂ, ತಡರಾತ್ರಿ ಕಸ ಎಸೆದು ಹೋಗುತ್ತಾರೆ ಎಂದು ಹೇಳುತ್ತಾರೆ.

ವಾರ್ಡ್‌ನ ಕೆಲವು ಭಾಗದಲ್ಲಿ ರಸ್ತೆ ಅಗೆಯಲಾಗಿದೆ. ದುರಸ್ತಿ ಮಾಡಿಸಲು ಚುನಾವಣೆ ನೀತಿಸಂಹಿತೆ ನೆಪ ಸದಸ್ಯರ ಮುಂದಿದೆ. ಉಳಿದಂತೆ, ಉದ್ಯಾನಗಳನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಈ ವಾರ್ಡ್‌ ಅನ್ನು ಹೆಚ್ಚು ಬಾಧಿಸಿಲ್ಲ.

1970ರ ದಶಕದಲ್ಲಿ ಗುಡ್ಡಗಾಡು ಪ್ರದೇಶ
ದಂತಿದ್ದ ಕುವೆಂಪು ನಗರ ಈ ವಾರ್ಡ್‌ ಸ್ವರೂಪ ಪಡೆದಿದೆ. ತಮಿಳುನಾಡಿನಿಂದ ವಲಸೆ ಬಂದ ಹೆಚ್ಚಿನ ಜನರು, ಈಗ ಇಲ್ಲಿನ ನಿವಾಸಿಗಳೇ ಆಗಿದ್ದಾರೆ. ಸರ್ಕಾರ ಅವರಿಗೆ ಗೋಮಾಳದ ಜಾಗ
ನೀಡಿತ್ತು. ಆದರೆ, ಸಾವಿರಾರು ನಿವಾಸಿಗಳಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ. ಈ ವಾರ್ಡ್‌ ಸದಸ್ಯರ ಪ್ರಮುಖ ಬೇಡಿಕೆ ಇದು. 40 ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಶೌಚಾಲಯ, ಒಳಚರಂಡಿ, ನೀರು ಮತ್ತು ವಿದ್ಯುತ್‌ ಸಮಸ್ಯೆ ಈ ವಾರ್ಡ್‌ನಲ್ಲಿತ್ತು. ಈ ಸಮಸ್ಯೆ ಇನ್ನೂ ಹಾಗೆಯೇ ಇದೆ. ಕೆಲವು ಮುಖ್ಯರಸ್ತೆ ಹೊರತುಪಡಿಸಿದರೆ ಅಡ್ಡರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ಸಿಂಗಾಪುರ, ಎಂ.ಎಸ್. ಪಾಳ್ಯ, ವಿನಾಯಕನಗರ, ರಾಘವೇಂದ್ರ ಕಾಲೊನಿ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತದೆ.ಸೋಮಣ್ಣ ಲೇಔಟ್‌ 110 ಹಳ್ಳಿಗಳ ಯೋಜನೆ ವ್ಯಾಪ್ತಿಗೆ ಬರುತ್ತಿದ್ದು,
ಅಲ್ಲಿ ಒಳಚರಂಡಿ ಮತ್ತು ನೀರಿನ ಪೈಪ್‌
ಅಳವಡಿಕೆ ಕಾಮಗಾರಿ ನಡೆಯುತ್ತಿದೆ.

