ಶುಕ್ರವಾರ, ಮಾರ್ಚ್ 31, 2023
23 °C
ಪುನರುಜ್ಜೀವನದ ಹೆಸರಿನಲ್ಲಿ ಜೀವ ವೈವಿಧ್ಯಕ್ಕೆ ಹಾನಿ

ಬಟ್ಟಲಾಗುತ್ತಿರುವ ಕೆರೆಗಳು

ವಿಜಯಕುಮಾರ್‌ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆರೆ ಎಂದರೆ ಒಂದು ಭಾಗದಲ್ಲಿ ಏರಿ, ಉಳಿದ ಮೂರು ಭಾಗದಿಂದ ನೀರು ಹರಿದು ಬರುವ ದಾರಿ ಇರುವುದು ಸಾಮಾನ್ಯ. ಕೆ.ಆರ್. ಪುರ ಸಮೀಪದ ಭಟ್ರಹಳ್ಳಿ ಮತ್ತು ಹೂಡಿ ಕೆರೆಗಳು ಇದಕ್ಕೆ ಹೊರತಾಗಿವೆ. ಕೆರೆಗಳಿಗೆ ಹೀಗೆ ಬಟ್ಟಲಿನ ಆಕಾರ ನೀಡುವುದು ಜೀವ ವೈವಿಧ್ಯಕ್ಕೆ ನೀಡುವ ಬಹುದೊಡ್ಡ ಹೊಡೆತ ಎಂಬುದು ಪರಿಸರ ತಜ್ಞರ ಆಕ್ಷೇಪ.

ಕೆರೆಗಳನ್ನು ನಿರ್ಮಿಸಿರುವ ಪೂರ್ವಿಕರು ಯಾವುದೇ ಎಂಜಿನಿಯರಿಂಗ್ ವ್ಯಾಸಂಗ ಮಾಡಿದವರಲ್ಲ. ಮೂರ್ನಾಲ್ಕು ಕಡೆಗಳಿಂದ ನೀರು ಹರಿದು ಬರುವ ಹಳ್ಳ–ಕೊಳ್ಳಗಳನ್ನು ಗುರುತಿಸಿ ಅವುಗಳಿಗೆ ಅಡ್ಡಲಾಗಿ ತಗ್ಗು ಪ್ರದೇಶದಲ್ಲಿ ಏರಿ ನಿರ್ಮಿಸುತ್ತಿದ್ದರು. 

‘ಕೆರೆಯ ಏರಿ ಬಳಿ ಕನಿಷ್ಠ 10 ಅಡಿ ಆಳವಿದ್ದರೆ, ಸುತ್ತಲೂ ದಡದ ಅಂಚಿನಲ್ಲಿ ಒಂದು ಅಡಿ ನೀರು ಇರುತ್ತದೆ. ಕೆರೆಯ ಮಧ್ಯದ ಆಳವಾದ ನೀರನ್ನು ಒಂದು ಬಗೆಯ ಜಲಚರಗಳು ಮತ್ತು ಪಕ್ಷಿಗಳು ಆಶ್ರಯಿಸಿದ್ದರೆ, ಕೆರೆಯ ಅಂಚಿನ ಕಡಿಮೆ ಆಳದ ನೀರನ್ನು ಮತ್ತೊಂದು ರೀತಿಯ ಜಲಚರಗಳು ಮತ್ತು ಪಕ್ಷಿಗಳು ನಂಬಿಕೊಂಡಿರುತ್ತವೆ. ಶೇ 70 ಪಕ್ಷಿಗಳು, ಮೀನುಗಳು, ಕಪ್ಪೆಗಳು ಕಡಿಮೆ ಆಳದ ನೀರನ್ನೇ ಅವಲಂಬಿಸಿರುತ್ತವೆ. ಕೆರೆಯ ಸುತ್ತಲೂ ಹಲವು ಜೀವ ವೈವಿಧ್ಯ ಹೆಣೆದುಕೊಂಡಿರುತ್ತವೆ’ ಎಂದು ತಜ್ಞರು ಹೇಳುತ್ತಾರೆ.

‘ಆದರೆ, ನಗರದಲ್ಲಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅವುಗಳ ಸ್ವರೂಪವನ್ನೇ ಬದಲಿಸಿ ಬಟ್ಟಲುಗಳನ್ನಾಗಿ ಮಾರ್ಪಡಿಸಲಾಗುತ್ತಿದೆ. ಸುತ್ತಲೂ ಏರಿಗಳನ್ನು ನಿರ್ಮಿಸಿ ಮಧ್ಯದಲ್ಲಿ ನೀರು ತುಂಬಿಸಲಾಗುತ್ತಿದೆ. ಕೆರೆಗಳೆಂದರೆ ಸುತ್ತಮುತ್ತಲ ನಿವಾಸಿಗಳ ವಾಯುವಿಹಾರದ ಸ್ಥಳ ಎಂದಷ್ಟೇ ಪರಿಗಣಿಸಲಾಗುತ್ತಿದೆ. ಭಟ್ರಹಳ್ಳಿ ಮತ್ತು ಹೂಡಿ ಕೆರೆಯನ್ನು ಅಭಿವೃದ್ಧಿಪಡಿಸಿರುವ ಮಾದರಿಯೇ ಇದಕ್ಕೆ ಸಾಕ್ಷಿ’ ಎಂದು ’ನೀರಿನ ಹಕ್ಕಿಗಾಗಿ ಜನಾಂದೋಲನ‘ ಸಂಘಟನೆಯ ರಾಜ್ಯ ಸಂಚಾಲಕ ಎಂ.ಈಶ್ವರಪ್ಪ ಹೇಳುತ್ತಾರೆ.

‘ಈ ಎರಡೂ ಕೆರೆಗಳಿಗೆ ಒಂದು ಕಡೆ ಮಾತ್ರ ರಾಜಕಾಲುವೆಯನ್ನು ಚರಂಡಿಯಷ್ಟು ಸಣ್ಣ ಮಾಡಿ ನೀರು ಒಳ ಬರಲು ಅವಕಾಶ ನೀಡಲಾಗಿದೆ. ಒಳಚರಂಡಿ ನೀರು ಕೆರೆ ಸೇರುವುದನ್ನು ತಪ್ಪಿಸುವ ಕ್ರಮವೂ ಅವೈಜ್ಞಾನಿಕವಾಗಿದೆ. ಇದೇ ಮಾದರಿ ಅನುಸರಿಸಿದ ಕಾರಣಕ್ಕೆ ಕೆ.ಆರ್.ಪುರದ ವೆಂಗಯ್ಯನಕೆರೆ ಸಂಪೂರ್ಣವಾಗಿ ಹಾಳಾಗಿದೆ. ಅಭಿವೃದ್ಧಿಪಡಿಸಿದ ಕೆಲವೇ ವರ್ಷಗಳಲ್ಲಿ ನಿರುಪಯುಕ್ತವಾಗಿ ನಿಂತಿದೆ’ ಎನ್ನುತ್ತಾರೆ ಅವರು.

‌‘ನಗರದಲ್ಲಿ ಕೆರೆಯನ್ನು ಅಂತರ್ಜಲ ವೃದ್ಧಿ ಮತ್ತು ವ್ಯಾಯಾಮದ ಜಾಗ ಎಂದಷ್ಟೇ ಪರಿಗಣಿಸಲಾಗುತ್ತಿದೆ. ಸೌಂದರ್ಯಕ್ಕಷ್ಟೇ ಆದ್ಯತೆ ನೀಡಲಾಗುತ್ತಿದೆ. ಇದು ಮುಂದುವರಿದರೆ ಇನ್ನಷ್ಟು ಜೀವರಾಶಿಗಳು ನಮ್ಮಿಂದ ಕಣ್ಮರೆಯಾಗಲಿವೆ. ಅದು ಮುಂದೊಂದು ದಿನ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ’ ಎಂದು ಕೆರೆ ಸಂರಕ್ಷಣೆ ಹೋರಾಟಗಾರ ರಾಘವೇಂದ್ರ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು