ಬೆಂಗಳೂರು: ನಗರದ ರೈಲ್ವೆ ನಿಲ್ದಾಣಗಳಲ್ಲಿ ಪ್ಲ್ಯಾಟ್‌ಫಾರ್ಮ್‌ಗಳ ಕೊರತೆಯಿಂದಾಗಿ ಹಲವು ರೈಲುಗಳು ನಿಲ್ದಾಣ ಪ್ರವೇಶಿಸಲು ಹೊರಗೆ ಕಾಯುವಂತಾಗಿದೆ. ಪ್ರತ್ಯೇಕ ಟರ್ಮಿನಲ್ ನಿರ್ಮಿಸಲು ನಗರದಲ್ಲಿ ಜಾಗ ಸಿಗದ ಕಾರಣ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ.
ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಈ ಸಮಸ್ಯೆ ಇದ್ದರೂ ಕೆಎಸ್‌ಆರ್ ಬೆಂಗಳೂರು, ಯಶವಂತಪುರದಲ್ಲಿಯೇ ಹೆಚ್ಚು ಸಮಸ್ಯೆ ಕಾಡುತ್ತಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣವೂ ಈ ಸಮಸ್ಯೆಯಿಂದ ಹೊರತಾಗಿಲ್ಲ.
ಯಶವಂತಪುರ ಕಡೆಯಿಂದ ಕೆಎಸ್‌ಆರ್ ನಿಲ್ದಾಣಕ್ಕೆ ಬರುವ ರೈಲುಗಳು ಮಂತ್ರಿ ಮಾಲ್ ಬಳಿ, ಕಂಟೋನ್ಮೆಂಟ್ ಕಡೆಯಿಂದ ಬರುವ ರೈಲುಗಳು ಶಿವಾನಂದ ಸ್ಟೋರ್ ಬಳಿ, ಮೈಸೂರು ಕಡೆಯಿಂದ ಬರುವ ರೈಲುಗಳು ಮಾಗಡಿ ರಸ್ತೆ ಬಿನ್ನಿ ಮಿಲ್ ಗೇಟ್ ಬಳಿ ಕಾಯುತ್ತಾ ನಿಂತಿರುತ್ತವೆ. ಅದೇ ರೀತಿ ಯಶವಂತಪುರಕ್ಕೆ ಬೇರೆ ಬೇರೆ ಕಡೆಗಳಿಂದ ಬರುವ ರೈಲುಗಳು ಬಾಣಸವಾಡಿ, ಬ್ರಿಗೇಡ್ ಗೇಟ್ ವೇ ಬಳಿ, ಯಲಹಂಕ ಸಮೀಪದ ಸಿಗ್ನಲ್ ಬಳಿ ಕಾಯುತ್ತವೆ.
ಬಿಬಿಎಂಪಿ ಅಧೀನದಲ್ಲಿರುವ ಬಿನ್ನಿ ಮಿಲ್ ಜಾಗವನ್ನು ಪಡೆದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣವನ್ನು ವಿಸ್ತರಿಸುವ ಯೋಜನೆಯನ್ನು ನೈರುತ್ಯ ರೈಲ್ವೆ ಹಾಕಿಕೊಂಡಿತ್ತು. ಜಮೀನು ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡದೇ ಇರುವುದರಿಂದ ಈ ಯೋಜನೆ ಕಾರ್ಯಗತಗೊಳ್ಳುವುದು ಅನುಮಾನವಾಗಿದೆ.
‘ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದಂತೆ ರೈಲುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವು ಸಂದರ್ಭದಲ್ಲಿ ಅನಿವಾರ್ಯವಾಗಿ ರೈಲುಗಳನ್ನು ಹೊರಗೆ ನಿಲ್ಲಿಸಬೇಕಾಗುತ್ತದೆ’ ಎಂದು ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಸಿಗ್ನಲಿಂಗ್ ಇದ್ದಾಗಲೂ ಕಾಯುವಿಕೆ ಇರುತ್ತದೆ. ಕೆಎಸ್‌ಆರ್ ನಿಲ್ದಾಣದಿಂದ ಹೊರಟ ಒಂದು ರೈಲು ಮುಂದಕ್ಕೆ ಸಾಗುವವರೆಗೆ ಅದೇ ಮಾರ್ಗದಲ್ಲಿ ಬರುವ ಇನ್ನೊಂದು ರೈಲು ಹೊರಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.