ಸಿಂಗಾಪುರದಲ್ಲಿ ಬಸ್‌ ನಿಲ್ದಾಣವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಆದರೆ, ಮಧ್ಯಾಹ್ನದ ನಂತರ ಹೆಚ್ಚು ಬಸ್‌
ಗಳು ಬರುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲದೆ, ಬಸ್‌ಗಳು ರಾತ್ರಿ ವೇಳೆ ಇಲ್ಲಿಯೇ ತಂಗಲು ವ್ಯವಸ್ಥೆ ಮಾಡಿದರೆ,
ರಾತ್ರಿ ಕೊನೆಯ ನಿಲ್ದಾಣದವರೆಗೆ ಬಸ್‌ ಸೌಲಭ್ಯ ದೊರಕಿದಂತಾಗುತ್ತದೆ ಎಂದು ಅವರು ಹೇಳುತ್ತಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ವಾರ್ಡ್‌ನ ಐದು ಹಳ್ಳಿಗಳು, 110 ಗ್ರಾಮಗಳ ಯೋಜನೆಯಡಿ ಬರುತ್ತವೆ. ಹೀಗಾಗಿ, ಒಳಚರಂಡಿ–ನೀರಿನ ಪೈಪ್‌ ಅಳವಡಿಕೆ ಕಾಮಗಾರಿಗಾಗಿ ವಾರ್ಡ್‌ ಉದ್ದಕ್ಕೂ ರಸ್ತೆಯನ್ನು ಅಗೆದು ಬಿಡಲಾಗಿದೆ. ಕೊಳವೆಗಳನ್ನು ಅಳವಡಿಸಿರುವ ರಸ್ತೆಗಳನ್ನು ಕೂಡ ದುರಸ್ತಿ ಮಾಡಿಸದ ಕಾರಣ ವಾಹನ ಸವಾರರು, ಪಾದಚಾರಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿ ಕೊರೆಸಿದ್ದರೂ ಸಾಕಷ್ಟು ನೀರು ಬರುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. 110 ಹಳ್ಳಿಗಳ ಯೋಜನೆ ವ್ಯಾಪ್ತಿಗೆ ಬಾರದಬಾಬಣ್ಣ, ಮಲ್ಲಸಂದ್ರ ಲೇಔಟ್‌ಗಳಲ್ಲಿ ಅಭಿವೃದ್ಧಿ ಕಾರ್ಯ ಸಾಗಿದೆ. ರಸ್ತೆ ಮತ್ತು ಉದ್ಯಾನಗಳು ಇಲ್ಲಿ ಉತ್ತಮವಾಗಿವೆ. ಶೆಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಅಟಲ್‌ ಬಿಹಾರಿ ವಾಜಪೇಯಿ ಉದ್ಯಾನವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ.

ಪಾದಚಾರಿ ಮಾರ್ಗ ಒತ್ತುವರಿ

ವಾರ್ಡ್‌ನಲ್ಲಿ ಕೆರೆಗಳ ಸುತ್ತ ಉದ್ಯಾನ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಾರೆ. ಉದ್ಯಾನ ಅಭಿವೃದ್ಧಿಯಾಗುತ್ತಿದೆ. ಆದರೆ, ಕೆರೆಗಳು ಮಾಯವಾಗುತ್ತಿವೆ. ಪ್ರತಿ ಮನೆಯವರೂ ಕೊಳವೆ ಬಾವಿ ಕೊರೆಸು
ತ್ತಿರುವುದರಿಂದ ಅಂತರ್ಜಲವೂ ಬರಿದಾಗುತ್ತಿದೆ. ಪಾದಚಾರಿ ಮಾರ್ಗವನ್ನು ಬೀದಿ ಬದಿ ಅಂಗಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಜನ ರಸ್ತೆಯಲ್ಲಿಯೇ ನಡೆದಾಡಬೇಕಾದ ಅನಿವಾರ್ಯ ಸ್ಥಿತಿ ಇರುವುದರಿಂದ ಸಂಚಾರ ದಟ್ಟಣೆ ಸಾಮಾನ್ಯ ಎನ್ನುವಂತಾಗಿದೆ.

ಶಾಂತಕುಮಾರ್, ವಿದ್ಯಾರಣ್ಯಪುರ ವಾರ್ಡ್‌ ನಿವಾಸಿ

ಕಸ–ರಸ್ತೆ ಗುಂಡಿಯೇ ತಲೆನೋವು

ಕಸ ತೆಗೆದುಕೊಂಡು ಹೋಗುವವರು ಎರಡುದಿನಕ್ಕೊಮ್ಮೆ ಬರುತ್ತಾರೆ. ಬಂದರೂ ಸರಿಯಾಗಿ ಕಸವನ್ನು ಸಂಗ್ರಹಿಸುವುದಿಲ್ಲ. ಖಾಲಿ ಇರುವ ಜಾಗದಲ್ಲಿ ನಾವು ಕಸ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು, ದೊಡ್ಡಬೊಮ್ಮಸಂದ್ರ–ವಿದ್ಯಾರಣ್ಯಪುರ ರಸ್ತೆ 30 ಅಡಿಯಷ್ಟು ಇದೆ. ಆದರೆ ಇಲ್ಲಿ ಹೆಚ್ಚು ವಾಹನ ಸಂಚಾರ ಇರುವುದರಿಂದ ಜನದಟ್ಟಣೆ ಹೆಚ್ಚಾಗುತ್ತದೆ. ತುರ್ತುಕೆಲಸವಿದ್ದಾಗ ಈ ರಸ್ತೆಯಲ್ಲಿ ಸಂಚಾರಿಸುವುದಕ್ಕೆ ತುಂಬಾತೊಂದರೆಯಾಗುತ್ತದೆ.

ಜೀಜಾಬಾಯಿ,ದೊಡ್ಡಬೊಮ್ಮಸಂದ್ರ ವಾರ್ಡ್‌ ನಿವಾಸಿ

ಹಕ್ಕುಪತ್ರದೊಂದಿಗೆ ಖಾತಾ ಬೇಕು

ಸರ್ಕಾರದಿಂದ ಮಂಜೂರಾದ ಜಾಗದಲ್ಲಿ ಮನೆ ಕಟ್ಟಿಸಿಕೊಂಡವರ ಸಂಖ್ಯೆ ಇಲ್ಲಿ ಹೆಚ್ಚಿದೆ. 1972ರಲ್ಲಿ ಮೈಸೂರು ಸರ್ಕಾರವಿದ್ದಾಗ 170 ಜನರಿಗೆ ಮತ್ತು 1978ರಲ್ಲಿ 125 ಜನರಿಗೆ ಹಕ್ಕುಪತ್ರ ನೀಡಲಾಗಿತ್ತು. ಅದಾದ ನಂತರ, ಈವರೆಗೆ ಯಾರಿಗೂ ಹಕ್ಕುಪತ್ರ ನೀಡಿಲ್ಲ. ಹಕ್ಕು ಪತ್ರ ನೀಡುವುದರ ಜೊತೆಗೆ ಖಾತಾ, ಕಂದಾಯ ಕೂಡ ಮಾಡಿಸಿಕೊಟ್ಟರೆ ಅನುಕೂಲ
ವಾಗುತ್ತದೆ. ಉಳಿದಂತೆ ಮುಖ್ಯರಸ್ತೆ ಹೊರತು ಪಡಿಸಿದರೆಅಡ್ಡರಸ್ತೆಗಳು ಒಂದೂ ಉತ್ತಮವಾಗಿಲ್ಲ. ಒಳಚರಂಡಿ ವ್ಯವಸ್ಥೆಸರಿ ಇಲ್ಲ.

ಆರ್. ದಾಸ್,ಕುವೆಂಪುನಗರ ವಾರ್ಡ್‌ ನಿವಾಸಿ

ಕೊಳವೆ ಬಾವಿ ಕೊರೆಸಲಾಗುವುದು

ವಾರ್ಡ್ ಅಭಿವೃದ್ಧಿಗೆ ₹5.5 ಕೋಟಿ ಬಿಡುಗಡೆಯಾಗಿದೆ. ಡಾಂಬರು ರಸ್ತೆ ಮಂಜೂರಾಗಿದ್ದು ಕೆಲಸ ನಡೆಯುತ್ತಿದೆ. ಉದ್ಯಾನ, ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ವಾರ್ಡ್‌ನಲ್ಲಿ ಅನಿಲ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಚುನಾವಣೆ ಇರುವುದರಿಂದ ಟೆಂಡರ್‌ ಎಲ್ಲ ಮುಂದಕ್ಕೆ ಹೋಗಿವೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಮತ್ತಷ್ಟು ಕೊಳವೆ ಬಾವಿ ಕೊರೆಸ
ಲಾಗುವುದು. ಅರ್ಹರಿಗೆ ಹಕ್ಕುಪತ್ರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು.

ಎಚ್. ಕುಸುಮಾ,ವಿದ್ಯಾರಣ್ಯಪುರ ವಾರ್ಡ್‌ ಸದಸ್ಯೆ

80 ಅಡಿ ರಸ್ತೆ ನಿರ್ಮಾಣ ಶೀಘ್ರ

ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ. ಮುಖ್ಯವಾಗಿ ದೊಡ್ಡಬೊಮ್ಮಸಂದ್ರ ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. 126 ಎಕರೆಯಲ್ಲಿರುವ ಈ ಕೆರೆ ಅಭಿವೃದ್ಧಿಗೆ ಒಟ್ಟು ₹8 ಕೋಟಿ ನೀಡಲಾಗಿದೆ. ಕೆರೆಯ ಬಳಿಯಲ್ಲಿ ಬಿಇಎಲ್‌ ಸಿಎಸ್‌ಆರ್‌ ನಿಧಿ ನೀಡಿದ್ದು ₹14 ಕೋಟಿ ವೆಚ್ಚದಲ್ಲಿ ಎಸ್‌ಟಿಪಿ ನಿರ್ಮಾಣವಾಗುತ್ತಿದೆ. ಮೂರು ತಿಂಗಳಲ್ಲಿ ಕೆರೆ ಸಂಪೂರ್ಣ ಅಭಿವೃದ್ಧಿಯಾಗಲಿದೆ. ದೊಡ್ಡಬೊಮ್ಮಸಂದ್ರ–ವಿದ್ಯಾರಣ್ಯಪುರ ನಡುವಿನ ಮುಖ್ಯರಸ್ತೆಯನ್ನು 80 ಅಡಿಗೆ ವಿಸ್ತರಿಸಲಾಗುವುದು. ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ಜಯಲಕ್ಷ್ಮಮ್ಮ ಪಿಳ್ಳಪ್ಪ,ದೊಡ್ಡಬೊಮ್ಮಸಂದ್ರ ವಾರ್ಡ್‌ ಸದಸ್ಯೆ

ಹಕ್ಕುಪತ್ರ ವಿತರಣೆಗೆ ಕ್ರಮ

3,500 ಜನರಿಂದ ಅರ್ಜಿ ಸ್ವೀಕರಿಸಿ ನಮ್ಮ ವಾರ್ಡ್‌ ಕಚೇರಿಯಲ್ಲಿಯೇ ಶಿಬಿರ ಮಾಡಿದ್ದೇವೆ. ಈ ಪೈಕಿ 70 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಅನುದಾನ ಕಡಿತಗೊಳಿಸಿರುವುದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತೊಂದರೆಯಾಗು
ತ್ತಿದೆ. ₹11 ಕೋಟಿ ಅನುದಾನದಲ್ಲಿ ಒಟ್ಟು ₹5.5ಕೋಟಿ ಬಿಡುಗಡೆಯಾಗಿದೆ. ಒಳಚರಂಡಿ, ಕಾವೇರಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಮುಗಿದ ಕಡೆಗಳಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಸಿಂಗಾಪುರಕ್ಕೆ ಹೆಚ್ಚುವರಿಯಾಗಿ
11 ಬಸ್‌ಸೇವೆ ಒದಗಿಸಲು ಮನವಿ ಮಾಡಿದ್ದೇನೆ.

ವಿ.ವಿ. ಪಾರ್ತಿಬರಾಜನ್‌,ಕುವೆಂಪು ನಗರ ವಾರ್ಡ್‌ ಸದಸ್ಯ

ಯಾವ ಕೆಲಸವೂ ನಡೆಯುತ್ತಿಲ್ಲ !

ಅನುದಾನ ಎಲ್ಲ ವಾಪಸ್‌ ಕಿತ್ತುಕೊಂಡಿದ್ದು, ನಮ್ಮ ವಾರ್ಡ್‌ನಲ್ಲಿ ಯಾವ ಕೆಲಸವೂ ನಡೆಯುತ್ತಿಲ್ಲ. ವಾರ್ಡ್‌ನ ಐದು ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಕೆ ಮತ್ತು ಒಳಚರಂಡಿ ಪೈಪ್‌ಲೈನ್‌ ಅಳವಡಿಕೆಗೆ ಜಲಮಂಡಳಿಯವರು ಎಲ್ಲ ರಸ್ತೆಗಳನ್ನು ಅಗೆದು ಹಾಕಿದ್ದಾರೆ. ರಸ್ತೆಗಳಿಗೆ ಡಾಂಬರು ಹಾಕಿಸಬೇಕು ಎಂದು ಕೇಳಿದರೂ ಅನುದಾನ ಎಲ್ಲ ಹಿಂತೆಗೆದುಕೊಂಡಿದ್ದಾರೆ ಎನ್ನುತ್ತಾರೆ. ಬಾಬಣ್ಣ ಬಡಾವಣೆ ಮತ್ತು ಮಲ್ಲಸಂದ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಮ್ಮ ಸರ್ಕಾರ (ಕಾಂಗ್ರೆಸ್‌) ಇದ್ದಾಗ ನೀಡಿದ್ದ ಅನುದಾನದಲ್ಲಿ ಅಭಿವೃದ್ಧಿ ಮಾಡಿದ್ದೇನೆ.

ಕೆ. ನಾಗಭೂಷಣ್‌,ಶೆಟ್ಟಿಹಳ್ಳಿ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT